ಬೆಳ್ತಂಗಡಿ : ಉಜಿರೆ ಎಸ್‌ಡಿಎಂ ಪ್ರಕೃತಿ ಮತ್ತು ಯೋಗ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಮೂರು ದಿನಗಳ ಮಕ್ಕಳ ಯೋಗ ತರಬೇತಿ ಶಿಬಿರದ ಸಮಾರೋಪ ಸಮಾರಂಭ ನಡೆಯಿತು.
ಯೋಗ ವಿಭಾಗದ ಡೀನ್ ಡಾ.ಶಿವಪ್ರಸಾದ್ ಶೆಟ್ಟಿ ಮಾತನಾಡಿ, ಶಿಬಿರದಲ್ಲಿ ಸುಮಾರು 20 ಶಾಲೆಗಳಿಂದ 112 ವಿದ್ಯಾರ್ಥಿಗಳು ಭಾಗವಹಿಸಿದ್ದು, ಸಂಪನ್ಮೂಲ ವ್ಯಕ್ತಿಗಳಿಂದ ವಿದ್ಯಾರ್ಥಿಗಳಿಗೆ ಯೋಗಾಸನ, ಪ್ರಾಣಯಾಮ ಕಲಿಸಿಕೊಡಲಾಗಿದೆ. ನಿತ್ಯವೂ ಇವುಗಳನ್ನು ಅಭ್ಯಸಿಸಿ ಎಂದರು.
ಡಾ ಪ್ರಶಾಂತ್ ಶೆಟ್ಟಿ ಮಾತನಾಡಿ, ಬ್ರಹ್ಮ ಮಹೂರ್ತದಲ್ಲಿ ಯೋಗ ಮಾಡುವುದರಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ಹೆಚ್ಚಿಸಬಹುದು ಮತ್ತು ಮಕ್ಕಳ ಬುದ್ಧಿ ಶಕ್ತಿ ಚುರುಕು ಮಾಡಬಹುದು ಎಂದರು.
ಆಹಾರ ತಜ್ಞೆ ಡಾ.ಗೀತಾ ಶೆಟ್ಟಿ ಪೌಷ್ಟಿಕ ಆಹಾರದ ಪ್ರಯೋಜನಗಳ ಕುಕುರಿತು ಮಾಹಿತಿ ನೀಡಿದರು. ಎಸ್‌ಡಿಎಂ ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ. ಅಶೋಕ್ ಕುಮಾರ್ ಟಿ. ಶುಭಹಾರೈಸಿದರು. ಬಳಿಕ ಎಲ್ಲ ಶಿಬಿರಾರ್ಥಿಗಳಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು. ಡಾ ಸುಜಾತ ವಂದಿಸಿದರು.
ಪ್ರಕೃತಿ ಚಿಕಿತ್ಸಾ ವಿಭಾಗದ ತಜ್ಞೆ ಡಾ.ಸುಜಾತ ಶಿಬಿರಾರ್ಥಿಗಳಿಗೆ ನಾದನುಸಂಧಾನ ಅಭ್ಯಾಸ ಮಾಡಿಸುವ ಮೂಲಕ ಓಂ ಮಂತ್ರದ ಮಹತ್ವವನ್ನು ತಿಳಿಸಿದರು. ಓಂ ಮಂತ್ರದಿಂದ ಉಂಟಾಗುವ ದೈಹಿಕ ಹಾಗೂ ಮಾನಸಿಕ ಶಕ್ತಿಯ ವೃದ್ಧಿ ಕುರಿತು ವಿವರಿಸಿದರು.