ಜಿಲ್ಲೆ

ಅಂಜಲಿ ಹತ್ಯೆಗೆ ಆರೋಪಿ ಗಿರೀಶ ಬಳಸಿದ ಚಾಕುವಿಗಾಗಿ ಹುಡುಕಾಟ

ಹುಬ್ಬಳ್ಳಿ : ಅಂಜಲಿ ಅಂಬಿಗೇರ ಹತ್ಯೆ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿರುವ ಸಿಐಡಿ ತಂಡ, ಶುಕ್ರವಾರದಂದು ಆರೋಪಿ ಗಿರೀಶ ಅಲಿಯಾಸ್ ವಿಶ್ವನಾಥ ಸಾವಂತನನ್ನು ಹತ್ಯೆ ನಡೆದ ಸ್ಥಳಕ್ಕೆ ಕರೆತಂದು, ಸ್ಥಳ ಮಹಜರು ನಡೆಸಿತು.

ಇಲ್ಲಿಯ ವೀರಾಪುರ ಓಣಿಯಲ್ಲಿರುವ ಅಂಜಲಿ ನಿವಾಸದಲ್ಲಿಯೇ ಆರೋಪಿ ಗಿರೀಶ ಸಾವಂತ, ಆಕೆಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದ. ಈ ಹಿನ್ನೆಲೆಯಲ್ಲಿ ಅಂಜಲಿ ನಿವಾಸ ಹಾಗೂ ಸುತ್ತಲಿನ ಪ್ರದೇಶದಲ್ಲಿ ಸಿಐಡಿ ಎಸ್ಪಿ ವೆಂಕಟೇಶ ನೇತೃತ್ವದ ತಂಡ ಪರಿಶೀಲನೆ ನಡೆಸಿತು.

ವೀರಾಪುರ ಓಣಿಗೆ ಹೇಗೆ ಬಂದ, ಹತ್ಯೆ ನಡೆದು ಯಾವ ಮಾರ್ಗದಿಂದ ಹೋದ ಎಂಬ ಹಲವಾರು ಮಾಹಿತಿಗಳನ್ನು ಸಿಐಡಿ ತಂಡ ಆರೋಪಿಯಿಂದ ಸಂಗ್ರಹಿಸಿತು. ವೀರಾಪುರ ಓಣಿಗೆ ಆರೋಪಿಯನ್ನು ಕರೆತರುತ್ತಿರುವ ಹಿನ್ನೆಲೆಯಲ್ಲಿ ಸುತ್ತಲಿನ ಪ್ರದೇಶದಲ್ಲಿ ಪೊಲೀಸ್ ಬಂದೋಬಸ್ತ ಮಾಡಲಾಗಿತ್ತು. ಅಂಜಲಿ ನಿವಾಸ ಸಂರ್ಪಸುವ ರಸ್ತೆಗಳಲ್ಲಿ ಬ್ಯಾರಿಕೇಡ್ ಹಾಕಲಾಗಿತ್ತು.

ಕೊಲೆಗೆ ಬಳಸಿದ ಚಾಕುವನ್ನು ಆರೋಪಿ ಅಲ್ಲಿಯೇ ಇದ್ದ ಚರಂಡಿಯಲ್ಲಿ ಎಸಿದಿದ್ದರ ಬಗ್ಗೆ ಮಾಹಿತಿ ನೀಡಿದ್ದ. ಈ ಹಿನ್ನೆಲೆಯಲ್ಲಿ ಚಾಕು ಪತ್ತೆಗಾಗಿ ಚರಂಡಿಯಲ್ಲಿನ ತ್ಯಾಜ್ಯ ಹೊರತೆಗೆಯಿಸಿ, ಲೋಲ ಪತ್ತೆ ಉಪಕರಣದ ಮೂಲಕ ಶೋಧ ನಡೆಸಿದರು. ಆದರೆ, ಕೊಲೆಗೆ ಬಳಸಿದ್ದ ಚಾಕು ಸಿಗಲಿಲ್ಲ.

ಸ್ಥಳ ಮಹಜರಿಗೆ ಆರೋಪಿಯನ್ನು ಕರೆದುಕೊಂಡು ಬಂದ ಸಂದರ್ಭದಲ್ಲಿ ಹತ್ಯೆಗೀಡಾದ ಅಂಜಲಿ ಅಜ್ಜಿ, ಸಹೋದರಿ ಹಾಗೂ ವೀರಾಪುರ ಓಣಿ ಜನರು ಆಕ್ರೋಶ ವ್ಯಕ್ತಪಡಿಸಿದರು. ಆರೋಪಿ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅಂಜಲಿ ಸಹೋದರಿ ಯಶೋಧಾ, ಹತ್ಯೆ ನಡೆದ ದಿನ ಮನೆ ಬಾಗಿಲು ಯಾರು ತೆಗೆದರು ?, ಮನೆಯಲ್ಲಿ ಯಾರು ಇದ್ದರು ? ಎಂಬ ಪ್ರಶ್ನೆಗಳನ್ನು ಸಿಐಡಿ ಅಧಿಕಾರಿಗಳು ನಮ್ಮಿಂದ ಕೇಳಿ, ಮಾಹಿತಿ ಪಡೆದುಕೊಂಡರು ಎಂದು ತಿಳಿಸಿದರು.