ಜಿಲ್ಲೆ

ಎಸ್‌ಡಿಪಿಐಯಿಂದ ಸುವರ್ಣಸೌಧ ಚಲೋ

ಆರ್.ಕೃಷ್ಣ

ಮೈಸೂರು: ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಡಿ.10ರಂದು ಎಸ್‌ಡಿಪಿಐಯಿಂದ ಉಡುಪಿಯಿಂದ ಬೆಳಗಾವಿ ಸುವರ್ಣಸೌಧ ಚಲೋ, ಅಂಬೇಡ್ಕರ್ ಜಾಥಾ ಆಯೋಜಿಸಲಾಗಿದೆ ಎಂದು ಎಸ್‌ಡಿಪಿಐ ಅಧ್ಯಕ್ಷ ಅಬ್ದುಲ್ ಮಜೀದ್ ತಿಳಿಸಿದರು.

ಉಡುಪಿಯಿಂದ ಹೊರಡುವ ವಾಹನ ಜಾಥಾ ದಕ್ಷಿಣ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ, ದಾವಣಗೆರೆ, ಹಾವೇರಿ, ಕೊಪ್ಪಳ, ಬಾಗಲಕೋಟೆ, ಹುಬ್ಬಳ್ಳಿ, ಧಾರವಾಡ ಜಿಲ್ಲೆಗಳ ಮೂಲಕ ಸಾಗಿ ಡಿ.16 ರಂದು ಬೆಳಗಾವಿಯ ಸುವರ್ಣ ವಿಧಾನಸೌಧ ತಲುಪಲಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪರಿಶಿಷ್ಟ ಜಾತಿ ಒಳಮೀಸಲಾತಿ ಕೂಡಲೇ ಜಾರಿಗೊಳ್ಳಬೇಕು, ಮುಸ್ಲಿಮರಿಗೆ 2ಬಿ ಮೀಸಲಾತಿ ನೀಡಿ ಶೇ.8ರಷ್ಟು ಮೀಸಲಾತಿ ನೀಡಬೇಕು, ಕಾಂತರಾಜು ವರದಿಯನ್ನು ಬಹಿರಂಗಪಡಿಸಿ ಅನುಷ್ಠಾನಗೊಳಿಸಬೇಕು, ವಕ್ಫ್ ಆಸ್ತಿ ರಕ್ಷಣೆ ಮಾಡಲು ಬಿಜೆಪಿ ಸಂವಿಧಾನಬಾಹಿರವಾಗಿ ತಿದ್ದುಪಡಿ ಮಾಡಲು ಹೊರಟಿರುವುದನ್ನು ತಡೆಯಬೇಕು, ಎಸ್‌ಸಿ, ಎಸ್‌ಟಿಗೆ ಮೀಸಲಿಟ್ಟ ಹಣ ಬೇರೆ ಯೋಜನೆಗೆ ಬಳಸಬಾರದು, ಅಲ್ಪಸಂಖ್ಯಾತರಿಗೆ ಮುಂಬರುವ ಬಜೆಟ್‌ನಲ್ಲಿ 10 ಸಾವಿರ ಕೋಟಿ ರೂ. ಮೀಸಲಿಡಬೇಕು, ಖಾಸಗಿ ವಲಯದಲ್ಲಿ ಮೀಸಲಾತಿ ನೀಡಬೇಕು ಎನ್ನುವುದು ಸೇರಿದಂತೆ ಇನ್ನಿತರ ಬೇಡಿಕೆ ಈಡೇರಿಕೆಗೆ ಒತ್ತಾಯಿಸಲಾಗುವುದು ಎಂದು ಹೇಳಿದರು.

ನಮ್ಮ್ಮದು ಅಹಿಂದ ಸರ್ಕಾರ, ಸಾಮಾಜಿಕ ನ್ಯಾಯದ ಪರ ಎಂದು ಹೇಳಿಕೊಳ್ಳುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಹಿಂದ ವರ್ಗಗಳ ಜ್ವಲಂತ ಸಮಸ್ಯೆಗೆ ಶಾಶ್ವತ ಪರಿಹಾರ ನೀಡುತ್ತಿಲ್ಲ. ಕೇವಲ ನೆಪಮಾತ್ರಕ್ಕೆ ಹೇಳಿಕೆ ನೀಡಿ, ಕಣ್ಣೊರೆಸುವ ತಂತ್ರ ಅನುಸರಿಸುತ್ತಿದೆ. ಹೀಗಾಗಿ ಅಂಬೇಡ್ಕರ್ ಜಾಥಾ ಹಮ್ಮಿಕೊಂಡಿದ್ದು, ಐದು ಸಾವಿರ ಜನರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಮುಖಂಡರಾದ ರಫತ್‌ಖಾನ್, ದೇವನೂರು ಪುಟ್ಟನಂಜಯ್ಯ, ಎಸ್.ಸ್ವಾಮಿ ಇದ್ದರು.