ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ವಿಜ್ಞಾನ ರಂಗದ ಮಹತ್ತರ ಬದಲಾವಣೆಗಳು ವೈಜ್ಞಾನಿಕ ಮನೋಧರ್ಮವನ್ನು ನೆಲೆಗೊಳಿಸಿದ್ದಲ್ಲದೆ ಆಹಾರವೂ ಸೇರಿದಂತೆ ವಿವಿಧ ವಲಯಗಳಲ್ಲಿ ಸ್ವಾವಲಂಬಿ ಆಗುವುದಕ್ಕೆ ಪೂರಕವಾಗಿವೆ ಎಂದು ಬೆಂಗಳೂರಿನ ಸೆಂಟರ್ ಫಾರ್ ನ್ಯಾನೋ ಆ್ಯಂಡ್ ಸಾಫ್ಟ್ ಮ್ಯಾಟರ್ ಸೈನ್ಸಸ್‌ನ ನಿರ್ದೇಶಕ, ನ್ಯಾನೋ ಜಾಥಾ ನೋಡಲ್ ಅಧಿಕಾರಿ ಡಾ.ಬಿ.ಎಲ್.ವಿ.ಪ್ರಸಾದ್ ಹೇಳಿದರು.
ಎಸ್‌ಡಿಎಂ ಸ್ನಾತಕೋತ್ತರ ಕೇಂದ್ರದ ರಸಾಯನ ಶಾಸ್ತ್ರ ವಿಭಾಗ, ಬೆಂಗಳೂರಿನ ಸೆಂಟರ್ ಫೋರ್ ನ್ಯಾನೋ ಆ್ಯಂಡ್ ಸಾಫ್ಟ್ ಮ್ಯಾಟರ್ ಸೈನ್ಸ್ ಹಾಗೂ ಕರ್ನಾಟಕ ಸೈನ್ಸ್ ಆ್ಯಂಡ್ ಟೆಕ್ನಾಲಜಿ ಪ್ರಮೋಷನ್ ಸೊಸೈಟಿ ಸಹಯೋಗದೊಂದಿಗೆ ಮಂಗಳವಾರ ನಡೆದ ನ್ಯಾನೋ ಜಾಥಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಎಸ್‌ಡಿಎಂ ಸಂಸ್ಥೆ ಕಾರ್ಯದರ್ಶಿ ಡಾ.ಸತೀಶ್ಚಂದ್ರ ಎಸ್.ಉದ್ಘಾಟಿಸಿದರು. ಪ್ರಾಂಶುಪಾಲ ಡಾ.ಬಿ.ಎ.ಕುಮಾರ ಹೆಗ್ಡೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈ ಎರಡು ದಿನದ ಕಾರ್ಯಕ್ರಮ ಕೇವಲ ಭಾಷಣ, ಉಪನ್ಯಾಸಗಳಿಗೆ ಸೀಮಿತವಾಗದೇ ನ್ಯಾನೋ ವಿಜ್ಞಾನಕ್ಕೆ ಸಂಬಂಧಿಸಿದ ವಸ್ತು ಪ್ರದರ್ಶನವನ್ನೂ ಒಳಗೊಂಡದ್ದು ವಿಶೇಷವಾಗಿತ್ತು. ಈ ವಸ್ತು ಪ್ರದರ್ಶನದಲ್ಲಿ ಚಿನ್ನದ ನ್ಯಾನೊ ಪಾರ್ಟಿಕಲ್‌ಗಳು, ಲೋಹಗಳ ನಡುವಿನ ಗಾಲ್ವನೈಜೇಶನ್ ಪ್ರಯೋಗ, ಹಣ್ಣಿನ ರಸದಿಂದ ವಿದ್ಯುತ್ ಉತ್ಪಾದನೆ, ಲೀಥಿಯಂ ಬ್ಯಾಟರಿ ಮುಂತಾದ ಪ್ರಯೋಗಗಳು ಗಮನ ಸೆಳೆದವು.
ಎಸ್‌ಡಿಎಂ ಸ್ನಾತಕೋತ್ತರ ಕೇಂದ್ರದ ಡೀನ್, ರಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ವಿಶ್ವನಾಥ್ ಪಿ. ಸ್ವಾಗತಿಸಿ, ಸಹ ಪ್ರಾಧ್ಯಾಪಕಿ ಡಾ.ನೆಫಿಸತ್ ಕಾರ್ಯಕ್ರಮ ನಿರೂಪಿಸಿ, ಸಹಾಯಕ ಪ್ರಾಧ್ಯಾಪಕಿ ಡಾ.ಸೌಮ್ಯಾ ಬಿ.ಪಿ.ವಂದಿಸಿದರು.
ಭೂಮಿ, ಸೌರ ಮಂಡಲ, ಆಕಾಶಗಂಗೆ, ಭೌತಿಕ ವಿಶ್ವ ಎಲ್ಲವೂ ದೊಡ್ಡ ಗಾತ್ರದ ಭೌತಿಕ ವಸ್ತುಗಳು. ವಸ್ತುಗಳನ್ನು ಸಣ್ಣ ಗಾತ್ರಕ್ಕೆ ತುಂಡರಿಸುತ್ತಾ ಹೋದಾಗ ಸಿಗುವುದೇ ನ್ಯಾನೋ ಲೋಕ. ನ್ಯಾನೋ ಗಾತ್ರದಲ್ಲಿ ವಸ್ತುವನ್ನು ನಿಯಂತ್ರಿಸಲು ಸಾಧ್ಯವಾದರೆ ಒಂದು ವಸ್ತು ವರ್ತಿಸುವ ರೀತಿ ಬದಲಾಗುತ್ತದೆ. ಅದನ್ನು ಗಮನಿಸಿ ಅರ್ಥ ಮಾಡಿಕೊಳ್ಳುವ ಪ್ರಕ್ರಿಯೆಯೇ ನ್ಯಾನೋ ವಿಜ್ಞಾನ. ಈ ವಿಚಾರ ಕಳೆದ ಶತಮಾನದಲ್ಲೇ ವಿಜ್ಞಾನಿ ರಿಚರ್ಡ್ ಫೇಯ್ನ್ಮನ್ ಗುರುತಿಸಿದ್ದರು. ನ್ಯಾನೋ ಕ್ಷೇತ್ರದಲ್ಲಿ ಸಾಕಷ್ಟು ಬೆಳವಣಿಗೆಗಳು ಆಗಬೇಕಾಗಿದ್ದು ಅವಕಾಶಗಳೂ ಹೇರಳವಾಗಿವೆ. - ಡಾ.ಸತೀಶ್ಚಂದ್ರ ಎಸ್., ಎಸ್‌ಡಿಎಂ ಸಂಸ್ಥೆ ಕಾರ್ಯದರ್ಶಿ https://www.vijayavani.net/expert-college-2 https://www.vijayavani.net/alvas-samruddi-mela