ಜಿಲ್ಲೆ

ಮಕ್ಕಳಲ್ಲಿ ಮಾನವೀಯ ಮೌಲ್ಯ ಬೆಳೆಸಿ

Davangere - Desk - Ganesh M K

ಚನ್ನಗಿರಿ: ಮಕ್ಕಳಲ್ಲಿ ಮಾನವೀಯ ಮೌಲ್ಯಗಳು ಹಾಗೂ ಸೇವಾ ಮನೋಭಾವನೆ ಮೂಡಿಸಿ, ರಚನಾತ್ಮಕ ಕೌಶಲ ಮೂಡಿಸುವ ಕೆಲಸ ಶಾಲೆಗಳಲ್ಲಿ ನಡೆಯಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಲ್. ಜಯಪ್ಪ ತಿಳಿಸಿದರು.

ಪಟ್ಟಣದ ಕ್ಷೇತ್ರ ಸಮನ್ವಯಾಧಿಕಾರಿ ಸಭಾಂಗಣದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಮತ್ತು ಕ್ಷೇತ್ರ ಸಮನ್ವಯಾಧಿಕಾರಿ ಕಚೇರಿ ಸಹಯೋಗದಲ್ಲಿ ನಡೆದ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಸಭೆ ಉದ್ಘಾಟಿಸಿ ಗುರುವಾರ ಮಾತನಾಡಿದರು.

ಮಕ್ಕಳಲ್ಲಿ ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಆಸಕ್ತಿ ಬರುವಂತ ಪ್ರಯತ್ನ ಶಿಕ್ಷಕರು ಮಾಡಬೇಕು, ಕೇವಲ ಪುಸ್ತಕದ ಹುಳುವಾಗಿ ಹೆಚ್ಚುಅಂಕ ಪಡೆದು ಸರ್ಕಾರಿ ನೌಕರಿ ಪಡೆಯಲು ವ್ಯಾಸಂಗ ಮಾಡುವಂತಾಗಬಾರದು ಎಂದರು.

ಸ್ಕೌಟ್ಸ್ ಮತ್ತು ಗೈಡ್ಸ್ ಮಕ್ಕಳಿಗೆ ಸಣ್ಣ ವಯಸ್ಸಿನಲ್ಲಿ ಶಿಸ್ತು, ಸಮಯಪಾಲನೆ, ದೇಶಪ್ರೇಮ, ಸಂಸ್ಕಾರ ಬೆಳೆಸುವ ಕೆಲಸ ಮಾಡುತ್ತದೆ. ದೇಶದಲ್ಲಿ ಯುವಕ ಶಕ್ತಿ ಅಧಿಕವಾಗಿದ್ದು, ಅವರು ಸರಿಯಾದ ದಾರಿಯಲ್ಲಿ ಹೋದಾಗ ಮಾತ್ರ ಸದೃಢ ಸಮಾಜ ನಿರ್ಮಾಣವಾಗಲು ಸಾಧ್ಯ ಎಂದರು.

ಕ್ಷೇತ್ರ ಸಮನ್ವಯಾಧಿಕಾರಿ ಡಾ.ಎಸ್. ಶಂಕರಪ್ಪ, ತಾಲೂಕು ದೈಹಿಕ ಶಿಕ್ಷಕ ಸದಾಶಿವಪ್ಪ, ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಕಾರ್ಯದರ್ಶಿ ಅಶ್ವಿನಿ, ಶಾರದಾ ಮಾಗನಹಳ್ಳಿ, ತಾಲೂಕು ಕಾರ್ಯದರ್ಶಿ ಪಿ.ಜೆ. ಓಂಕಾರಪ್ಪ, ಆಶಾ, ನಾಗಮಣಿ, ಸಿದ್ದಪ್ಪ, ಕಾಕನೂರು ನಾಗರಾಜ್ ಇದ್ದರು.