ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಪರಿಶಿಷ್ಟ ಜಾತಿ ಮತ್ತು ಪಂಗಡದ ಜನರ ಬದುಕಿಗೆ ನೇರ ಪ್ರಯೋಜನ ಆಗುತ್ತಿದೆ. ಹಾಗಾಗಿ, ನಿಯಮಾವಳಿಗಳ ಅಡಿಯಲ್ಲೇ ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಕಾಯ್ದೆಯಡಿ ಭಾಗಶಃ ಅನುದಾನವನ್ನು ಗ್ಯಾರಂಟಿಗಳಿಗೆ ನೀಡಲಾಗಿದ್ದು, ಇಲ್ಲಿ ಎಲ್ಲಿಯೂ ಕಾಯ್ದೆಯ ನಿಯಮಾವಳಿಗಳನ್ನು ಮೀರಿಲ್ಲ ಮತ್ತು ಅದರ ಆಶಯಗಳಿಗೆ ಧಕ್ಕೆ ಆಗುವಂತೆ ನಡೆದುಕೊಂಡಿಲ್ಲ ಎಂದು ಸಚಿವ ಡಾ.ಎಚ್.ಸಿ.ಮಹದೇವಪ್ಪ ಸ್ಪಷ್ಟಪಡಿಸಿದ್ದಾರೆ.
ಎಸ್‌ಸಿಎಸ್‌ಪಿ/ಟಿಎಸ್‌ಪಿ ಕಾಯ್ದೆಯಡಿ 2023-24ನೇ ಸಾಲಿನಲ್ಲಿ 34,294 ಕೋಟಿ ರೂ. ಅನುದಾನವನ್ನು ಒದಗಿಸಲಾಗಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿಯ ಅನುದಾನದ ಪ್ರಮಾಣವು ಶೇ.13 ಅಂದರೆ ಸುಮಾರು 4,031 ಕೋಟಿ ರೂ. ಹೆಚ್ಚಳವಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಮ್ಮ ಸರ್ಕಾರವು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಸಮಗ್ರ ಅಭಿವೃದ್ಧಿಗೆ ಬದ್ಧವಾಗಿದ್ದು, ಇದಕ್ಕೆ ಪೂರಕವಾಗಿ ಎಸ್‌ಸಿಎಸ್‌ಪಿ/ಟಿಎಸ್‌ಪಿ ಕಾಯ್ದೆ 2013ರ ಸೆಕ್ಷನ್ 7(ಡಿ) ಯನ್ನು ಕೈಬಿಡಬೇಕೆಂಬ ಸಮುದಾಯಗಳ ಬೇಡಿಕೆಗೆ ಸ್ಪಂದಿಸಿ 7(ಡಿ) ಅನ್ನು ರದ್ದುಪಡಿಸುವ ಕೆಲಸವನ್ನು ಮಾಡಿದೆ. ಅಲ್ಲದೇ ಪರಿಶಿಷ್ಟ ಜಾತಿ ಮತ್ತು ಪಂಗಡದ ಗುತ್ತಿಗೆದಾರಿಗೆ ನೀಡುತ್ತಿದ್ದ 50 ಲಕ್ಷ ರೂ. ಗುತ್ತಿಗೆ ಮೊತ್ತದ ಪ್ರಮಾಣವನ್ನು 1 ಕೋಟಿ ರೂ. ಏರಿಸಿದೆ. ಇದರೊಂದಿಗೆ ಪಿಟಿಸಿಎಲ್ ಕಾಯ್ದೆಗೆ ಇದ್ದ ಕಾಲಮಿತಿಯನ್ನು ರದ್ದುಪಡಿಸುವ ಮೂಲಕ ಚುನಾವಣೆಗೂ ಮುನ್ನವೇ ಭರವಸೆ ನೀಡಿದಂತೆ ನಮ್ಮ ಸರ್ಕಾರವು ನಡೆದುಕೊಂಡಿದೆ ಎಂದಿದ್ದಾರೆ.
ಈ ಬಾರಿಯ ಆಯವ್ಯಯದಲ್ಲಿ 7(ಡಿ) ಅನ್ನು ರದ್ದು ಮಾಡಿದ ನಂತರದಲ್ಲಿ 2022-23ನೇ ಸಾಲಿನಲ್ಲಿ ಎಸ್‌ಸಿಎಸ್‌ಪಿ/ಟಿಎಸ್‌ಪಿ ಅಡಿ ವಿವಿಧ ಇಲಾಖೆಗಳಿಗೆ ಡೀಮ್ಡ್ ವೆಚ್ಚ ಸೇರಿ ಹಂಚಿಕೆ ಮಾಡಲಾಗಿದ್ದ 7,450.80 ಕೋಟಿ ರೂ.ಗಳನ್ನು 2023-24ನೇ ಸಾಲಿನಲ್ಲಿ ಸುಮಾರು 2,787.33 ಕೋಟಿ ರೂ.ಗಳಿಗೆ ಇಳಿಕೆಯಾಗಿರುತ್ತದೆ. ಪ್ರಸಕ್ತ ಸಾಲಿನಲ್ಲಿ ಈ ಡೀಮ್ಡ್ ಹಂಚಿಕೆಯನ್ನು ರದ್ದುಪಡಿಸಿರುವ ಕಾರಣ ಸರ್ಕಾರದ ವಿವಿಧ ಇಲಾಖೆಗಳಿಗೆ ನೀಡುತ್ತಿದ್ದ ಅನುದಾನದ ಪ್ರಮಾಣವನ್ನು ಕಡಿತಗೊಳಿಸಿ ಅದನ್ನು ಫಲಾನುಭವಿ ಆಧಾರಿತ ಕಾರ್ಯಕ್ರಮಗಳಿಗೆ ಹಂಚಿಕೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಏಳಿಗೆಗಾಗಿ ನಮ್ಮ ಸರ್ಕಾರವು ಈ ಹಿಂದೆ ನುಡಿದಂತೆಯೇ ನಡೆದುಕೊಂಡಿದ್ದು ಶೋಷಿತ ಸಮುದಾಯಗಳ ಮೇಲೆ ನಮಗಿರುವುದು ಕರುಣೆ ಮಾತ್ರವಲ್ಲ ಜವಾಬ್ದಾರಿ ಎಂಬ ಸಂದೇಶವನ್ನೂ ಸಹ ಸ್ಪಷ್ಟವಾಗಿಯೇ ನೀಡಿದ್ದೇವೆ. ಹೀಗಿದ್ದರೂ ಈ ಹಿಂದೆ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಮೀಸಲಾಗಿದ್ದ ಹಣವನ್ನು ಈ ಹಿಂದಿನ ಬಿಜೆಪಿ ನೇತೃತ್ವದ ಸರ್ಕಾರವು ಕಾಯ್ದೆಯ ಆಶಯಕ್ಕೆ ವಿರುದ್ಧವಾಗಿ ಬೇರೆ ಬೇರೆ ಕಾಮಗಾರಿಗಳಿಗೆ ಬಳಸಿಕೊಂಡಿತ್ತು. ಇಂತಹ ಪಕ್ಷದ ನಾಯಕರು ಈ ದಿನ ಪರಿಶಿಷ್ಟ ಜಾತಿ ಮತ್ತು ಪಂಗಡದ ಅಭಿವೃದ್ಧಿಗಾಗಿ ಪ್ರಾಮಾಣಿಕವಾಗಿ ಶ್ರಮಿಸುತ್ತಿರುವ ನಮ್ಮ ಸರ್ಕಾರದ ಬಗ್ಗೆ ಟೀಕಿಸುತ್ತಿರುವುದು ವಿಪರ್ಯಾಸ. ನೈತಿಕತೆ ಇಲ್ಲದೇ ಮಾತನಾಡುತ್ತಿರುವ ಇವರ ಮಾತುಗಳನ್ನು ನಾವು ತೀವ್ರವಾಗಿ ಖಂಡಿಸುತ್ತೇನೆ ಎಂದು ಕಿಡಿಕಾರಿದ್ದಾರೆ.