ಬೆಂಗಳೂರು ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಕಾಲೇಜು (ಯುವಿಸಿಇ) ಅನ್ನು ಐಐಟಿ ಮಾದರಿಯಲ್ಲಿ ಅಭಿವೃದ್ಧಿಪಡಿಸುತ್ತಿರುವ ಕಾರಣ ಶೇ.25 ಸೀಟುಗಳನ್ನು ಜೆಇಇ ಮೂಲಕ ತುಂಬಬೇಕಿದೆ. ಈ ಸೀಟುಗಳನ್ನು ಕನ್ನಡಿಗರಿಗೆ ನೀಡಲು ಸಾಧ್ಯವೇ ಎಂದು ಚಿಂತನೆ ನಡೆಸಲಾಗುತ್ತಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ತಿಳಿಸಿದರು.
ಗುರುವಾರ ಉನ್ನತ ಶಿಕ್ಷಣ ಪರಿಷತ್ತಿನಲ್ಲಿ ನಡೆದ ಸಭೆಯ ಬಳಿಕ ಮಾತನಾಡಿದ ಅವರು, ಕಳೆದ ವಾರ ಮೂರು ದಿನಗಳ ಗಾಂಧಿನಗರ (ಗುಜರಾತ್) ಐಐಟಿಗೆ ಭೇಟಿ ನೀಡಲಾಗಿತ್ತು. ಅಲ್ಲಿನ ಹಲವು ವಿಷಯಗಳನ್ನು ಅಳವಡಿಸಿಕೊಳ್ಳಲಾಗುತ್ತದೆ ಎಂದು ಹೇಳಿದರು.
ಪ್ರಸ್ತುತ ಯುವಿಇಸಿಗೆ ಶೇ.100 ಸೀಟುಗಳನ್ನು ಸಿಇಟಿ ಮೂಲಕ ತುಂಬಲಾಗುತ್ತಿದೆ. ಐಐಟಿ ಮಾದರಿ ಅಭಿವೃದ್ಧಿಪಡಿಸುತ್ತಿರುವ ಕಾರಣ, ಮುಂದಿನ ವರ್ಷದಿಂದ ಶೇ.25 ಸೀಟುಗಳನ್ನು ಜೆಇಇ ಮೂಲಕ ಭರ್ತಿ ಮಾಡಬೇಕಾಗುತ್ತದೆ. ಇದರಲ್ಲಿ ಶೇ.10 ಸೀಟುಗಳನ್ನು ರಾಜ್ಯದ ವಿದ್ಯಾರ್ಥಿಗಳಿಗೆ ನೀಡಲು ಕಾನೂನಿನಲ್ಲಿ ಅವಕಾಶವಿದೆಯೇ ಎಂಬುದನ್ನು ತಿಳಿಯಲಾಗುತ್ತಿದೆ ಎಂದು ಹೇಳಿದರು.
ಯುವಿಸಿಇ ಹೊಸ ಕ್ಯಾಂಪಸ್ ಅನ್ನು ಜ್ಞಾನಭಾರತಿ ಆವರಣದಲ್ಲಿನ 50 ಎಕರೆ ಪ್ರದೇಶದಲ್ಲಿ 500 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಸದ್ಯ ಸರ್ಕಾರ 100 ಕೋಟಿ ರೂ. ನೀಡಲು ಒಪ್ಪಿಗೆ ನೀಡಿದೆ. ಉಳಿದ ಅನುದಾನವನ್ನು ಪ್ರತಿ ವರ್ಷ ನೀಡಲಿದೆ. ಕೇವಲ ಕಟ್ಟಡ ಮಾತ್ರವಲ್ಲ, ಪಠ್ಯಕ್ರಮ, ಪ್ಲೇಸ್‌ಮೆಂಟ್, ಬೋಧನಾ ಗುಣಮಟ್ಟದಲ್ಲಿಯೂ ಐಐಟಿ ಸಮಾನವಾಗಿ ಮಾಡುವ ಉದ್ದೇಶ ಹೊಂದಲಾಗಿದೆ ಎಂದು ಹೇಳಿದರು.