ಉಡುಪಿ: ಜಿಲ್ಲೆಯಲ್ಲಿ ಕರೊನಾ ನಿಯಂತ್ರಣಕ್ಕೆ ಕಂಟೈನ್ಮೆಂಟ್ ರೆನ್ ವ್ಯವಸ್ಥಿತವಾಗಿ ರೂಪಿಸಲು ಕಂದಾಯ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಜಿ.ಜಗದೀಶ್ ಖಡಕ್ ಸೂಚನೆ ನೀಡಿದ್ದಾರೆ. ಈ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸದ್ಯ ಸಾಕಷ್ಟು ಸ್ಥಳೀಯ ಪ್ರಕರಣ ವರದಿಯಾಗುತ್ತಿದೆ. ಊರು ಅಥವಾ ಏರಿಯಾವನ್ನೇ ಕಂಟೈನ್ಮೆಂಟ್ ವಲಯ ಮಾಡಬೇಕಾಗಬಹುದು. ಒಂದೆರಡು ಮನೆ ಸೀಲ್ಡೌನ್ ಮಾಡಿದರೆ ಸಾಲದು. ತಮಗೆ ಸುಲಭವಾಗುವಂತೆ ಕೆಲಸ ಮಾಡಬೇಡಿ.
ಜಿಲ್ಲೆಯಲ್ಲಿ ಸಾವಿನ ಸಂಖ್ಯೆ ಜಾಸ್ತಿಯಾಗುತ್ತಿದೆ. ಸೀಲ್‌ಡೌನ್ ಮಾಡಿಯೂ ಊರಲ್ಲಿ ಸಾವು ಸಂಭವಿಸಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಎಸಿ, ತಹಸೀಲ್ದಾರ್, ವಿಲೇಜ್ ಅಕೌಂಟೆಂಟ್ ಹಾಗೂ ಆರ್‌ಐಗಳಿಗೆ ಸೂಚನೆ ನೀಡಿದ್ದಾರೆ.
ಸೋಂಕಿತ ಪತ್ತೆಯಾದ ಪ್ರದೇಶವನ್ನೇ ಸೀಲ್‌ಡೌನ್ ಮಾಡಬೇಕು, ಕಾಟಾಚಾರಕ್ಕೆ ಒಂದೆರಡು ಮನೆ ಸೀಲ್ ಮಾಡಬೇಡಿ. ನಿಯಂತ್ರಿತ ವಲಯ ವ್ಯಾಪ್ತಿ ವಿಸ್ತರಿಸಬೇಕು ಎಂದು ಬಹಳಷ್ಟು ದಿನಗಳಿಂದ ಹೇಳುತ್ತಿದ್ದರೂ, ಯಾರೂ ಗಂಭೀರವಾಗಿ ಪರಿಗಣಿಸುತ್ತಿಲ್ಲ. ಇನ್ನು ಮುಂದೆ ಯಾರಾದರೂ ಕೋವಿಡ್‌ನಿಂದ ಮೃತಪಟ್ಟರೆ ನಿಯಂತ್ರಿತ ವಲಯ ರಚನೆ ಮಾಡುವ ಅಧಿಕಾರಿಗಳ ಮೇಲೆ ಕ್ರಮ ಆಗುತ್ತದೆ ಎಂದು ಜಿಲ್ಲಾಧಿಕಾರಿ ಎಚ್ಚರಿಸಿದ್ದಾರೆ.
ಕೋವಿಡ್ ಸೋಂಕಿನಿಂದ ನಾಗರಿಕರು ಮೃತಪಟ್ಟಾಗ ಗೌರವಯುತ ಸಂಸ್ಕಾರ ಮಾಡುವುದು ಪ್ರತಿಯೊಬ್ಬರ ಕರ್ತವ್ಯ. ಸೋಂಕಿತರು ಮೃತಪಟ್ಟಲ್ಲಿ ಶವ ಸಂಸ್ಕಾರಕ್ಕೆ ಸರ್ಕಾರ ಪ್ರತ್ಯೇಕ ಮಾರ್ಗಸೂಚಿ ಹೊರಡಿಸಿದೆ. ಜನರು ಆತಂಕ ಪಡುವ ಅವಶ್ಯಕತೆ ಇಲ್ಲ. ಯರಾದರೂ ಶವ ಸಂಸ್ಕಾರಕ್ಕೆ ಅಡ್ಡಿಪಡಿಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು. - ಜಿ.ಜಗದೀಶ್, ಉಡುಪಿ ಜಿಲ್ಲಾಧಿಕಾರಿ