ಜಿಲ್ಲೆ

ಮೈಸೂರು ರಂಗಾಯಣದಲ್ಲಿ ಸೆ. 25 ರಿಂದ ಅ.4 ದಸರಾ ರಂಗೋತ್ಸವ-2022

ಮೈಸೂರು: ರಂಗಾಯಣವು ದಸರಾ ರಂಗೋತ್ಸವ-2022 ಕಾರ್ಯಕ್ರಮವನ್ನು ಸೆ. 25ರಿಂದ ಅ.4ರವರೆಗೆ ಆಯೋಜಿಸಿದೆ ಎಂದು ರಂಗಾಯಂಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ತಿಳಿಸಿದರು.


ರಂಗಾಯಣದ ಭೂಮಿಗೀತ ರಂಗವೇದಿಕೆಯಲ್ಲಿ ಪ್ರತಿದಿನ ಸಂಜೆ 6.30ಕ್ಕೆ ನಾಟಕ ಪ್ರದರ್ಶನ ನಡೆಯಲಿದೆ. ದಸರೆಯ ನವರಾತ್ರಿಯಲ್ಲಿ ಮೈಸೂರಿನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಎಲ್ಲೆಡೆ ವಿಜೃಂಭಿಸುತ್ತವೆ. ಇದಕ್ಕೆ ಕಳಶವಿಟ್ಟಂತೆ ರಂಗಾಯಣ ಕೂಡ ದಸರಾ ರಂಗೋತ್ಸವವನ್ನು ಪ್ರತಿವರ್ಷ ಆಚರಿಸಿಕೊಂಡು ಬರುತ್ತಿದೆ. ಈ ಬಾರಿಯ ದಸರಾ ರಂಗೋತ್ಸವವನ್ನು ಮೈಸೂರು ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ ರಾಜಋಷಿ ಶ್ರೀ ಕೃಷ್ಣರಾಜೇಂದ್ರ ಒಡೆಯರ್ ಅವರ ನೆನಪಿನಲ್ಲಿ ಆಯೋಜಿಸಿದೆ ಎಂದರು.


25ರಂದು ಕೆ.ಪಿ. ಪೂರ್ಣಚಂದ್ರ ತೇಜಸ್ವಿ ರಚನೆಯ ‘ಕೃಷ್ಣೇಗೌಡನ ಆನೆ’ ನಾಟಕ ಪ್ರದರ್ಶನಗೊಳ್ಳಿದೆ. ಆರ್. ನಾಗೇಶ್ ನಿರ್ದೇಶನದಲ್ಲಿ ಮೈಸೂರು ರಂಗಾಯಣ ರೆಪರ್ಟರಿ ತಂಡ ಪ್ರಸ್ತುತಪಡಿಸಲಿದೆ. 26ರಂದು ಜಿ.ಕೆ.ನಂದಕುಮಾರ ರಚನೆ, ನಿರ್ದೇಶನದಲ್ಲಿ ಭಾರತೀಯ ರಂಗವಿದ್ಯಾಲಯ ತಂಡ ‘ಸಮರಕಥಾ’ ನಾಟಕವನ್ನು ಪ್ರಸ್ತುತಪಡಿಸಲಿದೆ.
27ರಂದು ಪಿ. ಲಂಕೇಶ್ ರಚನೆಯ ‘ಪೊಲೀಸರಿದ್ದಾರೆ ಎಚ್ಚರಿಕೆ’ ನಾಟಕವನ್ನು ನಾಗಾರ್ಜುನ ಆರಾಧ್ಯ ನಿರ್ದೇಶನದಲ್ಲಿ ಆಯಾಮ ರಂಗತಂಡ ಪ್ರಸ್ತುತಪಡಿಸಲಿದೆ. 28ರಂದು ಸುಧಾ ಆಡುಕಳ ರಚನೆಯ ‘ಮಾಧವಿ’ ನಾಟಕವನ್ನು ಶ್ರೀಪಾದಭಟ್ ನಿರ್ದೇಶನದಲ್ಲಿ ಕೈವಲ್ಯ ಕಲಾಕೇಂದ್ರ ತಂಡ ಪ್ರಸ್ತುತಪಡಿಸಲಿದೆ.


29ರಂದು ಶಶಿರಾಜ್ ಕಾವೂರ್ ರಚಿಸಿ ನಿರ್ದೇಶಿಸಿರುವ ‘ದಾಟ್ಸ್ ಆಲ್ ಯುವರ್ ಆನರ್’ ನಾಟಕವನ್ನು ರಂಗಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನ ತಂಡ ಪ್ರಸ್ತುತಪಡಿಸಲಿದೆ. 30ರಂದು ಮಾಕ್ಸಿಂ ಗಾರ್ಕಿ ರಚನೆಯ ‘ಈ ಕೆಳಗಿನವರು’ ನಾಟಕವನ್ನು ವೀಣಾ ಶರ್ಮ ಭೂಸನೂರಮಠ ನಿರ್ದೇಶನದಲ್ಲಿ ಎನ್.ಎಸ್.ಡಿ. ಬೆಂಗಳೂರು ತಂಡ ಪ್ರಸ್ತುತಪಡಿಸಲಿದೆ. ಅ. 1ರಂದು ಅರುಣ್ ಮಹೋಪಾಧ್ಯಾಯ ಅವರ ‘ಮಾರೀಚನ ಬಂಧುಗಳು’ ನಾಟಕವನ್ನು ವಾಲ್ಟರ್ ಡಿಸೋಜ ನಿರ್ದೇಶನದಲ್ಲಿ ಸ್ನೇಹರಂಗ ತಂಡ ಪ್ರಸ್ತುತಪಡಿಸಲಿದೆ. ಅ. 2ರಂದು ಅಡ್ಡಂಡ ಸಿ.ಕಾರ್ಯಪ್ಪ ರಚಿಸಿ ನಿರ್ದೇಶಿಸಿರುವ ‘ಹಲಗಲಿ ಸಮರ’ ನಾಟಕವನ್ನು ರಂಗಾಯಣ ರೆಪರ್ಟರಿ ತಂಡ ಪ್ರಸ್ತುತಪಡಿಸಲಿದೆ. 3 ರಂದು ಮೌನೇಶ್ ಬಡಿಗೇರ ರಚನೆಯ ‘ವಿಶಾಂಕೇ’ ನಾಟಕವನ್ನು ಮಂಜುನಾಥ ಎಲ್. ಬಡಿಗೇರ ನಿರ್ದೇಶನದಲ್ಲಿ ಉಡುಪಿ ರಂಗಭೂಮಿ ತಂಡ ಪ್ರಸ್ತುತಪಡಿಸಲಿದೆ. 4ರಂದು ಕುವೆಂಪು ಅವರ ಶ್ರೀರಾಮಾಯಣ ದರ್ಶನಂನ ಆಯ್ದಭಾಗ ‘ಮಮತೆಯ ಸುಳಿ’ ನಾಟಕವನ್ನು ಗಣೇಶ್ ಮಂದಾರ್ತಿ ನಿರ್ದೇಶನದಲ್ಲಿ ಮಂಗಳೂರಿನ ಕಲಾಭಿ ಥಿಯೇಟರ್ ಪ್ರಸ್ತುತಪಡಿಸಲಿದೆ. ಎಲ್ಲ ನಾಟಕಗಳಿಗೂ ಉಚಿತ ಪ್ರವೇಶ ಕಲ್ಪಿಸಲಾಗಿದೆ ಎಂದರು.


ದಸರಾ ರಂಗಗೌರವ ಪುರಸ್ಕಾರ:
ಅ. 4ರಂದು ಸಮಾರೋಪ ನಡೆಯಲಿದ್ದು, ಅಂದು ನಾಟಕಕಾರ ಡಾ.ನ. ರತ್ನ ಅವರಿಗೆ ‘ದಸರಾ ರಂಗಗೌರವ ಪುರಸ್ಕಾರ’ ನೀಡಲಾಗುತ್ತದೆ ಎಂದು ಅಡ್ಡಂಡ ಸಿ.ಕಾರ್ಯಪ್ಪ ತಿಳಿಸಿದರು.
ಸಮಾರೋಪ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್, ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನೀಲ್‌ಕುಮಾರ್, ಶಾಸಕ ಎಲ್.ನಾಗೇಂದ್ರ ಭಾಗವಹಿಸಲಿದ್ದಾರೆ ಎಂದರು.