ಮೈಸೂರು: ಅಮೆರಿಕದ ಅಕ್ಕ ಸಮ್ಮೇಳನಕ್ಕೆ ತೆರಳಲು ಬಯಸಿದ್ದ ಅಯೋಧ್ಯೆಯ ರಾಮಲಲ್ಲಾ ಮೂರ್ತಿಯ ಶಿಲ್ಪಿ ಅರುಣ್ ಯೋಗಿರಾಜ್‌ಗೆ ವೀಸಾ ನಿರಾಕರಿಸಲಾಗಿದ್ದು, ವೀಸಾ ನೀಡಲು ಅಮೆರಿಕಾ ನಿರಾಕರಿಸಿದ ಹಿನ್ನೆಲೆಯಲ್ಲಿ ಅರುಣ್ ಯೋಗಿರಾಜ್ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಬುಧವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಅಮೆರಿಕಕ್ಕೆ ತೆರಳಲುಎಂತೆಂಥವರಿಗೋ ವೀಸಾ ನೀಡಲಾಗುತ್ತದೆ. ಆದರೆ, ನಮ್ಮಂತಹ ಕಲಾವಿದರಿಗೆ ವಿಸಾ ನೀಡದೆ ಇರುವುದು ಬೇಸರದ ವಿಚಾರ. ಯಾವ ಕಾರಣಕ್ಕೆ ವೀಸಾ ನಿರಾಕರಿಸಲಾಗಿದೆ ಎಂಬ ಮಾಹಿತಿ ದೊರೆತಿಲ್ಲ. ನನ್ನ ಹಾಗೂ ಪತ್ನಿ ಹಾಗೂ ಮಕ್ಕಳ ವಿಸಾ ರಿಜೆಕ್ಟ್ ಆಗಿದೆ. ಇದರಿಂದ ನನ್ನ ಮಗಳು ತುಂಬಾ ನೊಂದು ಕೊಂಡಿದ್ದಾಳೆ ಎಂದರು.
ನಾನು ನನ್ನ ಬಗ್ಗೆ ಎಲ್ಲವನ್ನೂ ಹೇಳಿಕೊಂಡೆ. ಅವರು ಕೇಳಿದ್ದನ್ನೆಲ್ಲ ನಾನು ಭರ್ತಿ ಮಾಡಿ ನೀಡಿದೆ. ಆದರೆ, ಅವರು ಒಂದು ಚೀಟಿ ನೀಡಿ ವೀಸಾ ನಿರಾಕರಿಸಿದರು. ಸುದ್ದಿ ಗಮನಿಸಿದ ಸಂಸದ ಯದುವೀರ್ ನನಗೆ ಕರೆ ಮಾಡಿ ಮಾಹಿತಿ ಪಡೆದರು. ಅವರು ಅವಕಾಶ ಮಾಡಿಸಿಕೊಟ್ಟರೆ ಅಕ್ಕ ಸಮ್ಮೇಳನಕ್ಕೆ ಹೋಗುತ್ತೇನೆ. ಹೊಸದಾಗಿ ಅರ್ಜಿ ಹಾಕುವುದಿಲ್ಲ ಎಂದರು.
ಈ ಕುರಿತು ಮಾತನಾಡಿದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ವೀಸಾ ನಿರಾಕರಿಸುವ ವಿಚಾರವಾಗಿ ಅರುಣ್ ಯೋಗಿರಾಜ್ ಅವರೊಂದಿಗೆ ಮಾತನಾಡಿದ್ದೇನೆ. ಯಾವ ಕಾರಣಕ್ಕೆ ವೀಸಾ ರಿಜೆಕ್ಟ್ ಆಗಿದೆ ಎಂಬುದು ತಿಳಿದಿಲ್ಲ. ಅರುಣ್ ಯೋಗಿರಾಜ್ ನಮ್ಮ ದೇಶದ ಆಸ್ತಿ. ಶಂಕರಾಚಾರ್ಯ, ರಾಮಲಲ್ಲಾ ಮೂರ್ತಿ ಕೆತ್ತನೆ ಮಾಡಿ ಇಡೀ ದೇಶಕ್ಕೆ ಕೀರ್ತಿ ತಂದಿದ್ದಾರೆ. ಹಿಂದು ಅನ್ನುವ ಕಾರಣಕ್ಕೆ ವೀಸಾ ರಿಜೆಕ್ಟ್ ಮಾಡಲಾಗಿದೆ ಎಂಬ ಬಗ್ಗೆ ಮಾಹಿತಿ ಇಲ್ಲ. ಈ ಬಗ್ಗೆ ಮಾಹಿತಿ ಪಡೆದು ಮಾತನಾಡುತ್ತೇನೆ. ಕೇಂದ್ರ ಸಚಿವರ ಜತೆಗೂ ಮಾತನಾಡುತ್ತೇನೆ ಎಂದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಮಾಜಿ ಸಚಿವ ಸಾ.ರಾ ಮಹೇಶ್, ಹಲವು ಸಂದರ್ಭಗಳಲ್ಲಿ ಅಮೆರಿಕ ವೀಸಾ ಹಲವರಿಗೆ ರಿಜೆಕ್ಟ್ ಆಗಿದೆ ಉದಾಹರಣೆಗಳು ಇವೆ. ಕಾರಣವಿಲ್ಲದೆಯೂ ಹಲವು ಬಾರಿ ಹಲವರ ವೀಸಾ ರಿಜೆಕ್ಟ್ ಆಗಿದೆ. ಅದೇ ರೀತಿ ಯೋಗಿರಾಜ್ ಅವರಿಗೂ ಆಗಿರಬಹುದು ಎಂದು ಹೇಳಿದರು.
ಈ ಹಿಂದೆ ನಾನು ಹಾಗೂ ಸಚಿವರಾದ ಜಮೀರ್ ಅಹಮದ್ ಖಾನ್, ಚಲುವರಾಯಸ್ವಾಮಿ ಅಮೆರಿಕಕ್ಕೆ ಹೋಗಲು ಮುಂದಾಗಿದ್ದೆವು. ಆ ಸಂದರ್ಭದಲ್ಲಿ ಜಮೀರ್ ಅಹಮದ್ ಖಾನ್ ಸಚಿವರಾಗಿದ್ದರು. ಆದರೂ ಅವರ ವೀಸಾ ರಿಜೆಕ್ಟ್ ಮಾಡಲಾಯಿತು. ರಾಯಭಾರ ಕಚೇರಿಯನ್ನು ಸಂಪರ್ಕಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ ಎಂದರು.