ಜಿಲ್ಲೆ

ಅನರ್ಹ ಪಡಿತರ ಚೀಟಿ ಪತ್ತೆಗೆ ತಲಾಶ್​

ತುಮಕೂರು ಡೆಸ್ಕ್

ಜಿಲ್ಲೆಯಲ್ಲಿ 18,744 ಮಂದಿ ಗುರುತು, ನಾಲ್ಕು ಚಕ್ರದ ವಾಹನ ಇದ್ದವರಿಗೆ ಆಹಾರ ಇಲಾಖೆ ಶಾಕ್​

ಮೂರ್ತಿ ಟಿಸಿಎಸ್​ ತಿಪಟೂರು
ಅನರ್ಹ ಬಿಪಿಎಲ್​ ಪಡಿತರ ಕಾರ್ಡ್​ದಾರರನ್ನು ಪತ್ತೆಹಚ್ಚಲು ಸದ್ದಿಲ್ಲದೆ ಕಾರ್ಯಾಚರಣೆ ನಡೆಸಿರುವ ಆಹಾರ ಇಲಾಖೆ ಈಗ ನಾಲ್ಕು ಚಕ್ರದ ವಾಹನ ಹೊಂದಿರುವವರನ್ನೂ ಅನರ್ಹಗೊಳಿಸುವ ನಿಟ್ಟಿನಲ್ಲಿ ಸಾರಿಗೆ ಇಲಾಖೆಯೊಂದಿಗೆ ಸಂಪರ್ಕ ಸಾಧಿಸಿದೆೆ.
ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಿ ಹೈರಾಣಾಗಿರುವ ರಾಜ್ಯ ಸರ್ಕಾರ ಅನವಶ್ಯಕ ವೆಚ್ಚ ಕಡಿಮೆ ಮಾಡಲು ಮುಂದಾಗಿದ್ದು, ಅನರ್ಹ ಬಿಪಿಎಲ್​ ಕಾರ್ಡುದಾರರ ಪತ್ತೆಗೆ ಮುಂದಾಗಿದೆ. ಸರ್ಕಾರದ ನಿರ್ದೇಶನದ ಮೇರೆಗೆ ಸದ್ದಿಲ್ಲದೆ ಕಾರ್ಯಾಚರಣೆ ನಡೆಸಿರುವ ಇಲಾಖೆ ಅಧಿಕಾರಿಗಳು ಜಿಲ್ಲೆಯಲ್ಲಿ ಒಟ್ಟು 18,744 ಅನರ್ಹ ಬಿಪಿಎಲ್​ ಪಡಿತರದಾರರನ್ನು ಪತ್ತೆಹಚ್ಚಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ.
ಮೂರು ಮಾನದಂಡ: ಬಿಪಿಎಲ್​ ಪಡಿತರದಾರರು ಅನರ್ಹರೆಂದು ಪರಿಗಣಿಸಲು ಮೂರು ಮಾನದಂಡ ಅನುಸರಿಸಲಾಗಿದೆ. 1. ಮೃತ ವ್ಯಕ್ತಿಯ ಹೆಸರಿನಲ್ಲಿರುವ ಪಡಿತರ ಚೀಟಿ, 2. ಕಳೆದ 6 ತಿಂಗಳಿಂದ ಪಡಿತರ ಪಡೆಯದಿರುವುದು 3.ಆದಾಯ ತೆರಿಗೆ ಪಾವತಿಸುತ್ತಿರುವವರನ್ನು ಪತ್ತೆ ಹಚ್ಚಿ ಅಂತಹವರನ್ನು ಅನರ್ಹರೆಂದು ತೀರ್ಮಾನಿಸಲಾಗಿದೆ. ಆಹಾರ ಇಲಾಖೆ ತಿಪಟೂರು ತಾಲೂಕಿನಲ್ಲಿ ಪತ್ತೆ ಮಾಡಿರುವ ಪ್ರಕಾರ, ಮೃತಪಟ್ಟಿರುವವವರ ಹೆಸರಿನಲ್ಲಿರುವ ಪಡಿತರ ಚೀಟಿಗಳ ಸಂಖ್ಯೆ 818 ಆಗಿದ್ದು, 6 ತಿಂಗಳಿಂದ ಪಡಿತರ ಪಡೆಯದೇ ಇರುವವರು 428 ಮತ್ತು ಆದಾಯ ತೆರಿಗೆ ಪಾವತಿಸುತ್ತಿರುವವರು 403 ಮಂದಿ ಎಂದು ಗುರುತಿಸಲಾಗಿದ್ದು, ತಾಲೂಕಿನಲ್ಲಿ ಒಟ್ಟು 1,649 ಬಿಪಿಎಲ್​ ಪಡಿತರದಾರರನ್ನು ಅನರ್ಹರ ಪಟ್ಟಿಗೆ ಸೇರಿಸಲಾಗಿದೆ. ಈ ಮೂರು ಮಾನದಂಡಗಳ ಜತೆ ಮತ್ತೊಂದು ಹೊಸ ನಿಯಮ ಜಾರಿಗೊಳಿಸಲು ಮುಂದಾಗಿರುವ ಆಹಾರ ಇಲಾಖೆಯ ಕಣ್ಣು ಈಗ ನಾಲ್ಕು ಚಕ್ರದ ವಾಹನ ಮಾಲೀಕರ ಮೇಲೆ ಬಿದ್ದಿದೆ. ಸಾರಿಗೆ ಇಲಾಖೆಯ ನಿಕಟ ಸಂಪರ್ಕದಲ್ಲಿರುವ ಇಲಾಖೆಯ ಅಧಿಕಾರಿಗಳು ನಾಲ್ಕು ಚಕ್ರದ ವಾಹನ ಹೊಂದಿರುವವರ ಪಟ್ಟಿ ಕಲೆ ಹಾಕುತ್ತಿದ್ದಾರೆ. ನಾಲ್ಕು ಚಕ್ರದ ವಾಹನದ ಮಾಲೀಕರಾದವರು ಬಿಪಿಎಲ್​ ಪಡಿತರ ಚೀಟಿ ಪಡೆದಿದ್ದರೆ ಅಂತಹವರನ್ನು ಅನರ್ಹರೆಂದು ಪರಿಣಿಸಲಾಗುವುದು.

ಕೋಟಿ ಬೆಲೆಯ ಕಾರಿಗೂ, ಗುಜರಿ ಕಾರಿಗೂ ಒಂದೇ ನಿಯಮ-ಗ್ರಾಮೀಣ ಪ್ರದೇಶದಲ್ಲಿ ತೋಟದ ಮನೆಯಲ್ಲಿ ಅಥವಾ ಸೂಕ್ತ ಸಾರಿಗೆ ವ್ಯವಸ್ಥೆ ಇಲ್ಲದ ಕಡೆ ವಾಸಿಸುತ್ತಿರುವವರು ಅಥವಾ ಮಳೆ, ಬಿಸಿಲಿನ ಕಾಲದಲ್ಲಿ ಮಕ್ಕಳನ್ನು ಶಾಲೆಗೆ ಕಳುಹಿಸಲು ಗುಜರಿ ಸೇರುವ ಹಂತದಲ್ಲಿರುವ 30-&40 ಸಾವಿರ ಬೆಲೆಯ ಸೆಕೆಂಡ್​ ಹ್ಯಾಂಡ್​ ಕಾರುಗಳನ್ನು ಬಳಸುವುದು ಅನಿವಾರ್ಯ. ಆದರೆ, ಕೋಟಿ ರೂ. ಬೆಲೆಯ ಕಾರಿಗೂ, ಗುಜರಿ ಕಾರಿಗೂ ಒಂದೇ ನಿಯಮ ಅಳವಡಿಸಲಾಗಿದ್ದು, ಒಟ್ಟಾರೆ ನಾಲ್ಕು ಚಕ್ರದ ವಾಹನ ಹೊಂದಿದ್ದರೆ ಅಂತಹವರನ್ನು ಬಿಪಿಎಲ್​ ಪಡಿತರ ಪಟ್ಟಿಯಿಂದ ಅನರ್ಹಗೊಳಿಸುವುದು ನ್ಯಾಯಸಮ್ಮತವಲ್ಲ ಎಂಬ ಮಾತು ಕೇಳಿಬರುತ್ತಿದೆ. ಇದರ ಬದಲು, ವಾಹನದ ಆಯಸ್ಸು ಮತ್ತು ಎಷ್ಟು ಕೈ ಬದಲಾಯಿಸಲಾಗಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಸದರಿ ವಾಹನದ ಮಾರುಕಟ್ಟೆ ಬೆಲೆ ಇತ್ಯಾದಿ ಅಂಶಗಳ ಆಧಾರದಲ್ಲಿ ವಾಹನದ ಮೌಲ್ಯಮಾಪನ ಮಾಡಿ, ನಂತರ ಪಡಿತರ ಪಟ್ಟಿಯಿಂದ ಕೈ ಬಿಡಬೇಕೆ? ಬೇಡವೇ ಎಂಬ ಬಗ್ಗೆ ಇಲಾಖೆ ಯೋಚಿಸಬೇಕಿದೆ. ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸುವ ಸಲುವಾಗಿ ಹೊಸ ಬಿಪಿಎಲ್​ ಕಾರ್ಡ್​ಗಳಿಗೆ ಬ್ರೇಕ್​ ಹಾಕಿರುವ ಪರಿಣಾಮ 3 ಲಕ್ಷಕ್ಕೂ ಅಧಿಕ ಹೊಸ ಅರ್ಜಿಗಳು ವಿಲೇವಾರಿ ಆಗಿಲ್ಲ. ಜತೆಗೆ ಸರ್ವರ್​ ಸಮಸ್ಯೆ ಇನ್ನಿಲ್ಲದಂತೆ ಕಾಡುತ್ತಿದೆ. ಈ ಮಧ್ಯೆ ಬಿಪಿಎಲ್​ ಕಾರ್ಡ್​ ರದ್ದು ಪಡಿಸುವುದು ಬಡ ಜನರ ಆತಂಕಕ್ಕೆ ಕಾರಣವಾಗಿದೆ.

ಸರ್ಕಾರದ ನಿರ್ದೇಶನದಂತೆ ಜಿಲ್ಲೆಯ ಪ್ರತಿ ಸಾರಿಗೆ ಕಚೇರಿಗಳಿಗೆ ಇಲಾಖೆಯ ಇಬ್ಬರು ಅಧಿಕಾರಿಗಳು ಭೇಟಿ ನೀಡಿ 4 ಚಕ್ರದ ವಾಹನ ಮಾಲೀಕರ ವಿವರ ಕಲೆ ಹಾಕುತ್ತಿದ್ದಾರೆ. ಅಂತಿಮವಾಗಿ ಸ್ಥಳ ಪರಿಶೀಲಿಸಿ, ಅನರ್ಹರೆಂದು ಕಂಡುಬಂದರೆ ಕ್ರಮ ಕೈಗೊಳ್ಳಲಾಗುವುದು.

ಮಂಟೇಸ್ವಾಮಿಜಂಟಿ ನಿರ್ದೇಶಕ ಆಹಾರ ಇಲಾಖೆ. ತುಮಕೂರು