ಜಿಲ್ಲೆ

ಎರಡನೇ ದಿನವೂ ಪ್ರಯಾಣಿಕರ ಕೊರತೆ!

Belagavi

ಬೆಳಗಾವಿ: ಬೆಳಗಾವಿ ವಿಭಾಗ ವ್ಯಾಪ್ತಿಯಲ್ಲಿ ಬುಧವಾರ ಸಂಚರಿಸಿದ ಬಸ್‌ಗಳಿಗೆ ಎರಡನೇ ದಿನವೂ ಪ್ರಯಾಣಿಕರ ಕೊರತೆ ಕಾಡಿತು. ತುರ್ತು ಅಗತ್ಯ ಇರುವವರನ್ನು ಹೊರತುಪಡಿಸಿ, ಹೆಚ್ಚಿನ ಜನರು ಬಸ್‌ಗಳಲ್ಲಿ ಸಂಚರಿಸಲಿಲ್ಲ.
ವಿಭಾಗದ ಏಳು ಘಟಕಗಳಿಂದ ಬುಧವಾರ 112 ಬಸ್‌ಗಳು ಜಿಲ್ಲೆ ಮತ್ತು ಅಂತರ್‌ಜಿಲ್ಲೆಗಳಿಗೆ ತೆರಳಿವೆ.

ನಗರದಲ್ಲಿ 160 ಟ್ರಿಪ್ ಸಂಚರಿಸಿವೆ. ನಿರೀಕ್ಷಿಸಿದಷ್ಟು ಪ್ರಯಾಣಿಕರು ಆಗಮಿಸಿರಲಿಲ್ಲ. ಆದರೂ, ಮೊದಲ ದಿನಕ್ಕೆ ಹೋಲಿಸಿದರೆ, ಎರಡನೇ ದಿನ ಪ್ರಯಾಣಿಕರ ಸಂಖ್ಯೆ ತುಸು ಹೆಚ್ಚಿದೆ.

ಬೇಡಿಕೆ ಮೇರೆಗೆ, ರಾತ್ರಿ ವೇಳೆಯಲ್ಲೂ ಬೆಳಗಾವಿ ಕೇಂದ್ರ ಬಸ್ ನಿಲ್ದಾಣದಿಂದ ಬೆಂಗಳೂರು ಮತ್ತಿತರ ಮಹಾನಗರಗಳಿಗೆ ಬಸ್ ಬಿಡಲಾಗುತ್ತಿದೆ ಎಂದು ಸಾರಿಗೆ ಸಂಸ್ಥೆಯ ವಿಭಾಗೀಯ ಸಂಚಾರ ಅಧಿಕಾರಿ ಕೆ.ಕೆ. ಲಮಾಣಿ ತಿಳಿಸಿದ್ದಾರೆ.

ಡೀಸೆಲ್ ವೆಚ್ಚವೂ ಗಿಟ್ಟಿಲ್ಲ: ಸಾಮಾನ್ಯ ದಿನಗಳಲ್ಲಿ ಬೆಳಗಾವಿ ವಿಭಾಗಕ್ಕೆ ನಿತ್ಯ 70 ಲಕ್ಷ ರೂ. ಪ್ರಯಾಣ ಶುಲ್ಕ ರೂಪದಲ್ಲಿ ಸಂಗ್ರಹವಾಗುತ್ತಿತ್ತು. ಆದರೆ, ಮಂಗಳವಾರ ವಿಭಾಗ ವ್ಯಾಪ್ತಿಯಲ್ಲಿ ಸಂಚರಿಸಿದ ಬಸ್‌ಗಳಿಂದ ಕೇವಲ 1.75 ಲಕ್ಷ ರೂ. ಸಂಗ್ರಹವಾಗಿದೆ. ಹೀಗಾಗಿ ಸಂಚರಿಸಿದ ಬಸ್‌ಗಳ ಡೀಸೆಲ್ ವೆಚ್ಚವೂ ಗಿಟ್ಟಿಲ್ಲ ಎಂದು ಸಾರಿಗೆ ಅಧಿಕಾರಿಗಳು ತಿಳಿಸಿದ್ದಾರೆ.