ಮಡಿಕೇರಿ: ಮೋದಿ ಸರ್ಕಾರ ಕೂಡಲೇ ದಿನ ಬಳಕೆ ಆಹಾರ ವಸ್ತುಗಳ ಮೇಲೆ ಹಾಕಿರುವ ಜಿ.ಎಸ್.ಟಿ ಆದೇಶವನ್ನು ಹಿಂಪಡೆಯಬೇಕೆಂದು ಆಗ್ರಹಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ವತಿಯಿಂದ ನಗರದ ಇಂದಿರಾಗಾಂಧಿ ವೃತ್ತದಲ್ಲಿ ಬುಧವಾರ ಪ್ರತಿಭಟನೆ ನಡೆಸಲಾಯಿತು.
ಈ ಸಂದರ್ಭ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನಾ ನಿರತರು ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ನಗರಸಭೆ ಸದಸ್ಯ ಅಮೀನ್ ಮೋಯಿಸಿನ್ ಮಾತನಾಡಿ, ಹಾಲು, ಮೊಸರು, ಮಜ್ಜಿಗೆಯಂತಹ ದಿನಬಳಕೆಯ ಅಗತ್ಯ ಆಹಾರ ವಸ್ತುಗಳ ಮೇಲೆ ಜಿಎಸ್‌ಟಿ ವಿಧಿಸುವ ಮೂಲಕ ಬಿಜೆಪಿ ಸರ್ಕಾರ ಬಡವರ ಬದುಕಿನ ಮೇಲೆ ಪ್ರಹಾರ ನಡೆಸಿದೆ. ಇದು ಬಹಳ ಸೂಚನೀಯವಾಗಿದೆ. ಸರ್ಕಾರ ಜನರ ಹಿತ ಕಾಪಾಡಬೇಕೆ ಹೊರತು ದಬ್ಬಾಳಿಕೆಯಲ್ಲ. ಮುಂದಿನ ದಿನಗಳಲ್ಲಿ ಶ್ರೀಲಂಕ ಮಾದರಿಯಲ್ಲಿ ಜನ ಎಚ್ಚೆತ್ತುಕೊಳ್ಳಲಿದ್ದಾರೆ ಎಂದು ಹೇಳಿದರು.
ನಿರೂದ್ಯೋಗದ ಪರಿಸ್ಥಿತಿ ಕಾಡುತ್ತಿದೆ. ಇದರ ನಡುವೆ ಸರ್ಕಾರ ತೆರಿಗೆಯನ್ನು ತನ್ನ ಬೊಕ್ಕಸಕ್ಕೆ ತುಂಬಿಸುವ ಕೆಲಸ ಮಾಡುತ್ತಿದೆ. ಅಚ್ಚೇದಿನ್ ಹೆಸರಿನಲ್ಲಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಜನರ ರಕ್ತವನ್ನು ಹೀರಿ ಅವರ ಬದುಕನ್ನು ಕಸಿಯುತ್ತಿದೆ. ಜನಸಾಮನ್ಯರು ಕೇಂದ್ರದ ಜನ ವಿರೋಧಿ ನೀತಿಯನ್ನು ಅರಿತು ಧ್ವನಿ ಎತ್ತುವಂತಾಗಬೇಕು ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಕಲೀಲ್ ಕಿಯೇಟಿವ್, ನಗರಸಭೆ ಸದಸ್ಯರಾದ ಮನ್ಸೂರು, ಬಶೀರ್ ಅಹಮ್ಮದ್, ಮೇರಿ ವೇಗಸ್, ನಗರಾಧ್ಯಕ್ಷ ರಿಜ್ವಾನ್, ಪ್ರಮುಖರಾದ ಸಫಿ ಕುಶಾಲನಗರ, ಅಬ್ದುಲ್ ಅಡ್ಕರ್ ಹಾಗೂ ಕಾರ್ಯಕರ್ತರಿದ್ದರು.