ಮಂಗಳೂರು: ಯುವ ವಕೀಲರು ತಮ್ಮ ವೃತ್ತಿಯಲ್ಲಿ ಯಶಸ್ವಿಯಾಗಬೇಕಾದರೆ ಸಹನೆ ಮತ್ತು ಪರಿಶ್ರಮವನ್ನು ರೂಢಿಸಿಕೊಳ್ಳಬೇಕು ಎಂದು ಕಾರ್ಕಳದ ಹಿರಿಯ ವಕೀಲ ಎಂ.ಕೆ. ವಿಜಯಕುಮಾರ್ ಹೇಳಿದರು.
ನಗರದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಕಾಲೇಜು ಹಾಗೂ ಅಧಿವಕ್ತ ಪರಿಷತ್ ಮಂಗಳೂರು ಇವರ ಜಂಟಿ ಆಶ್ರಯದಲ್ಲಿ ನಡೆದ ಯಶಸ್ವಿಗಾಗಿ ಹೋರಾಟ ಉಪನ್ಯಾಸ ಮಾಲಿಕೆಯನ್ನು ಉದ್ಘಾಟಿಸಿ,ಮಾತನಾಡಿದ ಅವರು, ಯುವ ವಕೀಲರು ತಮ್ಮ ವೃತ್ತಿ ಜೀವನವನ್ನು ಆರಂಭಿಸುವಾಗ ಅವಮಾನಗಳು ಮತ್ತು ಸವಾಲುಗಳು ಸಹಜ. ಆದರೆ ಇದ್ಯಾವುದಕ್ಕೂ ಎದೆ ಗುಂದದೇ ದಿಟ್ಟವಾಗಿ ಎದುರಿಸಬೇಕು ಮತ್ತು ತಮ್ಮ ವೃತ್ತಿಯನ್ನು ಪ್ರೀತಿಸಬೇಕು ಎಂದರು.
ಕಾಲೇಜಿನ ಪ್ರಾಂಶುಪಾಲ ಡಾ.ತಾರಾನಾಥ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ವಕೀಲರ ಸಂಘದ ಅಧ್ಯಕ್ಷ ಪೃಥ್ವಿರಾಜ್ ರೈ ಮುಖ್ಯ ಅತಿಥಿಯಾಗಿದ್ದರು. ಅಧಿವಕ್ತ ಪರಿಷತ್‌ನ ಮಂಗಳೂರು ಘಟಕಾಧ್ಯಕ್ಷ ಈಶ್ವರ್ ಕೊಠಾರಿ ಸ್ವಾಗತಿಸಿದರು. ಅಧಿವಕ್ತ ಪರಿಷತ್ ಕಾರ‌್ಯದರ್ಶಿ ಕಿರಣ್ ಕುಮಾರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ತೀರ್ಥೆಶ್ ಅತಿಥಿಗಳನ್ನು ಪರಿಚಯಿಸಿದರು. ಕಾರ‌್ಯಕ್ರಮ ಸಂಯೋಜಕಿ ಡಾ.ಚಂದ್ರಲೇಖಾ ವಂದಿಸಿದರು. ನಿರೀಕ್ಷಾ ಪ್ರಾರ್ಥಿಸಿದರು ಸುನಿಧಿ ಪ್ರಮೋದ್ ನಾಯಕ್ ನಿರೂಪಿಸಿದರು.