ಬೆಂಗಳೂರು: ಹೆಚ್ಚಿನ ಸೋಂಕಿತರು ಪತ್ತೆಯಾದ ಹಾಗೂ ಭವಿಷ್ಯದಲ್ಲಿ ಸೋಂಕು ಹರಡುವ ಲೆಕ್ಕಾಚಾರದಲ್ಲಿ ಸೀಲ್ಡೌನ್ ಮಾಡಲಾಗಿರುವ ಪಾದರಾಯನಪುರ ಹಾಗೂ ಬಾಪೂಜಿನಗರ ವಾರ್ಡ್ಗಳಲ್ಲಿ ಜನರು ಮನೆಗಳಿಂದ ಹೊರಬಾರದಂತೆ ನಿಗಾ ವಹಿಸಲು ಶನಿವಾರ ಡ್ರೋನ್ ಬಳಕೆ ಮಾಡಲಾಯಿತು.
ಪೊಲೀಸ್ ಇಲಾಖೆ ಕೋರಿಕೆ ಮೇರೆಗೆ ಕರೊನಾ ವಾರಿಯರ್ಸ್ ಟಾಸ್ಕ್ಫೋರ್ಸ್ನಿಂದ ಡ್ರೋನ್ ನಿರ್ವಹಣೆಗೆ ಸ್ವಯಂಸೇವಕರನ್ನು ನಿಯೋಜಿಸಲಾಗಿದ್ದು, ಪೊಲೀಸರ ನಿರ್ದೇಶನದಂತೆ ನಿಗಾ ವಹಿಸುತ್ತಿದ್ದಾರೆ. ಸೀಲ್ಡೌನ್ ಮಾಡಲಾದ ಮೊದಲ ದಿನ ತುಸು ಜನಸಂಚಾರ ಕಾಣಿಸಿಕೊಂಡಿದ್ದ ರಸ್ತೆಗಳು, ಶನಿವಾರ ಬಹುತೇಕ ಜನರಹಿತವಾಗಿದ್ದವು.
ಸರ್ಕಾರದಿಂದ ಉಚಿತ ಹಾಲು ಹಂಚಿಕೆ ವೇಳೆ ಪಾದರಾಯನಪುರದಲ್ಲಿ ಪರಸ್ಪರ ಅಂತರ ಮರೆತು ಜನಜಂಗುಳಿ ಉಂಟಾಗಿತ್ತು. ಈ ಕುರಿತು ದೂರುಗಳು ಬರುತ್ತಿದ್ದಂತೆಯೇ ಪ್ರದೇಶಕ್ಕೆ ಮೇಯರ್ ಗೌತಮ್ ಕುಮಾರ್ ಭೇಟಿ ನೀಡಿ, ‘ಯಾರೂ ಮನೆಯಿಂದ ಹೊರಬರಬಾರದು’ ಎಂದು ಮನವಿ ಮಾಡಿದರು. ಅಲ್ಲದೇ, ಸೀಲ್ಡೌನ್ ಆದೇಶ ಅನುಷ್ಠಾನವನ್ನು ಕಟ್ಟುನಿಟ್ಟಾಗಿ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಎರಡೂ ಪ್ರದೇಶಗಳ ಪ್ರತಿ ಮನೆಗೆ ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಸಿಬ್ಬಂದಿ ಭೇಟಿ ನೀಡಿ ಸಮೀಕ್ಷೆ ನಡೆಸುವ ಕಾರ್ಯವನ್ನು ಆರಂಭಿಸಲಾಯಿತು. ಬಿಬಿಎಂಪಿ ಕೇಂದ್ರ ಕಚೇರಿ ಆವರಣದಲ್ಲಿ ಈ ಸಿಬ್ಬಂದಿಯ 60 ತಂಡಗಳನ್ನು ಒಗ್ಗೂಡಿಸಿ ಸೂಚನೆ ನೀಡಲಾಯಿತು. ‘ಸಮೀಕ್ಷೆಗೆ ಅವಶ್ಯಕವಿರುವ ಪ್ರಶ್ನೆಗಳನ್ನಷ್ಟೇ ಕೇಳಬೇಕು. ಇತರೆ ಪ್ರಶ್ನೆ, ಅನಗತ್ಯ ಮಾತುಗಳಿಗೆ ಅವಕಾಶ ನೀಡಬಾರದು’ ಎಂದು ತಿಳಿಸಲಾಯಿತು.
ನಂತರ ತಂಡಗಳಲ್ಲಿ ಮನೆಮನೆಗೆ ತೆರಳಿದ ಸಿಬ್ಬಂದಿ, ಮೊದಲಿಗೆ ಮನೆಯಲ್ಲಿರುವವರ ಹಣೆಗೆ ಥರ್ಮಲ್ ಸ್ಕಾ್ಯನಿಂಗ್ ಯಂತ್ರವಿಟ್ಟು ತಪಾಸಣೆ ನಡೆಸಿದರು. ಮನೆಯಲ್ಲಿರುವವರು, ಪ್ರವಾಸ ವಿವರಗಳನ್ನು ಪಡೆದರು.
ಸೋಂಕು ನಿವಾರಕ ಔಷಧ ಸಿಂಪಡಣೆ
ಸೀಲ್ಡೌನ್ ಸಂದರ್ಭದಲ್ಲಿ ಮನೆಯಿಂದ ಯಾರೂ ಹೊರ ಬರಬಾರದು ಎಂದು ಪೊಲೀಸ್ ಇಲಾಖೆ, ಬಿಬಿಎಂಪಿ ಮೂಲಕ ಧ್ವನಿವರ್ಧಕ ಬಳಸಿ ಪ್ರಚಾರ ಮಾಡಲಾಯಿತು. ಸ್ಥಳೀಯ ಕಿರಣ್ ಎಂಬುವರು ಡ್ರೋನ್ಗೆ ಮೈಕ್ ಅಳವಡಿಸಿ ಅದರಿಂದಲೇ ಎಚ್ಚರಿಕೆ ನೀಡಲು ಸಹಕರಿಸಿದರು. ಸೀಲ್ಡೌನ್ ಮಾಡಲಾಗಿರುವ ಎರಡು ವಾರ್ಡ್ಗಳಿಗೆ ಹೊಂದಿಕೊಂಡಂತಿರುವ ಜೆಜೆ ನಗರ ವಾರ್ಡ್ನಲ್ಲೂ ಡ್ರೋನ್ ಮೂಲಕ ಸೋಂಕು ನಿವಾರಕ ಔಷಧ ಸಿಂಪಡಣೆ ಮಾಡಲಾಯಿತು. ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಪ್ರದೇಶಕ್ಕೆ ಆಗಮಿಸಿ ಪರಿಸ್ಥಿತಿ ಅವಲೋಕಿಸಿದರು.
ಪೊಲೀಸರಿಂದ ವಾಹನಗಳ ತಪಾಸಣೆ
ವಾಹನ ಸಂಚಾರ ಬಹಳಷ್ಟು ವಿರಳವಾಗಿದೆಯಾದರೂ ಬೆಳಗ್ಗೆಯಿಂದ ಕೆಲವರು ಓಡಾಡುತ್ತಲೇ ಇದ್ದರು. ಬಾಪೂಜಿನಗರದಿಂದ ವಿಜಯನಗರಕ್ಕೆ ಸಂರ್ಪಸುವ ಮಾರ್ಗ ಸೇರಿ ಅನೇಕ ಮಾರ್ಗಗಳನ್ನು ಪೊಲೀಸರು ಹೆಚ್ಚುವರಿ ಬ್ಯಾರಿಕೇಡ್, ಕಲ್ಲು, ಹಗ್ಗ ಮತ್ತಿತರ ವಸ್ತುಗಳಿಂದ ಸೀಲ್ ಮಾಡಿದರು. ಸಿರ್ಸಿ ವೃತ್ತದ ಕಡೆಯಿಂದ ಪಾದರಾಯನಪುರಕ್ಕೆ ಸಂರ್ಪಸುವ ದ್ವಾರದಲ್ಲಿ ತಪಾಸಣೆ ನಡೆಸುತ್ತಿದ್ದ ಪೊಲೀಸರು ಅನಗತ್ಯವಾಗಿ ಸಂಚರಿಸುತ್ತಿದ್ದವರಿಗೆ ಬುದ್ಧಿ ಹೇಳಿ ಕಳಿಸಿದರು, ಕೆಲವು ವಾಹನ ಜಪ್ತಿ ಮಾಡಿದರು.
ಆಶಾ ಕಾರ್ಯಕರ್ತೆಯರು ಹಾಗೂ ಇನ್ನಿತರ ವೈದ್ಯಕೀಯ ಸಿಬ್ಬಂದಿ ಪಾದರಾಯನಪುರ ಹಾಗೂ ಬಾಪೂಜಿನಗರದ ಮನೆಗಳಲ್ಲಿ ಸಮೀಕ್ಷೆ ನಡೆಸುತ್ತಾರೆ. ಸಾರ್ವಜನಿಕರು ಅಗತ್ಯ ಮಾಹಿತಿಗಳನ್ನು ನೀಡಿ ಸಹಕರಿಸಬೇಕು. | ಬಿ.ಎಚ್. ಅನಿಲ್ ಕುಮಾರ್ ಬಿಬಿಎಂಪಿ ಆಯುಕ್ತ ಹೆಚ್ಚಿನ ಸೋಂಕಿತರು ಕಾಣಿಸಿಕೊಂಡ ಪ್ರಯುಕ್ತ ಸೀಲ್ಡೌನ್ ಮಾಡಲಾಗಿದೆ. ಸಾರ್ವಜನಿಕರು ಈ ಕಾರ್ಯ ದಲ್ಲಿ ಸಂಪೂರ್ಣ ಸಹಯೋಗ ನೀಡಬೇಕು. ದಿನನಿತ್ಯದ ಜೀವನ ಹಾಗೂ ತುರ್ತು ಪರಿಸ್ಥಿತಿಗೆ ಧಕ್ಕೆಯಾಗದಂತೆ ಸರ್ಕಾರ ನೋಡಿಕೊಳ್ಳುತ್ತದೆ. | ಡಾ. ಸಿ.ಎನ್. ಅಶ್ವತ್ಥನಾರಾಯಣ ಉಪಮುಖ್ಯಮಂತ್ರಿ https://www.vijayavani.net/cm-video-conversation-to-reassure-kannadigas-in-america-who-feared-by-coronavirus/