ನರೇಗಲ್ಲ: ಗ್ರಂಥಗಳು ಮನುಷ್ಯನ ಜೀವನಾಡಿ. ಹೊಟ್ಟೆಗೆ ಅನ್ನ ಹೇಗೆ ಮುಖ್ಯವೋ, ತಲೆಗೆ ಜ್ಞಾನವೂ ಅಷ್ಟೇ ಮುಖ್ಯ. ಈ ಜ್ಞಾನವನ್ನು ಗ್ರಂಥಗಳು ನಮಗೆ ನೀಡುತ್ತವೆ. ಆದ್ದರಿಂದ ಗ್ರಾಮಕ್ಕೊಂದು ಗ್ರಂಥಾಲಯ ಅವಶ್ಯ ಎಂದು ಶ್ರೀ ಅಭಿನವ ಚನ್ನಬಸವ ಸ್ವಾಮೀಜಿ ಹೇಳಿದರು.
ಸಮೀಪದ ನಿಡಗುಂದಿಕೊಪ್ಪ ಗ್ರಾಮದಲ್ಲಿ ಗ್ರಾಮ ಗ್ರಂಥಾಲಯ ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಮದಲ್ಲಿ ಗ್ರಂಥಾಲಯ ಬಹಳ ದಿನಗಳ ಹಿಂದೆ ಆಗಬೇಕಿತ್ತು. ಯಾವುದಕ್ಕೂ ಯೋಗ ಕೂಡಿ ಬರಬೇಕು. ಆ ಯೋಗ ಈಗ ಕೂಡಿ ಬಂದಿದೆ. ಗ್ರಾಮಸ್ಥರು, ಯುವಕರು ಈ ಗ್ರಂಥಾಲಯದ ಸದುಪಯೋಗ ಪಡೆಯಬೇಕು ಎಂದರು.
ಕೋಟುಮಚಗಿಯ ಗ್ರಂಥಪಾಲಕ ಸುರೇಶ ಪತ್ತಾರ ವಿಶೇಷ ಉಪನ್ಯಾಸ ನೀಡಿ, ಗ್ರಂಥಗಳು ಮನುಷ್ಯನ ಉತ್ತಮ ಸಂಗಾತಿಗಳು. ಗ್ರಂಥಗಳನ್ನು ಓದುವುದರಿಂದ ನೊಂದ ಮನಸಿಗೆ ಶಾಂತಿ, ನೆಮ್ಮದಿ ದೊರಕುತ್ತದೆ. ಸದಭಿರುಚಿಯ ಸಾಹಿತ್ಯ ಓದಿದರೆ ಮನುಷ್ಯ ಪರಿಪೂರ್ಣನಾಗುತ್ತಾನೆ. ಗ್ರಂಥಗಳೇ ಇಲ್ಲದಿದ್ದರೆ ದೇವರು ಮೂಕನಾಗುತ್ತಾನೆ, ನ್ಯಾಯ ದೇವತೆ ನಿದ್ರಿಸುತ್ತಾಳೆ, ವಿಜ್ಞಾನ ವಿಶ್ರಾಂತಿ ಪಡೆಯುತ್ತದೆ ಎಂದು ಅಭಿಪ್ರಾಯಪಟ್ಟರು.
ನಿವೃತ್ತ ಶಿಕ್ಷಕ ಸರ್ವಿ ಮಾತನಾಡಿದರು. ನಿಡಗುಂದಿ ಗ್ರಾಪಂ ಅಧ್ಯಕ್ಷೆ ಗೀತಾ ಕುಕನೂರ ಅಧ್ಯಕ್ಷತೆ ವಹಿಸಿದ್ದರು. ತಾಪಂ ಮಾಜಿ ಸದಸ್ಯ ಅಂದಪ್ಪ ಬಿಚ್ಚೂರ, ಗ್ರಾಪಂ ಸದಸ್ಯರಾದ ಹನುಮಂತಪ್ಪ ಸೂಡಿ, ಸಂಗಮೇಶ ಅಬ್ಬಿಗೇರಿ, ಶಿವಣ್ಣ ಸೂಡಿ, ಪಂಚಾಯತ ಅಭಿವೃದ್ಧಿ ಅಧಿಕಾರಿ ಅಮರೇಶ ಮೂಲಿಮನಿ, ಸಿಬ್ಬಂದಿ ಉಪಸ್ಥಿತರಿದ್ದರು.