ಸರಗೂರು ತಾಲೂಕಿನ ಹಳೆಹೇಗ್ಗುಡಿಲು ಗ್ರಾಮದಲ್ಲಿ ರೈತ ಚೌಡಪ್ಪ ನಾಯಕ ಎಂಬುವರ ಮೇಲೆ ಹುಲಿ ದಾಳಿ ಮಾಡಿದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಸಾಕಾನೆ ಮೂಲಕ ಕಾರ್ಯಾಚರಣೆ ನಡೆಸಿದರು. 
ಜಿಲ್ಲೆ

ಹಳೇ ಹೆಗ್ಗುಡಿಲಿನಲ್ಲಿ ಹುಲಿಗಾಗಿ ಶೋಧ

ಶಿವಶಂಕರ್ ಎಂ. ಹೆಬ್ಬಳ್ಳ

ಸರಗೂರು : ತಾಲೂಕಿನ ಕಾಡಂಚಿನ ಗ್ರಾಮಗಳಲ್ಲಿ ಮೂವರನ್ನು ಬಲಿಪಡೆದಿರುವ ಹುಲಿ ಸೆರೆಗೆ ಶನಿವಾರವೂ ಕಾರ್ಯಾಚರಣೆ ಮುಂದುವರಿದಿದ್ದು, ಕಾಡಿನೊಳಗೆ ಸುಮಾರು 7 ಕಿ.ಮೀ. ದೂರದಲ್ಲಿ ಡ್ರೋಣ್ ಕ್ಯಾಮರಾದಲ್ಲಿ ಹುಲಿಯೊಂದು ಸೆರೆಯಾಗಿದೆ.

ತಾಲೂಕಿನ ಹಳೇಹೆಗ್ಗುಡಿಲು ಬಳಿಯ ಜಮೀನಿನಲ್ಲಿ ಮೂರನೇ ಬಲಿ ಪಡೆದ ಹುಲಿಗಾಗಿ ಅರಣ್ಯ ಇಲಾಖೆ ಹಗಲು ರಾತ್ರಿ ಎನ್ನದೆ ತೀವ್ರ ಶೋಧ ಆರಂಭಿಸಿದ್ದು, ಸಾಕಾನೆಗಳಾದ ಭೀಮ, ಮಹೇಂದ್ರ, ಲಕ್ಷ್ಮಣ, ಶ್ರೀಕಂಠ ಮೂಲಕ ಶನಿವಾರ ಮುಂಜಾನೆಯಿಂದಲೂ ಶೋಧ ಆರಂಭಿಸಿದೆ. ಆದರೂ ಹುಲಿಯ ಗುರುತು ಪತ್ತೆಯಾಗಲಿಲ್ಲ. ಬಳಿಕ ಡ್ರೋನ್ ಕ್ಯಾಮರಾ ಮೂಲಕ ಕಾರ್ಯಾಚರಣೆ ನಡೆಸುವ ವೇಳೆ ಕಾಡಿನ ಒಳಭಾಗದಲ್ಲಿ ಸುಮಾರು 7 ಕಿ.ಮೀ. ಅಂತರದಲ್ಲಿ ಹುಲಿಯೊಂದರ ಚಿತ್ರ ಸೆರೆಯಾಗಿದೆ ಎನ್ನಲಾಗಿದೆ.

ಸದ್ಯ ಕಾರ್ಯಾಚರಣೆಗೆ ಸಿಬ್ಬಂದಿಯ ಸಂಖ್ಯೆ ಹೆಚ್ಚಿಸುವ ಸಲುವಾಗಿ ಮೈಸೂರು ಪ್ರಾದೇಶಿಕ ವಲಯದಿಂದಲೂ ಸಿಬ್ಬಂದಿ ನಿಯೋಜನೆ ಮಾಡಿದ್ದು, 100ಕ್ಕೂ ಅಧಿಕ ಜನ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ.

ಇನ್ನೊಂದು ಕಡೆ ಕಾರ್ಯಾಚರಣೆ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಹೆಡಿಯಾಲ ಉಪ ವಿಭಾಗದ ವ್ಯಾಪ್ತಿಯಲ್ಲಿ ಮೂರು ಅರಣ್ಯ ವಲಯಗಳಲ್ಲಿ ಶನಿವಾರ ಹುಲಿ ಸೆರೆಗೆ ಕೂಂಬಿಂಗ್ ನಡೆಸಲಾಯಿತು.

ತಾಲೂಕಿನ ಬೆಣ್ಣೆಗೆರೆ ಗ್ರಾಮದ ಜಮೀನಿನಲ್ಲಿ ಕೂಂಬಿಂಗ್ ಕಾರ್ಯಾಚರಣೆ ನಡೆಸಲಾಗುತ್ತಿದ್ದು, ಕಾರ್ಯಾಚರಣೆಗೆ ವಾಕ್ ಥ್ರೂ ಕೇಜ್ ಎಂಬ ವಿಶೇಷ ಬೋನು ಇರಿಸಲಾಗಿದೆ. ಈ ಬೋನು ಹುಲಿ ಕಾಲಿಟ್ಟ ಕೂಡಲೇ ಎರಡು ಕಡೆಯಿಂದ ಬಾಗಿಲು ಲಾಕ್ ಆಗಿ ಹುಲಿ ಸೆರೆ ಹಿಡಿಯುವ ತಂತ್ರಜ್ಞಾನ ಹೊಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಿಎಫ್ ಪ್ರಭಾಕರನ್, ಎಸಿಎಫ್ ಡಿ.ಪರಮೇಶ್, ಡಾ.ರಮೇಶ್, ಡಾ.ವಾಸೀಂ ಮಿರ್ಜ್, ನುಗು ಆರ್‌ಎಫ್‌ಒ ವಿವೇಕ್, ಮೋಳೆಯೂರು ವಲಯ ಅಮೃತಾ ಮಾಯಪ್ಪ, ಸೇರಿದಂತೆ 130ಕ್ಕೂ ಹೆಚ್ಚು ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ.

ಇದಲ್ಲದೆ ನಂಜನಗೂಡು ತಾಲೂಕಿನ ಹೊಸವೀಡು ಕಾಲನಿಯಲ್ಲಿಯೂ ಎರಡು ಹುಲಿ ಕಾಣಿಸಿಕೊಂಡ ಬೆನ್ನಲ್ಲೆ ಬುಧವಾರ ಒಂದು ಹೆಣ್ಣು ಹುಲಿ ಸೆರೆ ಹಿಡಿದ ಇಲಾಖೆ ಮತ್ತೊಂದು ಹುಲಿ ಸೆರೆಗೆ ಕೂಂಬಿಂಗ್ ನಡೆಸಲಾಯಿತು. ಓಂಕಾರ್ ವಲಯ ಅರಣ್ಯದಂಚಿನ ನಾಗನಾಣಪುರ ಗ್ರಾಮದಲ್ಲಿ ಹುಲಿ ಕಾಣಿಸಿಕೊಂಡ ವಿಷಯ ತಿಳಿದ ಕೂಡಲೇ ಎಸಿಎಫ್ ಡಿ.ಪರಮೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿ, ಕೂಂಬಿಂಗ್ ನಡೆಸಿದರು.

ಮೊಳೆಯೂರಲ್ಲಿ ಕೂಂಬಿಂಗ್: ಕೂಡಗಿ ಗ್ರಾಮದ ರೈತನನ್ನು ಬಲಿ ಪಡೆದ ಹುಲಿ ಸೆರೆಗೆ ಮೊಳೆಯೂರು ವಲಯದ ಅರಣ್ಯಾಧಿಕಾರಿಗಳು ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಕೂಂಬಿಂಗ್ ಕಾರ್ಯಾಚರಣೆ ನಡೆಸಿದರು. ಇದಲ್ಲದೆ ಬಾಳಗಂಚಿ ಅರಣ್ಯ ಪ್ರದೇಶದ ತೆಲಗುಮಸಹಳ್ಳಿ, ಕಾಟವಾಳು, ದೇವಲಾಪುರ, ದೇವಲಾಪುರ ಶೆಡ್ ಗ್ರಾಮಗಳಲ್ಲಿ ಹುಲಿ ಕಾಣಿಸಿಕೊಂಡಿದ್ದ ಎಂಬ ವಿಷಯ ತಿಳಿದು ಸಿಬ್ಬಂದಿ ಕೂಂಬಿಂಗ್ ನಡೆಸಿದರು. ಆರ್‌ಎಫ್‌ಒ ಅಮೃತಾ ಎ. ಮಾಯಪ್ಪ, 100ಕ್ಕೂ ಹೆಚ್ಚು ಸಿಬ್ಬಂದಿ ಹಾಜರಿದ್ದರು.

ಮಧ್ಯಾಹ್ನದ ವೇಳೆ ಓಂಕಾರ್ ವಲಯದ ಬೇಗೂರು ಯಡವನಳ್ಳಿ ಬಳಿ ಅರಣ್ಯ ವೀಕ್ಷಕನ ಮೇಲೆ ಚಿರತೆಯೊಂದು ದಾಳಿ ಮಾಡಿದ್ದು, ಸ್ಥಳಕ್ಕೆ ಸಾಕಾನೆಗಳನ್ನು ರವಾನಿಸಿ ಅಲ್ಲಿಯೂ ಕೂಂಬಿಂಗ್ ಆರಂಭಿಸಲಾಗಿದೆ. ಸ್ಥಳದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಬೀಡುಬಿಟ್ಟಿದ್ದಾರೆ.