ಆಲೂರು: ಒಂದೇ ಸರ್ಕಾರಿ ಕಾಮಗಾರಿಗೆ ಎರಡನೇ ಬಾರಿಗೆ ಬಿಲ್ ಪಾವತಿ ಮಾಡಿಕೊಳ್ಳಲು ಮುಂದಾಗಿರುವ ಗುತ್ತಿಗೆದಾರರ ವಿರುದ್ಧ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಹೋತನಹಳ್ಳಿಪುರ ಗ್ರಾಮದ ನಿವಾಸಿ ನಂದೀಶ್ ಆಗ್ರಹಿಸಿದ್ದಾರೆ.
ಬೈರಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೋತನಹಳ್ಳಿಪುರ ಗ್ರಾಮ ಮತ್ತು ಹಾಂಜಿಹಳ್ಳಿ ಗ್ರಾಮಗಳ ಮುಖ್ಯರಸ್ತೆಯಲ್ಲಿ ಮೂರು ವರ್ಷಗಳ ಹಿಂದೆ ಕಾಂಕ್ರಿಟ್ ರಸ್ತೆ ಮಾಡಲಾಗಿದೆ. ಅ ಸಂದರ್ಭದಲ್ಲಿ ಮೋರಿಗೆ ಸಿಮೆಂಟ್ ಪೈಪ್‌ಗಳನ್ನು ಹಾಕಲಾಗಿತ್ತು. ಆದರೆ ಈಗ ಆ ಪೈಪ್‌ನ ಎರಡು ಬದಿಯಲ್ಲಿ ಹೆಡ್ ವಾಲ್ ಅಳವಡಿಸಿ ಮೋರಿ ಕಟ್ಟಿದ್ದೇವೆ ಎಂದು 2024 25 ನೇ ಸಾಲಿಗೆ ಸೇರುವ 15ನೇ ಹಣಕಾಸಿನ ಯೋಜನೆಯಲ್ಲೂ ಬಿಲ್ ಪಡೆದುಕೊಳ್ಳಲು ಗುತ್ತಿಗೆಗಾರರೊಬ್ಬರು ಮುಂದಾಗಿದ್ದಾರೆ ಎಂದು ಅವರು ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ವಾಸ್ತವ ಅಂಶ ಎಂದರೆ ಸರ್ಕಾರದ ಒಂದೇ ಕಾಮಗಾರಿಗೆ ಎರಡೆರಡು ಬಾರಿ ಬಿಲ್ ಪಾವತಿ ಮಾಡಿಕೊಳ್ಳಬಹುದಾ ಎಂಬುದು ಪ್ರಶ್ನೆಯಾಗಿದೆ? ಅಲ್ಲದೆ ಜಿಲ್ಲಾ ಪಂಚಾಯಿತಿಯ ಇಂಜಿನಿಯರ್ ಸ್ಥಳ ಪರಿಶೀಲನೆಯನ್ನೇ ಮಾಡದೆ ಎಸ್ಟಿಮೇಶನ್ ಹಾಗೂ ಆಕ್ಷನ್ ಪ್ಲಾನ್ ರೆಡಿ ಮಾಡಿ ಕಾಮಗಾರಿ ನಡೆಸುತ್ತಿದ್ದಾರೆ. ಈ ಸಂಬಂಧ ಗ್ರಾಮ ಪಂಚಾಯಿತಿಗೆ ಅರ್ಜಿ ಹಾಕಿ ಈ ಕಾಮಗಾರಿ ಮಾಡುತ್ತಿರುವವರು ಯಾರು? ತಿಳಿಸಿ ಎಂದು ಕೇಳಿದರೆ ಯಾವುದೇ ಉತ್ತರ ನೀಡುತ್ತಿಲ್ಲ, ಸ್ಪಂದಿಸುತ್ತಿಲ್ಲ. ಕೂಡಲೇ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಹೋತನಹಳ್ಳಿಪುರದ ಗ್ರಾಮದ ನಿವಾಸಿಗಳಾದ ಅಭಿಷೇಕ್, ಸುನಿಲ್ ಇದ್ದರು.