ಮಂಗಳೂರು: ನಗರದ ಹೊರ ವಲಯದ ಹೊಸಬೆಟ್ಟು ಬಳಿಯ ಸೆಕೆಂಡ್ ಹ್ಯಾಂಡ್ ಕಾರುಗಳ ಮಾರಾಟ ಮಳಿಗೆಯಿಂದ ಎರಡು ಕಾರುಗಳನ್ನು ಕಳವುಗೈದ ಪ್ರಕರಣದಲ್ಲಿ ಸುರತ್ಕಲ್ ಪೊಲೀಸರು ಕಾನೂನಿನೊಡನೆ ಸಂಘರ್ಷಗೈದವನು ಸಹಿತ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಜುಲೈ 12ರಂದು ರಾತ್ರಿ ಹೊಸಬೆಟ್ಟಿನ ಕಾರು ಮಾರ್ಟ್‌ನಲ್ಲಿ ಕಳವು ಕೃತ್ಯ ನಡೆದಿತ್ತು. ಆರೋಪಿಗಳು ರೈನ್ ಕೋಟ್ ಹಾಗೂ ಹೆಲ್ಮೆಟ್ ಧರಿಸಿ ಕಚೇರಿಯ ಒಳನುಗ್ಗಿದ್ದು ಬಳಿಕ ಡ್ರಾವರ್ ನಿಂದ ಕೀ ಪಡೆದು ಕ್ರೆಟಾ ಮತ್ತು ಸ್ವಿಫ್ಟ್ ಕಾರನ್ನು ಎಗರಿಸಿದ್ದು ಸಿಸಿಟಿವಿಯಲ್ಲಿ ದಾಖಲಾಗಿತ್ತು. ಕಾರು ಮಳಿಗೆಯ ಮಾಲೀಕ ಅಬೀದ್ ಅಹ್ಮದ್ ಸೂರಲ್ಪಾಡಿ, ಈ ಬಗ್ಗೆ ಸುರತ್ಕಲ್ ಠಾಣೆಯಲ್ಲಿ ಕೇಸು ದಾಖಲಿಸಿದ್ದರು.
ಕಳವಾದ ಕಾರುಗಳ ಪತ್ತೆಗಾಗಿ ಪೊಲೀಸರು ಜುಲೈ 22ರಂದು ವಾಹನ ತಪಾಸಣೆ ನಡೆಸುತ್ತಿದ್ದಾಗ ಕಾನೂನಿನೊಡನೆ ಸಂಘರ್ಷಗೈದಾತ ಕಾರು ಚಲಾಯಿಸಿಕೊಂಡು ಬಂದು ಸಿಕ್ಕಿಬಿದ್ದಿದ್ದ. ತಪಾಸಣೆ ವೇಳೆ ಕಳವುಗೈದ ಕಾರು ಎಂದು ತಿಳಿದು ಬಂದಿದೆ. ಈತನಿಂದ ಇನ್ನೊಬ್ಬ ಆರೋಪಿಯ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ. ಆತ ನೀಡಿದ ಮಾಹಿತಿಯಂತೆ ಕಿನ್ನಿಪದವು ನಿವಾಸಿ ಮಹಮ್ಮದ್ ಶಫೀಕ್ (21) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಮರಕಡದಲ್ಲಿ ಬೈಕಿನಲ್ಲಿ ತೆರಳುತ್ತಿದ್ದಾಗ ಶಫೀಕ್ ನನ್ನು ಪೊಲೀಸರು ಬಂಧಿಸಿದ್ದು, ಬಳಿಕ ಕಳವುಗೈದು ತೊಕ್ಕೊಟ್ಟು ಬಸ್ ನಿಲ್ದಾಣ ಬಳಿ ಇರಿಸಿದ್ದ ಕ್ರೆಟಾ ಕಾರನ್ನು ವಶಕ್ಕೆ ಪಡೆದಿದ್ದಾರೆ. ಅಲ್ಲದೆ, ಕೃತ್ಯಕ್ಕೆ ಉಪಯೋಗಿಸಿದ್ದ ಸುತ್ತಿಗೆ, ರೇನ್ ಕೋಟ್, ಹೆಲ್ಮೆಟ್ ಹಾಗೂ ಇತರ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.
ಮಹಮ್ಮದ್ ಶಫೀಕ್ ಒಂದು ವರ್ಷದ ಹಿಂದೆ ಮೂಡುಬಿದಿರೆ ಠಾಣೆ ವ್ಯಾಪ್ತಿಯ ಕೆಸರುಗದ್ದೆ ಎಂಬಲ್ಲಿ ಮನೆಯಿಂದ ದ್ವಿಚಕ್ರ ವಾಹನ ಕಳವುಗೈದಿದ್ದು ಅದನ್ನೂ ವಶಕ್ಕೆ ಪಡೆಯಲಾಗಿದೆ. ಒಟ್ಟು ವಶಕ್ಕೆ ಪಡೆದ ವಾಹನಗಳ ಮೌಲ್ಯ 15 ಲಕ್ಷ ರೂ. ಆಗಿರುತ್ತದೆ. ಆರೋಪಿ ಶಫೀಕ್ ನನ್ನು ಪೊಲೀಸರು ಕೋರ್ಟಿಗೆ ಹಾಜರು ಪಡಿಸಿ ಮೂರು ದಿನ ಕಸ್ಟಡಿಗೆ ಪಡೆದಿದ್ದಾರೆ. ಸುರತ್ಕಲ್ ಇನ್ಸ್ ಪೆಕ್ಟರ್ ಮಹೇಶ್ ಪ್ರಸಾದ್ ನೇತೃತ್ವದಲ್ಲಿ ಪಿಎಸ್‌ಐಗಳಾದ ರಘು ನಾಯಕ್, ಅರುಣ್ ಕುಮಾರ್, ಎಎಸ್‌ಐ ತಾರಾನಾಥ, ಹೆಡ್ ಕಾನ್‌ಸ್ಟೇಬಲ್‌ಗಳಾದ ಅಣ್ಣಪ್ಪ, ಉಮೇಶ್, ಕಾನ್‌ಸ್ಟೇಬಲ್‌ಗಳಾದ ಉಮೇಶ್, ಕಾರ್ತಿಕ್, ಸುನಿಲ್, ಮಂಜುನಾಥ, ನಾಗರಾಜ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.