ಜಿಲ್ಲೆ

ಕಾಂಗ್ರೆಸ್ ಸರ್ಕಾರದ ವಿರುದ್ಧ ಎಸ್‌ಡಿಪಿಐ ಪ್ರತಿಭಟನೆ

ಮಂಜುನಾಥ ತಿಮ್ಮಯ್ಯ

ಮೈಸೂರು; ಮುಸ್ಲಿಂ ಸಮುದಾಯದ ವಿರುದ್ಧ ನಡೆಯುತ್ತಿರುವ ಕೋಮುವಾದಿ ದಾಳಿಯನ್ನು ತಡೆಯುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ವತಿಯಿಂದ ಪ್ರತಿಭಟನೆ ನಡೆಯಿತು.


ನಗರದ ಬನುಮಯ್ಯ ವೃತ್ತದ ಜಮಾವಣೆಗೊಂಡ ಪ್ರತಿಭಟನಾಕಾರರು, ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಸಂಘ ಪರಿವಾರ ಮತ್ತು ಬಿಜೆಪಿ ದುರಾಡಳಿತ, ಕೋಮುವಾದಿ ನಿಲುವಿನಿಂದ ರಾಜ್ಯಾದ್ಯಂತ ಸೃಷ್ಟಿಯಾಗಿರುವ ಭಯದ ವಾತಾವರಣವನ್ನು ಕಾಂಗ್ರೆಸ್ ಆಡಳಿತಕ್ಕೆ ಬಂದರೆ ಸರಿ ಮಾಡುತ್ತದೆಂಬ ಭರವಸೆ ಹುಸಿಯಾಗಿದೆ. ಮುಸ್ಲಿಂ ಸಮುದಾಯದ ಹಾಗೂ ಮಹಿಳೆಯರ ವಿರುದ್ಧ ದಾಳಿಗಳು ಹೆಚ್ಚಾಗುತ್ತಿದೆ ಎಂದು ಕಿಡಿಕಾರಿದರು.


ಮುಸ್ಲಿಮರ ಸಾಂವಿಧಾನಿಕ ಹಕ್ಕುಗಳ ವಿರುದ್ಧ ಷಡ್ಯಂತ್ರ ಮಾಡುತ್ತಿರುವ ಸಂಘ ಪರಿವಾರವನ್ನು ತಡೆಯುವಲ್ಲಿ ಕಾಂಗ್ರೆಸ್ ಅಸಹಾಯಕವಾಗಿದೆ. ಬಿಜೆಪಿ ಕಿತ್ತುಕೊಂಡಿರುವ ಮುಸ್ಲಿಂ ಮೀಸಲಾತಿಯನ್ನು ರದ್ದುಗೊಳಿಸಿ ಮೀಸಲಾತಿ ಹೆಚ್ಚಿಸುವ ಚುನಾವಣೆ ಮುಂಚಿನ ಆಶ್ವಾಸನೆ ಈಡೇರಿಲ್ಲ. ಕೂಡಲೇ ಮುಸ್ಲಿಂ ಸಮುದಾಯದ ಭರವಸೆ ಈಡೇರಿಸಬೇಕು. ಜತೆಗೆ, ಸಮುದಾಯದ ಮೇಲಿನ ದಾಳಿಗಳನ್ನು ತಡೆಯಬೇಕು ಎಂದು ಆಗ್ರಹಿಸಿದರು.


ಎಸ್‌ಡಿಪಿಐ ಜಿಲ್ಲಾಧ್ಯಕ್ಷ ರಫತುಲ್ಲಾ ಖಾನ್, ಮುಖಂಡರಾದ ಮೊಹಮ್ಮದ್ ಶಫಿ, ಫರ್ಹಾದೀನ್ ಖಾನ್, ವುಮನ್ ಇಂಡಿಯಾ ಮೂವೆಂಟ್ ರಾಜ್ಯ ಸಮಿತಿ ಸದಸ್ಯೆ ಸಾನಿಯಾ, ರಾಜ್ಯ ಉಪಾಧ್ಯಕ್ಷ ಪುಟ್ಟ ನಂಜಯ್ಯ, ಉಪಾಧ್ಯಕ್ಷ ಸ್ವಾಮಿ ಮತ್ತಿತರರಿದ್ದರು.