ಜಿಲ್ಲೆ

ರಮೇಶ್ ಬಂಡಿಸಿದ್ದೇಗೌಡ ವಿರುದ್ಧ ಎಸ್‌ಡಿಪಿಐ ಪ್ರತಿಭಟನೆ

ಸುನಿಲ್ ಪೊನ್ನೇಟಿ

ಕುಶಾಲನಗರ:

ಕಾಂಗ್ರೆಸ್ ಶಾಸಕ ರಮೇಶ್ ಬಂಡಿಸಿದ್ದೇಗೌಡ ಅವರನ್ನು ಶಾಸಕ ಸ್ಥಾನದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿ ಕುಶಾಲನಗರದ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ವತಿಯಿಂದ ಕುಶಾಲನಗರದ ಜ. ಕಾರ್ಯಪ್ಪ ವೃತ್ತದಲ್ಲಿ ಬುಧವಾರ ಸಂಜೆ ಪ್ರತಿಭಟನೆ ನಡೆಸಲಾಯಿತು.

ಎಸ್.ಡಿ.ಪಿ.ಐ. ಕುಶಾಲನಗರ ನಗರಾಧ್ಯಕ್ಷ ಜಕ್ರಿಯಾ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ರಮೇಶ್ ಬಂಡಿಸಿದ್ದೇಗೌಡ ಅವರ ಪ್ರತಿಕೃತಿ ಹಿಡಿದು ಅವರ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ಹೊರಹಾಕಲಾಯಿತು. ಕಾಂಗ್ರೆಸ್ ಪಕ್ಷದಿಂದ ಹಾಗೂ ಶಾಸಕ ಸ್ಥಾನದಿಂದ ಕೂಡಲೇ ಅವರನ್ನು ವಜಾಗೊಳಿಸಬೇಕು ಎಂದು ಪ್ರತಿಭಟನಾಕಾರರು ಈ ಸಂದರ್ಭ ಒತ್ತಾಯಿಸಿದರು.

ಈ ವೇಳೆ ಮಾತನಾಡಿದ ಎಸ್.ಡಿ.ಪಿ.ಐ. ಪ್ರಧಾನ ಕಾರ್ಯದರ್ಶಿ ಉಸ್ಮಾನ್, ಕಾಂಗ್ರೆಸ್ ಪಕ್ಷ ಜಾತ್ಯತೀತ ಪಕ್ಷ ಎಂದು ಹೇಳಿಕೊಳ್ಳುತ್ತದೆ. ಆದರೆ ಇಂತಹ ಶಾಸಕರ ಅಸಂವಿಧಾನಿಕ ನಡೆಯಿಂದ ಸರ್ಕಾರವೇ ತಲೆ ತಗ್ಗಿಸುವಂತಾಗಿದೆ.

ಆದ್ದರಿಂದ ಕಾಂಗ್ರೆಸ್ ನೈಜ ಜಾತ್ಯತೀತ ಪಕ್ಷವೇ ಆದಲ್ಲಿ ರಮೇಶ್ ಬಂಡಿಸಿದ್ದೇಗೌಡರವರನ್ನು ವಜಾಗೊಳಿಸಬೇಕು ಎಂದರು.

ಎಸ್.ಡಿ.ಪಿ.ಐ ಮುಖಂಡ ಹಾಗೂ ರಾಜ್ಯ ಸಮಿತಿ ಸದಸ್ಯ ನೂರುದ್ಧೀನ್ ಫಾರೂಖಿ ಮಾತನಾಡಿ, ಮುಸಲ್ಮಾನರ ಹೆಸರಿಗೆ ಜಮೀನು ಮಾಡಿದರೆ ನೇಣಿಗೇರಿಸುವುದಾಗಿ ಅಧಿಕಾರಿಗೆ ಬೆದರಿಕೆ ಹಾಕಿದ ಶಾಸಕನ ವಿರುದ್ಧ ಕೂಡಲೇ ಸಂವಿಧಾನದಡಿ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭ ಮಡಿಕೇರಿ ವಿಧಾನ ಕ್ಷೇತ್ರ ಸಮಿತಿ ಅಧ್ಯಕ್ಷ ಭಾಷಾ, ಪ್ರಮುಖರಾದ ಅಜೀಜ್, ರಫಿಕ್, ಖಲೀಲ್, ಸಲಾಂ ಇನ್ನಿತರರು ಇದ್ದರು.