ಮೈಸೂರು: ಈ ಮಣ್ಣಿನ ಶ್ರೇಷ್ಠ ಕಲೆಗಳಲ್ಲಿ ಒಂದಾದ ಯಕ್ಷಗಾನ ಪರಂಪರೆ ಮುಂದುವರಿಸಿಕೊಂಡು ಹೋಗುವ ನಿಟ್ಟಿನಲ್ಲಿ ಸರ್ಕಾರದ ಸಹಾಯ ಅತ್ಯಗತ್ಯ ಎಂದು ಉದ್ಯಮಿ ಜಿ.ಎಂ.ಹೆಗಡೆ ಹೇಳಿದರು.
ನಗರದ ಇನ್ನೊವೇಟಿವ್ ಸಂಸ್ಥೆ ಮತ್ತು ಕನ್ನಡ ಸಾಹಿತ್ಯ ಕಲಾಕೂಟದ ಸಹಯೋಗದಲ್ಲಿ ಕಲಾಮಂದಿರ ಆವರಣದ ಕಿರು ರಂಗಮಂದಿರದಲ್ಲಿ ಶನಿವಾರ ಆಯೋಜಿಸಿರುವ ಎರಡು ದಿನಗಳ ಮಹಿಳಾ ಯಕ್ಷ ಸಂಭ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ನಾಡಿನಲ್ಲಿ ಸಾಕಷ್ಟು ಕಲೆಗಳು ಇದ್ದು, ಸೂಕ್ತ ಪ್ರೋತ್ಸಾಹ ಇಲ್ಲದೆ ಸೊರಗುತ್ತಿವೆ. ಯಕ್ಷಗಾನವನ್ನೇ ಉಸಿರಾಗಿಸಿಕೊಂಡಿರುವ ಕಲಾವಿದರನ್ನು ಪ್ರೋತ್ಸಾಹಿಸಬೇಕು. ಈ ನಿಟ್ಟಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಗಮನಹರಿಸಬೇಕು ಎಂದು ಮನವಿ ಮಾಡಿದರು.
ಮಹಿಳಾ ಕಲಾವಿದರು ಯಕ್ಷಗಾನ ಕಲೆ ಬೆಳೆಸಲು ಶ್ರಮಿಸುತ್ತಿರುವುದು ಹೆಮ್ಮೆಯ ಸಂಗತಿ. ಯಕ್ಷಗಾನವನ್ನೇ ನಂಬಿ ಬದುಕುತ್ತಿರುವ ಕಲಾವಿದರು ಸಾಕಷ್ಟಿದ್ದಾರೆ. ಯಕ್ಷಗಾನ ಕಲೆಗೆ ಮೈಸೂರಿನಲ್ಲಿ ದೊರಕಿರುವಷ್ಟು ಅಭೂತಪೂರ್ವ ಪ್ರೋತ್ಸಾಹ, ಬೆಂಬಲ ಮತ್ತೆಲ್ಲೂ ಸಿಕ್ಕಿಲ್ಲ. ಇದು ನಿರಂತರವಾಗಿರಬೇಕು. ಮುಂದಿನ ಪೀಳಿಗೆ ಕಲಾವಿದರಿಗೂ ಇಲ್ಲಿನ ಕಲಾಸಕ್ತರು ಬೆನ್ನು ತಟ್ಟುವ ಮೂಲಕ ಶ್ರೇಷ್ಠ ಕಲೆಯನ್ನು ಬೆಳೆಸಬೇಕು ಎಂದು ಹೇಳಿದರು.
ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಸಂದಿದ್ದಕ್ಕೆ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಯಕ್ಷಗಾನ ವಿದ್ವಾಂಸ ಡಾ.ಕಬ್ಬಿನಾಲೆ ವಸಂತ ಭಾರದ್ವಾಜ್, ಈ ಬಾರಿಯ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಘೋಷಣೆಯಾದಾಗ ಎಲ್ಲರಂತೆ ನನಗೂ ಆಶ್ಚರ್ಯವಾಯಿತು. ಜೊತೆಗೆ ಸಂಕೀರ್ಣ ಕ್ಷೇತ್ರದಲ್ಲಿ ನನ್ನನ್ನು ಪ್ರಶಸ್ತಿಗೆ ಆಯ್ಕೆ ಮಾಡಿದ್ದು ಸಮಾಧಾನ ತಂದಿತು ಎಂದರು.
ಇನ್ನೋವೇಟಿವ್ ಸಂಸ್ಥೆಯ ಅಧ್ಯಕ್ಷ ಜಿ.ಎಸ್.ಭಟ್ ಮಾತನಾಡಿ, ಹಲವು ವರ್ಷಗಳಿಂದ ಯಕ್ಷಗಾನ ಆಯೋಜಿಸಿಕೊಂಡು ಬರಲಾಗುತ್ತಿದ್ದು, ಈ ವರ್ಷ ವಿಶೇಷವಾಗಿ ಮಹಿಳಾ ಯಕ್ಷಗಾನ ಆಯೋಜಿಸಿದ್ದೇವೆ. ಮುಂದಿನ ಪೀಳಿಗೆಯವರು ಯಕ್ಷಗಾನ ಕಲಾಸೇವೆಯನ್ನು ಮುಂದುವರಿಸಿಕೊಂಡು ಹೋಗಬೇಕಿದೆ ಎಂದು ಹೇಳಿದರು.
ಕನ್ನಡ ಸಾಹಿತ್ಯ ಕಲಾಕೂಟದ ಅಧ್ಯಕ್ಷ ಎಂ.ಚಂದ್ರಶೇಖರ್, ಸಂಸ್ಕೃತಿ ಪೋಷಕ ಕೆ.ರಘುರಾಂ ವಾಜಪೇಯಿ, ನಿವೃತ್ತ ಪ್ರಾಧ್ಯಾಪಕ ಪ್ರೊ.ಎಸ್.ಎನ್.ಹೆಗಡೆ, ಇನೋವೇಟಿವ್ ಕಾರ್ಯದರ್ಶಿ ಹೇರಂಬ ಭಟ್ಟ, ಸಹಕಾರಿ ಜಗದೀಶ್ ಹೆಬ್ಬಾರ್, ಉದ್ಯಮಿ ಎ.ಪಿ.ನಾಗೇಶ್ ಇತರರು ಇದ್ದರು.
ಬೆಂಗಳೂರಿನ ಕರ್ನಾಟಕ ಮಹಿಳಾ ಯಕ್ಷಗಾನ ತಂಡದ ಕಲಾವಿದರಿಂದ ಕೀರಿಕ್ಕಾಡು ಮಾಸ್ತರ್ ವಿಷ್ಣು ಭಟ್ ರಚಿಸಿ, ಶ್ರೀನಿವಾಸ ಸಾಸ್ತಾನ ನಿರ್ದೇಶಿಸಿರುವ ಶಿವ ಪಂಚಾಕ್ಷರಿ ಮಹಿಮೆ ಪ್ರಸಂಗ ಪ್ರಸ್ತುತಪಡಿಸಲಾಯಿತು. ಡಿ.17ರಂದು ಸಂಜೆ 6ಕ್ಕೆ ದೇವದಾಸ ವಿರಚಿತ ಚಕ್ರವ್ಯೆಹ ಪ್ರಸಂಗ ಪ್ರದರ್ಶನಗೊಳ್ಳಲಿದೆ.