ಜಿಲ್ಲೆ

ವಕೀಲರಿಗೆ ಭಾಷಾ ಪ್ರಾವಿಣ್ಯತೆ ಅತ್ಯಗತ್ಯ ಎಸ್.ಡಿ.ಎಂ ಕಾನೂನು ಹಬ್ಬ ಸಮಾರೋಪದಲ್ಲಿ ನ್ಯಾ.ಕೃಷ್ಣ ಭಟ್ ಹೇಳಿಕೆ

ಮಂಗಳೂರು: ವಕೀಲರಿಗೆ ಭಾಷೆಯ ಪ್ರಾವಿಣ್ಯತೆ ಹಾಗೂ ಹಿಡಿತ ಅತೀ ಅಗತ್ಯ ಎಂದು ಕರ್ನಾಟಕ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶ ಪಿ.ಕೃಷ್ಣ ಭಟ್ ಹೇಳಿದರು.


ನಗರದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಕಾಲೇಜಿನಲ್ಲಿ ಮೂರು ದಿನಗಳ ರಾಷ್ಟ್ರೀಯ ಕಾನೂನು ಹಬ್ಬ ಲೆಕ್ಸ್ ಅಲ್ಟಿಮಾ -2023 ರ ಸಮಾರೋಪದಲ್ಲಿ ಪ್ರಧಾನ ಭಾಷಣ ಮಾಡಿದ ಕೃಷ್ಣ ಭಟ್, ವಕೀಲರಿಗೆ ಉತ್ತಮ ಭಾಷಾ ಜ್ಞಾನ ಹೊಂದಿದ್ದಾಗ ಮಾತ್ರ ತಮ್ಮ ವಾದವನ್ನು ನ್ಯಾಯಲಯದ ಮುಂದೆ ಸಮರ್ಥವಾಗಿ ಮಂಡಿಸಲು ಸಾದ್ಯ. ಭಾಷೆಯ ಜೊತೆಯಲ್ಲಿ ಚರಿತ್ರೆಯ ಜ್ಞಾನವೂ ಹಾಗೂ ಪ್ರಾಮಾಣಿಕತೆಯೂ ಅಷ್ಟೇ ಪ್ರಾಮುಖ್ಯ. ಇವೆರಡನ್ನೂ ಮೈಗೂಡಿಸಿಕೊಂಡಾಗ ವಕೀಲರು ಯಶಸ್ವಿಯಾಗುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಯುವ ವಕೀಲರಿಗೆ ಕಿವಿಮಾತು ಹೇಳಿದರು.


ಕಾಲೇಜಿನ ಪ್ರಾಂಶುಪಾಲ ಡಾ.ತಾರಾನಾಥ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಉಚ್ಚ ನ್ಯಾಯಾಲಯದ ವಕೀಲ ಹಾಗೂ ಕಾಲೇಜಿನ ಪೂರ್ವ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಉದಯ ಪ್ರಕಾಶ್ ಮುಳ್ಯ ಮುಖ್ಯ ಅತಿಥಿಯಾಗಿದ್ದರು. ಕಾನೂನು ಹಬ್ಬದ ಸಂಚಾಲಕಿ ಡಾ.ರೇಷ್ಮಾ , ವಿದ್ಯಾರ್ಥಿ ನಾಯಕಿ ಅನ್ಸಿಟಾ ಒಲಿವಿಯಾ ಪಿಂಟೋ, ವಿದ್ಯಾರ್ಥಿ ಸಂಯೋಜಕರುಗಳಾದ ಜ್ಯಾನಿಸ್ ಮರಿಯಾ ಸಲ್ಡಾನ, ಸಚಿನ್ ಹೆಗ್ಡೆ, ವಿನೀತ್ ದೇವಾಡಿಗ, ನರಸಿಂಹ ಭಂಡಾರಿ ಹಾಗೂ ದೀಕ್ಷಾ ಉಪಸ್ಥಿತರಿದ್ದರು.


ವಿನೀತ್ ದೇವಾಡಿಗ ಸ್ವಾಗತಿಸಿ, ದೀಕ್ಷಾ ವಂದಿಸಿದರು. ಜಾನಿಸ್ ಸಲ್ಡಾನಾ ವರದಿ ವಾಚಿಸಿದರು. ನರಸಿಂಹ ಭಂಡಾರಿ ಬಹುಮಾನಿತರ ಪಟ್ಟಿ ವಾಚಿಸಿದರು. ಶ್ರಾವ್ಯ ಪಾರ್ಥಿಸಿದರು. ಸ್ವಾತಿ ಶೆಣೈ ನಿರೂಪಿಸಿದರು.


ಕಾನೂನು ಹಬ್ಬದಲ್ಲಿ ದೇಶದ ವಿವಿಧ ಕಾಲೇಜುಗಳ ಒಟ್ಟು 18 ತಂಡಗಳು ಭಾಗವಹಿಸಿದ್ದು, ಬೆಂಗಳೂರು ಇನ್ಸ್ಟಿಟ್ಯೂಟ್ ಆಫ್ ಲೀಗಲ್ ಸ್ಟಡೀಸ್ ಹಾಗೂ ಬಿ.ಎಂ.ಎಸ್ ಕಾನೂನು ಕಾಲೇಜುಗಳು ಕ್ರಮವಾಗಿ ಪ್ರಥಮ ಹಾಗೂ ದ್ವಿತೀಯ ತಂಡ ಪ್ರಶಸ್ತಿ ಗಳಿಸಿದರು.