ಜಿಲ್ಲೆ

ಲಾಭಗಳಿಕೆಯೇ ಸಂಸ್ಥೆಗಳ ಉದ್ದೇಶವಾಗಬಾರದು : ಎಟಿಎಂಎ ಫೌಂಡೇಷನ್ ನಿರ್ದೇಶಕ ಸಿ.ಕೆ. ಸುರೇಶ್

ಸದೇಶ್ ಕಾರ್ಮಾಡ್

ಮೈಸೂರು: ಸಂಸ್ಥೆಗಳು ಲಾಭಗಳಿಕೆಯ ಜತೆಗೆ ಉದ್ಯೋಗಿಗಳ ಮತ್ತು ಭೂಮಿಯ ರಕ್ಷಣೆಯನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು. ಈ ಪ್ರಕ್ರಿಯೆಯಲ್ಲಿ ಮಾನವ ಸಂಪನ್ಮೂಲ ನಿರ್ವಹಣೆಯು ಅವಿಭಾಜ್ಯ ಅಂಗವಾಗಬೇಕು ಎಂದು ಎಟಿಎಂಎ ಫೌಂಡೇಷನ್ ನಿರ್ದೇಶಕ ಸಿ.ಕೆ. ಸುರೇಶ್ ಹೇಳಿದರು.

ನಗರದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಇನ್‌ಸ್ಟಿಟ್ಯೂಟ್ ಫಾರ್ ಮ್ಯಾನೇಜ್ಮೆಂಟ್ ಡೆವಲಪ್ಮೆಂಟ್ ಸಂಸ್ಥೆಯಲ್ಲಿ ಬೆಂಗಳೂರು ಚೇಂಬರ್ ಆಫ್ ಇಂಡಸ್ಟ್ರಿ ಆ್ಯಂಡ್ ಕಾಮರ್ಸ್ ಸಹಯೋಗದೊಂದಿಗೆ ಗುರುವಾರ ಆಯೋಜಿಸಿದ್ದ ‘ಸಾಂಸ್ಥಿಕ ಸುಸ್ಥಿರತೆಗಾಗಿ ಮಾನವ ಸಂಪನ್ಮೂಲ’ ಕುರಿತ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ಸಾಂಸ್ಥಿಕ ಸುಸ್ಥಿರತೆಯನ್ನು ನಿಜವಾದ ಅರ್ಥದಲ್ಲಿ ತಲುಪಲು ಕಾರ್ಪೊರೇಟ್ ಪ್ರಪಂಚದ ಮನಸ್ಥಿತಿಯ ಬದಲಾವಣೆಯ ಅವಶ್ಯಕತೆ ಇದೆ ಎಂದು ಹೇಳಿದರು.

ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿಯ ನಿಯಮಾವಳಿಗಳನ್ನು ಅಳವಡಿಸಿಕೊಳ್ಳುವುದರ ಮೂಲಕ ಸುಸ್ಥಿರತೆಯನ್ನು ಸಾಧಿಸಲು ಸಾಧ್ಯವೇ ಹೊರತು, ಕೇವಲ ಚಟುವಟಿಕೆಗಳಿಂದ ಸಾಧ್ಯವಿಲ್ಲ. ಸುಸ್ಥಿರತೆಯನ್ನು ಸಾಧಿಸುವುದು ಈಗಿನ ಗುರಿಯಾಗಿರಬೇಕು. ಆ ಧ್ಯೇಯವನ್ನು ಮುಂದಿನ ಸಮಯಕ್ಕೆ ತಳ್ಳುವಂತಾಗಬಾರದು ಎಂದರು.

ಎಸ್‌ಡಿಎಂಐಎಂಡಿ ನಿರ್ದೇಶಕ ಡಾ.ಎಸ್.ಎನ್. ಪ್ರಸಾದ್ ಮಾತನಾಡಿ, ಮಾನವ ಸಂಪನ್ಮೂಲ ನಿರ್ವಹಣೆಯ ನಿಯಮಾವಳಿಗಳನ್ನು ಮಾಡುವ ಮುನ್ನ ಸಂಸ್ಥೆಗಳು ಎಲ್ಲ ಉದ್ಯೋಗಿಗಳ ಆಸಕ್ತಿಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂದು ಹೇಳಿದರು. ವೇದಿಕೆಯಲ್ಲಿ ಸಮ್ಮೇಳನದ ಮುಖ್ಯಸ್ಥ ಡಾ.ಮೌಸುಮಿ ಸೇನ್ ಗುಪ್ತ ಇದ್ದರು.