ಜಿಲ್ಲೆ

ವೇದಾಧ್ಯಯನದಿಂದ ಭದ್ರ ಬುನಾದಿ : ಸದಾನಂದಗಿರಿ ಸ್ವಾಮಿ ಮಹಾರಾಜ ಪ್ರತಿಪಾದನೆ

ಸೌಮ್ಯ ಆರ್

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

ಸಂಸ್ಕೃತ, ಭಗವದ್ಗೀತೆ, ವೇದ, ಉಪನಿಷತ್ತುಗಳು, ರಾಮಾಯಣ ಮತ್ತು ಮಹಾಭಾರತದಂತಹ ಪುರಾಣಗಳ ಅಧ್ಯಯನ ನಮ್ಮ ಸಾರ್ಥಕ ಬದುಕಿಗೆ ಉಪಯುಕ್ತ ಮಾಹಿತಿ, ಮಾರ್ಗದರ್ಶನದೊಂದಿಗೆ ಭದ್ರ ಬುನಾದಿ ನೀಡುತ್ತವೆ ಎಂದು ಉತ್ತರಾಖಂಡದ ರುದ್ರಪ್ರಯಾಗದ ಸಂತ ಸದಾನಂದಗಿರಿ ಸ್ವಾಮಿ ಮಹಾರಾಜ್ ಹೇಳಿದರು.

ಶುಕ್ರವಾರ ಉಜಿರೆಯಲ್ಲಿ ಎಸ್.ಡಿ.ಎಂ. ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನ ಕಾಲೇಜಿನಲ್ಲಿ ಬಿ.ಎನ್.ವೈ.ಎಸ್. ಪದವಿ ಮತ್ತು ಸ್ನಾತ್ತಕೋತ್ತರ ಪದವಿ ಅಧ್ಯಯನದ ಪ್ರಥಮ ವರ್ಷದ ತರಗತಿಗೆ ಪ್ರವೇಶ ಪಡೆದ ವಿದ್ಯಾರ್ಥಿಗಳ ಶಿಷ್ಯೋಪನಯನ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.

ಯೋಗ ಮತ್ತು ಧ್ಯಾನದಿಂದ ಏಕಾಗ್ರತೆಯೊಂದಿಗೆ ಉನ್ನತ ಸಾಧನೆ ಮಾಡಬಹುದು. ಭಾರತದ ಧರ್ಮ, ಸಾಹಿತ್ಯ, ಕಲೆ, ಸಂಸ್ಕೃತಿ, ಸಂಗೀತ ವಿಶ್ವಮಾನ್ಯವಾಗಿದೆ. ಗುರುಕುಲ ಪದ್ಧತಿಯ ಶಿಕ್ಷಣ, ನಲಂದಾ ಮತ್ತು ತಕ್ಷಶಿಲಾ ವಿಶ್ವವಿದ್ಯಾಲಯಗಳು ವಿಶ್ವವಿಖ್ಯಾತವಾಗಿದ್ದು ವಿದೇಶೀಯರು ಕೂಡ ಇಲ್ಲಿ ಅಧ್ಯಯನ ಮತ್ತು ಸಂಶೋಧನೆಗಾಗಿ ಬರುತ್ತಿದ್ದರು. ಚರಕ, ಸುಶ್ರುತ, ಪತಂಜಲಿ ಮೊದಲಾದವರು ಆರೋಗ್ಯ, ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಅಮೂಲ್ಯ ಕೊಡುಗೆ ನೀಡಿದ್ದಾರೆ. ವೈದ್ಯರು ಹಣ ಮತ್ತು ಕೀರ್ತಿಗಾಗಿ ಕೆಲಸ ಮಾಡದೆ, ಪ್ರೀತಿ ಮತ್ತು ವಿಶ್ವಾಸದಿಂದ ರೋಗಿಗಳ ಸೇವೆ ಮಾಡಬೇಕು. ಆರೋಗ್ಯವೇ ಭಾಗ್ಯವಾಗಿದ್ದು ಎಲ್ಲರಿಗೂ ಆರೋಗ್ಯ ಭಾಗ್ಯ ನೀಡುವ ಮೂಲಕ ವೈದ್ಯರು ಸಮಾಜಸೇವೆ ಹಾಗೂ ದೇಶಸೇವೆ ಮಾಡಬೇಕು ಎಂದರು.

ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅಧ್ಯಕ್ಷತೆ ವಹಿಸಿದ್ದರು. ಉಪಪ್ರಾಂಶುಪಾಲೆ ಡಾ.ಸುಜಾತ ಹೊಸ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಪ್ರೊ.ಎಸ್.ಸತೀಶ್ಚಂದ್ರ ಉಪಸ್ಥಿತರಿದ್ದರು.

ಪ್ರಾಂಶುಪಾಲ ಡಾ.ಪ್ರಶಾಂತ ಶೆಟ್ಟಿ ಸ್ವಾಗತಿಸಿದರು. ಡಾ.ಗೀತಾ ಬಿ.ಶೆಟ್ಟಿ ವಂದಿಸಿದರು. ಸಂಸ್ಕೃತಿ ಎಂ.ಜೈನ್ ಕಾರ್ಯಕ್ರಮ ನಿರೂಪಿಸಿದರು.

ಪ್ರಕೃತಿ ಚಿಕಿತ್ಸೆ ಮತ್ತು ಯೋಗವಿಜ್ಞಾನದಲ್ಲಿ ಪದವಿ ತರಗತಿ ಆರಂಭಿಸಿದ ದೇಶದ ಪ್ರಥಮ ಕಾಲೇಜು ಉಜಿರೆಯಲ್ಲಿದೆ. ನಮ್ಮ ದೇಶದ ಪ್ರಾಚೀನ ವೈದ್ಯಕೀಯ ಪದ್ಧತಿಗಳಾದ ಆಯುರ್ವೇದ, ಪ್ರಕೃತಿ ಚಿಕಿತ್ಸೆ, ಹೋಮಿಯೋಪತಿ ಬಗ್ಗೆ ಕೀಳರಿಮೆ ಸಲ್ಲದು. ಪ್ರಾಚೀನ ಗ್ರಂಥಗಳಲ್ಲಿ ಹಾಗೂ ತಾಳೆಗರಿಗಳಲ್ಲಿ ಕೂಡ ಆಯುರ್ವೇದ, ಯೋಗಾಭ್ಯಾಸ ಮತ್ತು ಪ್ರಕೃತಿ ಚಿಕಿತ್ಸಾ ಪದ್ಧತಿಯ ಉಲ್ಲೇಖವಿದೆ. ಇದನ್ನು ನಾನು ಕೂಡ ಅನುಸರಿಸಿ, ಅನುಭವಿಸಿ ಸಂತೋಷ ಮತ್ತು ತೃಪ್ತಿ ಹೊಂದಿದ್ದೇನೆ. ಡಾ.ಡಿ.ವೀರೇಂದ್ರ ಹೆಗ್ಗಡ, ಧರ್ಮಸ್ಥಳದ ಧರ್ಮಾಧಿಕಾರಿ https://www.vijayavani.net/shilanyasa-program-3 https://www.vijayavani.net/handing-over-the-fallen-cash-to-the-heirs