ಅನ್ಸಾರ್ ಇನೋಳಿ ಉಳ್ಳಾಲ ಸಮುದ್ರದ ಅಬ್ಬರಕ್ಕೆ ನಿರ್ನಾಮವಾಗಿದ್ದ ಹಿಂದು ರುದ್ರಭೂಮಿಗೆ ದಾನಿಯೊಬ್ಬರು ಸಹಾಯಹಸ್ತ ನೀಡಿದ ಬಳಿಕವೂ ಕುಂಟುತ್ತಾ ಸಾಗಿದ್ದ ಕಾಮಗಾರಿ ಇದೀಗ ವೇಗ ಪಡೆದಿದ್ದು ಶೀಘ್ರ ಸಾರ್ವಜನಿಕರ ಬಳಕೆಗೆ ಲಭಿಸುವ ಆಶಾಭಾವನೆ ಮೂಡಿದೆ. ಹಿಂದಿನಿಂದಲೂ ಕಡಲ ಕಿನಾರೆಯಲ್ಲಿ ಹಿಂದು ರುದ್ರಭೂಮಿ ಇತ್ತು. ಇದು ಶಿವ ಸಾನ್ನಿಧ್ಯದ ಸನಿಹದಲ್ಲೇ ಇದ್ದ ಕಾರಣ ಹಿಂದುಗಳ ಪಾಲಿಗೆ ಪವಿತ್ರ ರುದ್ರಭೂಮಿ ಎನಿಸಿತ್ತು. ಈ ಕಾರಣದಿಂದಲೇ ದೂರದ ಊರಿನಿಂದಲೂ ಇಲ್ಲಿಗೆ ಶವ ತಂದು ದಹನ ಮಾಡಲಾಗುತ್ತಿತ್ತು. ಆದರೆ ಮೂರು ವರ್ಷಗಳ ಹಿಂದೆ ಕಡಲ್ಕೊರೆತಕ್ಕೆ ರುದ್ರಭೂಮಿ ಸಂಪೂರ್ಣ ಸಮುದ್ರ ಪಾಲಾಯಿತು. ಪುನಃನಿರ್ಮಾಣ ಬಗ್ಗೆ ಸಮಿತಿ ಯೋಚಿಸಿದರೂ ಸಮುದ್ರಕ್ಕೆ ತಾಗಿಕೊಂಡೇ ಇರುವುದರಿಂದ ನಿರ್ವಹಣೆ ಕಷ್ಟ ಎನ್ನುವ ಕಾರಣಕ್ಕೆ ಸಾರ್ವಜನಿಕರಿಂದ ಭಿನ್ನಾಭಿಪ್ರಾಯಗಳು ವ್ಯಕ್ತವಾದವು. ಆದರೂ ದೇವಸ್ಥಾನ ಜೀರ್ಣೋದ್ಧಾರ ಸಂದರ್ಭ ಬೆಂಗಳೂರಿನ ಉದ್ಯಮಿ ಭೂಮಿಕಾ ಎಂಬುವರು ರುದ್ರಭೂಮಿ ಬಗ್ಗೆ ತಿಳಿದು ತಮ್ಮದೇ ಖರ್ಚಿನಲ್ಲಿ ಪುನಃನಿರ್ಮಾಣಕ್ಕೆ ಮುಂದಾದರು. ಎರಡು ವರ್ಷಗಳ ಹಿಂದೆಯೇ ಮೇಲ್ಛಾವಣಿ ಕೆಲಸ ಮುಗಿದರೂ ನಂತರದ ಕೆಲಸಗಳನ್ನು ಮುಂದುವರಿಸಲು ಸಮಿತಿಗೆ ಆರ್ಥಿಕ ಸಮಸ್ಯೆ ಎದುರಾಯಿತು. ಭದ್ರತೆ ಇಲ್ಲದ ಕಾರಣ ಹಿಂದೆ ಸಿಲಿಕಾನ್‌ಗೆ ಸಂಬಂಧಪಟ್ಟ ವಸ್ತುಗಳು ಕಳ್ಳರ ಪಾಲಾಗಿದ್ದವು. ಈ ಹಿನ್ನೆಲೆಯಲ್ಲಿ ಈ ಬಾರಿ ಭದ್ರತೆಗೂ ಆದ್ಯತೆ ನೀಡಲಾಗಿದ್ದು ಪುರಸಭೆಯ ಅನುದಾನದಲ್ಲಿ ಗ್ರಿಲ್ ಅಳವಡಿಸಲಾಗಿದೆ. ಸಿಲಿಕಾನ್‌ಗೆ ನೀರು ಬರದಂತೆ ತಡೆಯುವ ನಿಟ್ಟಿನಲ್ಲಿ ಸುತ್ತಲೂ ಗೋಡೆ ನಿರ್ಮಾಣ ಮಾಡಲಾಗುತ್ತಿದೆ. ಗೇಟ್ ರೆಡಿಯಾಗಿದ್ದು ಬೇಲಿ ಹಾಕುವ ಕಾರ್ಯವೂ ಪ್ರಗತಿಯಲ್ಲಿದೆ. ಸಿಲಿಕಾನ್ ಅಳವಡಿಕೆ ಬಾಕಿಯಿದ್ದು ನಂತರದ ದಿನಗಳಲ್ಲಿ ಶವದಹನ ಸಂದರ್ಭ ಹೊಗೆ ಬರದಂತೆ ತಡೆಯುವ ನಿಟ್ಟಿನಲ್ಲಿ ಕೇರಳ ಮಾದರಿಯಲ್ಲಿ ಕಟ್ಟಿಗೆ ಬದಲು ತೆಂಗಿನ ಚಿಪ್ಪು ಬಳಸುವ ಯೋಚನೆ ರುದ್ರಭೂಮಿ ಸಮಿತಿಯದ್ದು. ಶೌಚಗೃಹಕ್ಕೂ ಕಾಯಕಲ್ಪ ಇಲ್ಲಿ ಪಿಂಡ ಪ್ರದಾನ, ಅಮವಾಸ್ಯೆ ಸ್ನಾನಕ್ಕೂ ಪ್ರಾಧಾನ್ಯವಿದ್ದು ಪವಿತ್ರ ಸ್ಥಳ ಎನ್ನುವ ನಂಬಿಕೆ ಆಸ್ತಿಕರದ್ದು. ರಮಣೀಯ ಕಡಲ ಕಿನಾರೆ, ರುದ್ರಪಾದೆ, ‘ಗದಾತೀರ್ಥ’ ದೇವರಕೆರೆಯೂ ಪ್ರವಾಸಿಗರ ಆಕರ್ಷಣೆಯ ಕೇಂದ್ರ. ಇಲ್ಲಿಗೆ ಬರುವ ಪ್ರವಾಸಿಗರಿಗಾಗಿ ಕಡಲ ಕಿನಾರೆಯಲ್ಲಿ ಹಿಂದಿನಿಂದಲೂ ‘ಗದಾತೀರ್ಥ’ ಕೆರೆಯ ಎದುರಲ್ಲೇ ಇದ್ದ ಶೌಚಗೃಹ ಪುರಸಭೆಯ ನಾಲ್ಕು ಲಕ್ಷ ರೂ. ಅನುದಾನದಲ್ಲಿ ನವೀಕರಣಗೊಳ್ಳುತ್ತಿದೆ. ಯಾರೂ ನಿರ್ವಹಣೆ ಜವಾಬ್ದಾರಿ ವಹಿಸದ ಕಾರಣ ಸ್ಥಳೀಯ ಅಂಗಡಿ ಮಾಲೀಕರೊಬ್ಬರಿಗೆ ಜವಾಬ್ದಾರಿ ನೀಡುವ ಮೂಲಕ ದುರುಪಯೋಗ ಆಗದಂತೆ ತಡೆಯಲಾಗಿದೆ.
ಸೋಮೇಶ್ವರದಲ್ಲಿ ಇತಿಹಾಸ ಪ್ರಸಿದ್ಧ ದೇವಸ್ಥಾನ ಇರುವುದರಿಂದ ಇದು ಧಾರ್ಮಿಕ ಪ್ರವಾಸಿ ತಾಣವೂ ಹೌದು. ಇಲ್ಲಿನ ದೇವಸ್ಥಾನಕ್ಕೆ ಬರುವವರು ಸಮುದ್ರ ತೀರ, ಗದಾತೀರ್ಥ ಕೆರೆ ವೀಕ್ಷಣೆಗೆ ಬರುವುದು ವಾಡಿಕೆ. ಈ ಹಿನ್ನೆಲೆಯಲ್ಲಿ ಪ್ರವಾಸಿಗರ ಅನುಕೂಲಕ್ಕಾಗಿ ಅತ್ಯಗತ್ಯ ಎನಿಸಿರುವ ಶೌಚಗೃಹ ನವೀಕರಣಗೊಂಡಿದ್ದು ಸಮರ್ಪಕ ನಿರ್ವಹಣೆ ಅಗತ್ಯ. ಪುರುಷೋತ್ತಮ ಶೆಟ್ಟಿ ಪಿಲಾರ್ ಸದಸ್ಯ, ಸೋಮೇಶ್ವರ ಪುರಸಭೆ ಕಾರ್ಯದರ್ಶಿ, ಹಿಂದೂ ರುದ್ರಭೂಮಿ ಸಮಿತಿ ಹಣಕಾಸಿನ ಸಮಸ್ಯೆಯಿಂದ ಕಾಮಗಾರಿ ವಿಳಂಬ ಆಗಿದ್ದು ಪುರಸಭೆ ಅನುದಾನದಲ್ಲಿ ಕೆಲಸ ನಡೆಸಲಾಗುತ್ತಿದೆ. ಸಮುದ್ರ ಕಿನಾರೆ ಇರುವುದರಿಂದ ನಿರ್ವಹಣೆ ಸವಾಲು. ಅತಿ ಶೀಘ್ರ ಸಾರ್ವಜನಿಕ ಉಪಯೋಗಕ್ಕೆ ನೀಡಲಾಗುವುದು. ನಂತರದ ದಿನಗಳಲ್ಲಿ ಕೇರಳ ಮಾದರಿಯಲ್ಲಿ ತೆಂಗಿನ ಚಿಪ್ಪು ಬಳಸಿ ಹೊಗೆಮುಕ್ತ ರುದ್ರಭೂಮಿ ಮಾಡುವ ಯೋಚನೆ ಸಮಿತಿ ಹೊಂದಿದೆ. ರವಿಶಂಕರ್ ಸೋಮೇಶ್ವರ ಕಾರ್ಯದರ್ಶಿ, ಹಿಂದು ರುದ್ರಭೂಮಿ ಸಮಿತಿ