ಗುರುಪುರ: ಸ್ವಾತಂತ್ರ್ಯ ಅಮೃತ ಮಹೋತ್ಸವದಂಗವಾಗಿ ಸೋಮವಾರ ಗುರುಪುರ ಗ್ರಾಮ ಪಂಚಾಯಿತಿನಲ್ಲಿ ಸ್ಥಳೀಯ ಖಾಸಗಿ ಶಾಲಾ ಮಕ್ಕಳ ನೃತ್ಯದಲ್ಲಿ ವೀರ ಸಾವರ‌್ಕರ್ ಭಾವಚಿತ್ರ ಪ್ರದರ್ಶಿಸಿದ್ದನ್ನು ಪಂಚಾಯಿತಿ ಎಸ್‌ಡಿಪಿಐ ಬೆಂಬಲಿತ ಸದಸ್ಯರು ಶಾಲಾ ಶಿಕ್ಷಕಿಯನ್ನು ತರಾಟೆಗೆ ತೆಗೆದುಕೊಂಡು ಕ್ಷಮೆ ಯಾಚಿಸುವಂತೆ ಮಾಡಿದ ಘಟನೆ ನಡೆದಿದೆ.
ಘಟನೆಯಿಂದ ಕೋಪೋದ್ರಿಕ್ತಗೊಂಡ ಪಂಚಾಯಿತಿ ಬಿಜೆಪಿ ಬೆಂಬಲಿತ ಸದಸ್ಯರು ಪಂಚಾಯಿತಿ ಮೈದಾನದಲ್ಲಿ ಮಿಂಚಿನ ಪ್ರತಿಭಟನೆ ನಡೆಸಿ ಅಧ್ಯಕ್ಷರ ರಾಜೀನಾಮೆಗೆ ಆಗ್ರಹಿಸಿದರು.
ನೃತ್ಯ ಕಾರ್ಯಕ್ರಮ ಮುಗಿಯುತ್ತಲೇ ಸ್ಥಳದಲ್ಲಿದ್ದ ಎಸ್‌ಡಿಪಿಐ ಸದಸ್ಯರು ಹಾಗೂ ಅವರ ಬೆಂಬಲಿಗರು ನೃತ್ಯ ಶಿಕ್ಷಕಿಯನ್ನು ತಡೆದು, ಕ್ಷಮೆ ಯಾಚಿಸುವಂತೆ ಆಗ್ರಹಿಸಿದರು. ತಕ್ಷಣ ವೇದಿಕೆ ಹತ್ತಿದ ಶಿಕ್ಷಕಿ ಎಲ್ಲರೆದುರು ಸಾರ್ವಜನಿಕವಾಗಿ ಕ್ಷಮೆ ಯಾಚಿಸಿದರು.
ಈ ವಿಷಯ ಬಿಜೆಪಿ ಕಾರ್ಯಕರ್ತರಿಗೆ ತಿಳಿಯುತ್ತಲೇ ಮೈದಾನಕ್ಕೆ ಆಗಮಿಸಿ ಎಸ್‌ಡಿಪಿಐ ಕಾರ್ಯಕರ್ತರ ಕಿಡಿಗೇಡಿ ವರ್ತನೆ ಪ್ರಶ್ನಿಸಿದರು. ಈ ವೇಳೆ ಮಾತಿನ ಚಕಮಕಿ ನಡೆಯಿತು. ಈ ಬಗ್ಗೆ ಪೊಲೀಸ್ ದೂರು ನೀಡುವಂತೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಬೂಬಕ್ಕರ್ ಮತ್ತು ಅಧ್ಯಕ್ಷ ಯಶವಂತ ಕುಮಾರ್ ಶೆಟ್ಟಿ ಅವರನ್ನು ಆಗ್ರಹಿಸಿ ಪ್ರತಿಭಟನೆ ನಡೆಸಿದರು. ಬಳಿಕ ಬಜ್ಪೆ ಪೊಲೀಸ್ ನಿರೀಕ್ಷಕ ಪ್ರಕಾಶ್ ನೇತೃತ್ವದ ತಂಡ ಸ್ಥಳಕ್ಕೆ ಆಗಮಿಸಿ ಘಟನೆ ಬಗ್ಗೆ ಮಾಹಿತಿ ಪಡೆದುಕೊಂಡರು.
ಎಸ್‌ಡಿಪಿಐ ಕಾರ್ಯಕರ್ತರು ಭಾರತದ ಸ್ವಾತಂತ್ರ್ಯ ಹೋರಾಟಗಾರರ ಇತಿಹಾಸ ತಿರುಚಲು ಪ್ರಯತ್ನಿಸುತ್ತಿದ್ದಾರೆ. ಶಿಕ್ಷಕಿಯಿಂದ ಬಲವಂತ ಕ್ಷಮೆ ಯಾಚಿಸಿ ಅನಾಗರಿಕತೆ ಪ್ರದರ್ಶಿಸಿದ್ದಾರೆ. ಘಟನೆ ಬಗ್ಗೆ ಪಂಚಾಯಿತಿ ಆಡಳಿತ ದೂರು ನೀಡಬೇಕು. ದೂರು ನೀಡದಿದ್ದಲ್ಲಿ ಬಿಜೆಪಿ ಪ್ರತಿಭಟನೆ ತೀವ್ರಗೊಳಿಸಲಿದೆ.
- ಡಾ.ಭರತ್ ಶೆಟ್ಟಿ, ಶಾಸಕ
ಕ್ಷಮೆ ಯಾಚಿಸಿರುವ ಶಾಲಾ ಶಿಕ್ಷಕಿ ಈ ಘಟನೆ ಇಲ್ಲಿಗೆ ತಿಳಿಗೊಳಿಸಬೇಕೆಂದು ಮನವಿ ಮಾಡಿಕೊಂಡಿದ್ದಾರೆ. ಪೊಲೀಸ್ ದೂರು ನೀಡುವುದು ಪಿಡಿಒ ಅವರಿಗೆ ಬಿಟ್ಟ ವಿಷಯ. ಒಮ್ಮೆ ಮುಗಿದ ವಿಷಯಕ್ಕೆ ಸಂಬಂಧಿಸಿ ನಾನು ದೂರು ನೀಡುವುದಿಲ್ಲ.
-ಯಶವಂತ ಕುಮಾರ್ ಶೆಟ್ಟಿ, ಪಂಚಾಯಿತಿ ಅಧ್ಯಕ್ಷ