ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ಹೆಣ್ಣುಮಕ್ಕಳಿಗೆ ಶಿಕ್ಷಣ ಎನ್ನುವುದು ಪಠ್ಯವಲ್ಲ, ಅವರ ಸಶಕ್ತೀಕರಣದ ಸಾಧನ. ಪ್ರಸ್ತುತ ಹೆಣ್ಣುಮಕ್ಕಳು ಉನ್ನತ ಶಿಕ್ಷಣದಲ್ಲಿ ತೊಡಗಿಸಿಕೊಂಡಿರುವುದು ಸಂತೋಷದ ಸಂಗತಿ. ಹೆಣ್ಣು ಶಕ್ತಿಯಾದಾಗ ಸಮಾಜ ಮತ್ತಷ್ಟು ಬೆಳೆಯಲು ಸಾಧ್ಯ ಎಂದು ಡಾ.ಹೇಮಾವತಿ ವೀ.ಹೆಗ್ಗಡೆ ಹೇಳಿದರು.
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಉಜಿರೆ ಎಸ್‌ಡಿಎಂ ಕಾಲೇಜಿನಲ್ಲಿ ಮಾ.12ರಂದು ಮಹಿಳಾ ಕುಂದುಕೊರತೆ ನಿವಾರಣಾ ಕೋಶ, ಆಂತರಿಕ ದೂರುಗಳ ಸಮಿತಿ, ಮಹಿಳಾ ಅಭಿವೃದ್ಧಿ ಕೋಶ, ಆಂತರಿಕ ಗುಣಮಟ್ಟ ಭರವಸೆ ಕೋಶದ ಸಹಯೋಗದಲ್ಲಿ ಆಯೋಜಿಸಿದ್ದ ಮಹಿಳೆ ಮತ್ತು ಹೂಡಿಕೆ: ಭವಿಷ್ಯದ ಬೆಳವಣಿಗೆಯ ಸೇತು ಕುರಿತ ರಾಜ್ಯಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
ಎಸ್‌ಡಿಎಂ ಕಾಲೇಜು ಪ್ರಾಂಶುಪಾಲ ಪ್ರೊ.ವಿಶ್ವನಾಥ ಪಿ. ಅಧ್ಯಕ್ಷತೆ ವಹಿಸಿ ಮಾತನಾಡಿ, ದೇಶದಲ್ಲಿ ಹೆಣ್ಣು ಮಕ್ಕಳ ಸಂಖ್ಯೆ ಕಡಿಮೆ ಇರಬಹುದು. ಆದರೆ ಉನ್ನತ ಶಿಕ್ಷಣದಲ್ಲಿ ಹೆಣ್ಣು ಮಕ್ಕಳ ಸಂಖ್ಯೆ ಹೆಚ್ಚು ಎನ್ನುವುದು ಹೆಮ್ಮೆಯ ವಿಚಾರ ಎಂದರು.
ಮಹಿಳೆಯರ ಕೊಡುಗೆ, ಸಾಧನೆ ನೆನೆಯಲು ವಿದ್ಯಾರ್ಥಿನಿಯರಿಂದ ಕಿರು ರೂಪಕ ಪ್ರದರ್ಶಶಿಸಲಾಯಿತು. ಮಹಿಳೆ ಮತ್ತು ಹೂಡಿಕೆ: ಭವಿಷ್ಯದ ಬೆಳವಣಿಗೆಯ ಸೇತು ಎಂಬ ವಿಷಯದ ಕುರಿತು ಬೆಂಗಳೂರಿನ ಜನಮನ್ ಫಾರ್ಮಸುಟಿಕಲ್ಸ್ನ ಮುಖ್ಯ ಕಾರ್ಯನಿರ್ವಾಹಕ ನಿರ್ದೇಶಕಿ ಅನಿಲಾ ದೀಪಕ್ ಶೆಟ್ಟಿ ದಿಕ್ಸೂಚಿ ಭಾಷಣ ಮಾಡಿದರು.
ಕಾರ್ಯಕ್ರಮ ಸಂಚಾಲಕಿ ಮಾಲಿನಿ ಅಂಚನ್ ಸ್ವಾಗತಿಸಿದರು. ಅಕ್ಷತಾ ಜೈನ್ ವಂದಿಸಿದರು. ವಿದ್ಯಾರ್ಥಿನಿಯರಾದ ಪೂರ್ವಿ ಮತ್ತು ತಂಡ ಪ್ರಾರ್ಥಿಸಿದರು. ಮಾನಸ ಅಗ್ನಿಹೋತ್ರಿ, ಹರ್ಷಿಣಿ, ಧರಿತ್ರಿ ಭಿಡೆ ಕಾರ್ಯಕ್ರಮ ನಿರೂಪಿಸಿದರು. ವಾಣಿಜ್ಯ ಕ್ಷೇತ್ರದ ತಜ್ಞರು, ಉದ್ಯಮಿ, ವಿವಿಧ ಸಂಸ್ಥೆಗಳ ಪ್ರತಿನಿಧಿಗಳು ಕ್ರಿಯಾಶೀಲತೆ ಮಹತ್ವ ಕುರಿತು ಚರ್ಚೆ ನಡೆಸಿದರು.
ಮಂಗಳೂರು ವಿಶ್ವವಿದ್ಯಾಲಯದ ವಾಣಿಜ್ಯ ವಿಭಾಗ ಸಹಪ್ರಾಧ್ಯಾಪಕಿ ಡಾ.ಪ್ರೀತಿ ಕೀರ್ತಿ ಡಿಸೋಜ ಅಧ್ಯಕ್ಷತೆ ವಹಿಸಿದ್ದರು. ಉಜಿರೆ ಶ್ರೀ ಧ.ಮಂ. ಕಾಲೇಜು ವಿಶ್ರಾಂತ ಪ್ರಾಂಶುಪಾಲ ಟಿ.ಎನ್.ಕೇಶವ, ಸಂಧ್ಯಾ ಫ್ರೆಶ್ ಸಹಸಂಸ್ಥಾಪಕಿ ಮನೋರಮಾ ಭಟ್ಟ, ಬೆಳ್ತಂಗಡಿ ರೋಟರಿ ಕ್ಲಬ್ ಪೂರ್ವಾಧ್ಯಕ್ಷೆ ಅರ್ಚನಾ ರಾಜೇಶ್ ಪೈ ಭಾಗವಹಿಸಿದರು. ಧರ್ಮಸ್ಥಳ ಎಸ್.ಕೆ.ಡಿ.ಆರ್.ಡಿ.ಪಿ. ಜ್ಞಾನ ವಿಕಾಸ ಯೋಜನಾಧಿಕಾರಿ ಸಂಗೀತಾ, ಬೆಳ್ತಂಗಡಿ ತಾಪಂ ಕ್ಲಸ್ಟರ್ ಮೇಲ್ವಿಚಾರಕ ಸ್ವಸ್ತಿಕ್ ಜೈನ್ ಸಂಪನ್ಮೂಲ ವ್ಯಕ್ತಿಗಳಾಗಿದ್ದರು. ಎಂಪವರ್ ಎಕ್ಸ್ಪೋ ವಿಶಿಷ್ಟ ಪ್ರದರ್ಶನ, ಮಾರಾಟ ಮಳಿಗೆ ಏರ್ಪಡಿಸಲಾಗಿತ್ತು. ಡಾ.ಹೇಮಾವತಿ ವೀ. ಹೆಗ್ಗಡೆ ಉದ್ಘಾಟಿಸಿದರು.
ಮಹಿಳೆಯರ ಸಶಕ್ತೀಕರಣದ ವಿಚಾರ ಬಂದಾಗ ಕಲ್ಪನಾ ಚಾವ್ಲಾ, ಇಂದಿರಾ ಗಾಂಧಿ, ರಾಣಿ ಅಬ್ಬಕ್ಕ ನೆನಪಿಗೆ ಬರುತ್ತಾರೆ. ಅವರು ಯಾವುದೇ ಕ್ಷೇತ್ರದಲ್ಲೂ ಮಹಿಳೆಯರು ಕಮ್ಮಿ ಇಲ್ಲ ಎಂಬುದನ್ನು ತೋರಿಸಿದ್ದಾರೆ. ಮಹಿಳಾಭಿವೃದ್ಧಿಗಾಗಿ ಡಾ.ಹೇಮಾವತಿ ಹೆಗ್ಗಡೆಯವರು ತಮ್ಮ ಜೀವನ ಮುಡಿಪಾಗಿಟ್ಟಿದ್ದಾರೆ. ಶ್ರೀ ಕ್ಷೇತ್ರದ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಹೆಣ್ಣು ಮಕ್ಕಳು ಸ್ವಾವಲಂಬಿಗಳಾಗಿದ್ದಾರೆ. ಡಾ.ಸತೀಶ್ಚಂದ್ರ ಎಸ್., ಎಸ್‌ಡಿಎಂ ಎಜುಕೇಶನಲ್ ಸೊಸೈಟಿ ಕಾರ್ಯದರ್ಶಿ https://www.vijayavani.net/mahiladinacharan https://www.vijayavani.net/difence-mangalore-adwaith-narayan