ಜಿಲ್ಲೆ

ಜನಪದ ವೈದ್ಯಸಿರಿ ಪ್ರಶಸ್ತಿಗೆ ಅರ್ಜಿ ಆಹ್ವಾನ

ಉಡುಪಿ: ಕುತ್ಪಾಡಿ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು ಜಾನಪದ ವೈದ್ಯಕೀಯ ಸಂಶೋಧನಾ ಕೇಂದ್ರದ ವತಿಯಿಂದ ಪ್ರತೀ ವರ್ಷ ನೀಡುವ ಜನಪದ ವೈದ್ಯ ಸಿರಿ ರಾಜ್ಯಮಟ್ಟದ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.

ಕರ್ನಾಟಕದ ಮೂಲೆಮೂಲೆಗಳಲ್ಲಿ ಅನೇಕರು ಪರಂಪರಾಗತ ವೈದ್ಯ ಪದ್ಧತಿಯನ್ನು ಮುಂದುವರಿಸಿಕೊಂಡು ಜನಸೇವೆಯಲ್ಲಿ ತತ್ಪರರಾಗಿದ್ದು, ಅವರ ಜ್ಞಾನ ಭಂಡಾರದ ಉಳಿವಿಗಾಗಿ ಹಾಗೂ ಪ್ರೋತ್ಸಾಹಕ್ಕಾಗಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಸಂಶೋಧನಾ ಕೇಂದ್ರದ ಮೂಲಕ ಪ್ರಶಸ್ತಿಯನ್ನು ನೀಡುತ್ತಿದ್ದಾರೆ. ಕನಿಷ್ಠ 15 ವರ್ಷ ಸೇವಾನುಭವವುಳ್ಳ ಕರ್ನಾಟಕದ ನುರಿತ ನಾಟಿವೈದ್ಯರು ಅಥವಾ ಅವರ ಪ್ರತ್ಯಕ್ಷ ಮಾಹಿತಿಯುಳ್ಳವರು ಈ ಕೆಳಗಿನ ವಿವರಗಳನ್ನು ಆಯಾ ಗ್ರಾಮಪಂಚಾಯಿತಿ ಅಧ್ಯಕ್ಷರ ಶಿಫಾರಸು ಪತ್ರದೊಂದಿಗೆ ಕಳುಹಿಸಲು ವಿನಂತಿಸಲಾಗಿದೆ.

ಹೆಸರು, ಇತ್ತೀಚಿಗಿನ ಭಾವಚಿತ್ರ, ವಯಸ್ಸು, ವಿದ್ಯಾಭ್ಯಾಸ, ವೃತ್ತಿ, ಲಿಂಗ, ಖಾಯಂ ವಿಳಾಸ, ದೂರವಾಣಿ ಸಂಖ್ಯೆ, ಯಾವ ಕಾಯಿಲೆಯ ಚಿಕಿತ್ಸೆಗೆ ಪರಿಣತರು, ಗುರುವಿನ ಹೆಸರು, ಎಷ್ಟು ವರ್ಷದ ಅನುಭವ, ಬಳಸುವ ಔಷಧ ಮೂಲಗಳು, ಹಳೆಯ ಗ್ರಂಥಗಳ ಪುರಾವೆಗಳಿದ್ದರೆ, ಅನುಭವದ ದಾಖಲಾತಿ, ಇತರೆ ಪ್ರಮಾಣಪತ್ರಗಳ ಮಾಹಿತಿಯನ್ನು ಪ್ರಾಂಶುಪಾಲರು, ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು ಕುತ್ಪಾಡಿ, ಉಡುಪಿ ಜಿಲ್ಲೆ-574118 ಈ ವಿಳಾಸಕ್ಕೆ ಜೂನ್ 30ರ ಒಳಗಾಗಿ ಕಳುಹಿಸಬೇಕು. ನುರಿತ ಪಾರಂಪರಿಕ ನಾಟಿವೈದ್ಯರೊಬ್ಬರನ್ನು ಆಯ್ಕೆ ಸಮಿತಿ ಆರಿಸಿ, ಸನ್ಮಾನಿಸಲಾಗುತ್ತದೆ.