ಜಿಲ್ಲೆ

ಸಮುದ್ರ ನೀರು ಶುದ್ಧೀಕರಣ ಘಟಕ

Avinash R

ಮಂಜೇಶ್ವರ: ಗ್ರಾಮ ಪಂಚಾಯಿತಿಯು ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್‌ನಲ್ಲಿ ಒಳಗೊಂಡಿರುವ ಸೌರಶಕ್ತಿ ಚಾಲಿತ ಸಮುದ್ರದ ನೀರಿನ ಶುದ್ಧೀಕರಣ ಸ್ಥಾವರ ನಿರ್ಮಾಣಕ್ಕೆ ಆಡಳಿತಾತ್ಮಕ ಅನುಮೋದನೆ ಸಿಕ್ಕಿದೆ.

ಮಂಜೇಶ್ವರ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದು ಮತ್ತು ಕೇರಳ ಜಲ ಪ್ರಾಧಿಕಾರ 1.40 ಕೋಟಿ ರೂ.ಯೋಜನೆಗೆ ತಾಂತ್ರಿಕ ಅನುಮತಿ ನೀಡಿದೆ. ಸರ್ಕಾರಿ ವಲಯದಲ್ಲಿ ಕೇರಳದ ಮೊದಲ ಸೌರಶಕ್ತಿ ಚಾಲಿತ ಸಮುದ್ರದ ನೀರಿನ ಶುದ್ಧೀಕರಣ ಘಟಕದ ಅನುಷ್ಠಾನಕ್ಕಾಗಿ ಜಿಲ್ಲಾಧಿಕಾರಿ ಅಧ್ಯಕ್ಷರಾಗಿರುವ ತಾಂತ್ರಿಕ ಸಮಿತಿ, ವಿಶೇಷ ಅಧಿಕಾರಿ ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್, ಕೇರಳ ಜಲ ಪ್ರಾಧಿಕಾರದ ಇಂಜಿನಿಯರ್‌ಗಳು, ಎಲ್‌ಐಡಿ ಮತ್ತು ಇಡಬ್ಲುೃ , ಸಿಡಬ್ಲುೃ, ಆರ್‌ಡಿಎಂ ಸದಸ್ಯರಾಗಿ ಮತ್ತು ಗ್ರಾಮ ಪಂಚಾಯಿತಿ ಅಧ್ಯಕ್ಷರ ನೇತೃತ್ವದಲ್ಲಿ ಕಾರ್ಯಾಚರಣೆ ಮತ್ತು ನಿರ್ವಹಣೆ ಸಮಿತಿ ರಚನೆಯೊಂದಿಗೆ ಸ್ಥಾವರ ನಿರ್ಮಾಣ ಕಾರ್ಯ ಆರಂಭವಾಗಲಿದೆ.

2024-25ರ ಆರ್ಥಿಕ ವರ್ಷದಲ್ಲಿ ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ಸೇರಿದಂತೆ ಜಿಲ್ಲೆಯ ಇತರೆ 22 ಯೋಜನೆಗಳಲ್ಲಿ 6.29 ಕೋಟಿ ರೂ. ಯೋಜನೆಗಳು ಮಂಜೂರಾಗಿವೆ.

ಏನಿದು ಯೋಜನೆ?: ಸಮುದ್ರದ ನೀರನ್ನು, ಕುಡಿಯುವ ನೀರು ಸಹಿತ ಪ್ರಾಥಮಿಕ ಅವಶ್ಯಕತೆಗಳಿಗೆ ಅನುಗುಣವಾಗಿ ವಿಶೇಷ ಯಂತ್ರೋಪಕರಣಗಳ ಮೂಲಕ ಸಂಗ್ರಹಿಸಿ ಬಳಕೆಗೆ ಯೋಗ್ಯವಾಗಿಸುವುದು ಈ ಯೋಜನೆಯ ಉದ್ದೇಶ. ದಕ್ಷಿಣ ಕನ್ನಡ ಜಿಲ್ಲೆಯೊಂದಿಗೆ ಗಡಿ ಹಂಚಿಕೊಂಡಿರುವ ಕೇರಳದ ಉತ್ತರದ ಕೊನೆಯ ಗ್ರಾಮ ಪಂಚಾಯಿತಿಯಾದ ಮಂಜೇಶ್ವರ ಭಾರಿ ಜನದಟ್ಟಣೆಯ ಕೇಂದ್ರವಾಗಿದೆ. ಶಾಲೆ, ಕಾಲೇಜುಗಳು, ಕಾರ್ಖಾನೆಗಳು, ಕೃಷಿ, ವ್ಯಾಪಾರ ಹಾಗೂ ಜನವಸತಿ ದಟ್ಟಣೆಯ ಮಂಜೇಶ್ವರ ಗ್ರಾಮ ಪಂಚಾಯತಿ ಕಳೆದ ಕೆಲವು ವರ್ಷಗಳಿಂದ ಜನವರಿಯಿಂದಲೇ ನೀರಿನ ಕೊರತೆ ಎದುರಿಸುತ್ತಿದೆ. ಈ ನಿಟ್ಟಿನಲ್ಲಿ ಕೇರಳದಲ್ಲೇ ಮೊದಲ ಬಾರಿಗೆ ಪ್ರಾಯೋಗಿಕ ನೆಲೆಗಟ್ಟಲ್ಲಿ ಈ ಯೋಜನೆಗೆ ಅನುಮತಿಸಲಾಗಿದೆ.

ತೀವ್ರ ಜಲ ಅಭಾವ ಹಿನ್ನೆಲೆ

ಜಿಲ್ಲೆಯಲ್ಲಿ ತೀವ್ರ ಕುಡಿಯುವ ನೀರಿನ ಅಭಾವವಿರುವ ಪ್ರದೇಶವಾಗಿರುವ ಕಾರಣ ಮಂಜೇಶ್ವರ ಪಂಚಾಯಿತಿಯನ್ನು ಯೋಜನೆಗೆ ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಇನ್ಬಾಶೇಖರ್ ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಆದ್ಯತೆ ಹಾಗೂ ಪ್ರಾಯೋಗಿಕ ಮಾದರಿಯಲ್ಲಿ ಈ ಯೋಜನೆ ಜಾರಿಯಾಗಲಿದ್ದು, ಕಾಮಗಾರಿಗೆ ಶೀಘ್ರವೇ ಟೆಂಡರ್ ಕರೆಯಲಾಗುವುದು ಎಂದು ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ವಿಶೇಷಾಧಿಕಾರಿ ವಿ.ಚಂದ್ರನ್ ವಿಜಯವಾಣಿಗೆ ಮಾಹಿತಿ ನೀಡಿದ್ದಾರೆ.