ಜಿಲ್ಲೆ

ಸೆ. 1ರಂದು ವೀರನಹೊಸಹಳ್ಳಿಯಿಂದ ಗಜಪಯಣ ಆರಂಭ

ಅವಿನಾಶ್ ಜೈನಹಳ್ಳಿ

ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಗಜಪಯಣ ಕಾರ್ಯಕ್ರಮ ಸೆ.1ರಂದು ನಡೆಯಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಸರಾ ಮಹೋತ್ಸವಕ್ಕೆ 14 ಆನೆಗಳು ಬರಲಿವೆ. ಸೆ.1ರಂದು ಹುಣಸೂರು ತಾಲೂಕಿನ ವೀರನಹೊಸಹಳ್ಳಿಯಲ್ಲಿ ಸಾಂಪ್ರದಾಯಕವಾಗಿ ಗಜಪಯಣ ಆರಂಭವಾಗಲಿದೆ ಎಂದು ತಿಳಿಸಿದರು.

ದಸರಾಗೆ ವಿಶೇಷ ಅನುದಾನ ಕೇಳಿಲ್ಲ. ಅದ್ದೂರಿ ದಸರಾಗೆ ಬೇಕಾಗುವಷ್ಟು ಅನುದಾನ ಕೊಡುತ್ತೇವೆ. ದಸರಾ ಉದ್ಘಾಟಕರ ತೀರ್ಮಾನ ಸಿಎಂ ವಿವೇಚನೆಗೆ ಬಿಟ್ಟಿದ್ದೇವೆ. ಮುಖ್ಯಮಂತ್ರಿಯವರೇ ಉದ್ಘಾಟಕರ ಹೆಸರು ತೀರ್ಮಾನ ಮಾಡಲಿದ್ದಾರೆ ಎಂದರು.

ಪಕ್ಷದಲ್ಲಿ ಚರ್ಚೆ ಆಗಿಲ್ಲ


ಸಚಿವರನ್ನು ಲೋಕಸಭಾ ಚುನಾವಣೆಗೆ ನಿಲ್ಲಿಸುವ ಬಗ್ಗೆ ಕಾಂಗ್ರೆಸ್ ಪಕ್ಷದಲ್ಲಿ ಯಾವ ಚರ್ಚೆಯೂ ಆಗಿಲ್ಲ. ಇದರ ಬಗ್ಗೆ ಕೇವಲ ಮಾಧ್ಯಮಗಳಲ್ಲಿ ಸುದ್ದಿಗಳು ಬರುತ್ತಿವೆ ಅಷ್ಟೇ. ನಮಗೆ ಅಂಥ ಯಾವುದೇ ಸೂಚನೆ ಬಂದಿಲ್ಲ. ಪಕ್ಷದಲ್ಲೂ ಚರ್ಚೆಗಳು ನಡೆದಿಲ್ಲ. ನಡೆಯದೆ ಇರುವ ಚರ್ಚೆ ಮಾಧ್ಯಮಗಳಲ್ಲಿ ಹೇಗೆ ಸುದ್ದಿಯಾಯಿತು ಅಂಥ ಗೊತ್ತಿಲ್ಲ ಎಂದು ಮಹದೇವಪ್ಪ ಹೇಳಿದರು.


ಅವಕಾಶ ಸಿಕ್ಕರೆ ಸ್ಪರ್ಧೆ: ಕಳೆದ ಮೂರು ಚುನಾವಣೆಗಳಲ್ಲಿ ಸ್ಪರ್ಧಿಸಲು ಪುತ್ರ ಸುನೀಲ್ ಬೋಸ್‌ಗೆ ಅವಕಾಶ ಸಿಕ್ಕಿಲ್ಲ. ಆದರೂ ಆತ ಬೇಸರವಿಲ್ಲದೆ ಪಕ್ಷ ಸಂಘಟನೆ ಮಾಡುತ್ತಿದ್ದಾನೆ. ಈ ಬಾರಿ ಅವಕಾಶ ಸಿಕ್ಕರೆ ಸ್ಪರ್ಧೆ ಮಾಡುತ್ತಾನೆ. ಈ ಬಗ್ಗೆಯೂ ಪಕ್ಷದಲ್ಲಿ ಯಾವುದೇ ಚರ್ಚೆಗಳು ನಡೆದಿಲ್ಲ ಎಂದು ಸ್ಪಷ್ಟಪಡಿಸಿದರು.