ಜಿಲ್ಲೆ

ಶಿಸ್ತು, ಕೌಶಲಕ್ಕೆ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಉತ್ತಮ ವೇದಿಕೆ

ಚನ್ನರಾಯಪಟ್ಟಣ: ಸುಂದರ ಬದುಕು ಹಾಗೂ ಆರೋಗ್ಯಕರ ಸಮಾಜ ಕಟ್ಟುವಲ್ಲಿ ಸ್ಕೌಟ್ಸ್ ಆ್ಯಂಡ್ ಗೈಡ್ಸ್‌ನ ಶಿಸ್ತು ಮತ್ತು ಕೌಶಲದ ಪಾತ್ರ ಮಹತ್ವದ್ದಾಗಿದೆ ಎಂದು ಸ್ಕೌಟ್ ಆ್ಯಂಡ್ ಗೈಡ್ಸ್ ಉಪಾಧ್ಯಕ್ಷೆ ಭಾರತಿ ನಾಗೇಶ್ ಅಭಿಪ್ರಾಯಪಟ್ಟರು.


ಪಟ್ಟಣದ ಆದಿಚುಂಚನಗಿರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್, ಆದಿಚುಂಚನಗಿರಿ ಪ್ರಥಮ ದರ್ಜೆ ಕಾಲೇಜು ಹಾಗೂ ಐಕ್ಯೂಎಸಿ ವಿಭಾಗದ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಓರಿಯೆಂಟೇಷನ್ ಕಾರ್ಯಕ್ರಮ ಹಾಗೂ ಕ್ಯಾಪ್ಟನ್ ಎಂ.ವಿ.ಪ್ರಾಂಜಲ್ ಅವರಿಗೆ ಸಂತಾಪ ಸೂಚಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸ್ವಯಂ ಶಿಸ್ತು, ಸಾಮಾಜಿಕ ಅರಿವು, ದೇಶಪ್ರೇಮ ಹಾಗೂ ಕೌಶಲಭರಿತ ಜ್ಞಾನಕ್ಕಾಗಿ ಇಂದಿನ ವಿದ್ಯಾರ್ಥಿಗಳಿಗೆ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಉತ್ತಮ ವೇದಿಕೆಯಾಗಿದ್ದು, ಮಕ್ಕಳಲ್ಲಿ ಪರಿಸರ ಪ್ರಜ್ಞೆ, ಸಂಸ್ಕೃತಿಯ ಅರಿವು ಮೂಡಿಸುವಲ್ಲಿ ಸಹಾಯಕವಾಗಿದೆ ಎಂದರು.


ವಿದ್ಯಾರ್ಥಿಗಳು ಕೇವಲ ವ್ಯಾಸಂಗಕ್ಕೆ ಮಹತ್ವ ನೀಡದೆ ಪಠ್ಯೇತರ ಚಟುವಟಿಕೆಗೂ ಆದ್ಯತೆ ನೀಡಬೇಕು. ಉತ್ತಮ ಕೌಶಲಗಳನ್ನು ಹೊಂದಿ ಗುರಿ ಸಾಧನೆಗೆ ಅವಶ್ಯವಾದ ಪರಿಶ್ರಮ ಹಾಕುವಂತೆ ಸಲಹೆ ನೀಡಿದರು.


ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಆಡಳಿತ ಅಧಿಕಾರಿ ಡಾ.ವಿ.ಮಹೇಶ್ ಮಾತನಾಡಿ, ದುರ್ಘಟನೆಗಳಾದಾಗ ಘಟನಾ ಸ್ಥಳದ ಸಮೀಪದಲ್ಲಿರುವ ಆಸ್ಪತ್ರೆ ಸೇರುವವರೆಗೂ ಹೆಚ್ಚಿನ ಅಪಾಯವನ್ನು ತಡೆಯುವುದು, ಸೂಕ್ತ ಚಿಕಿತ್ಸೆ ದೊರೆಯುವವರೆಗೂ ರೋಗಿಯ ಸ್ಥಿತಿ ಬದಲಾಗದಂತೆ ಗಮನಿಸುವುದು ಪ್ರಥಮ ಚಿಕಿತ್ಸೆಯ ಮುಖ್ಯ ಉದ್ದೇಶ. ದೈನಂದಿನ ವ್ಯವಹಾರಿಕ ಜೀವನದಲ್ಲಿ ರಸ್ತೆಯಲ್ಲಿ ಸಂಚರಿಸುವ ಯಾವುದೇ ವ್ಯಕ್ತಿ ಅಪಘಾತಕ್ಕೀಡಾದಾಗ ತುರ್ತು ಸಂದರ್ಭದಲ್ಲಿ ಆಂಬುಲೆನ್ಸ್ ದೊರಕದಿರಬಹುದು. ಯಾವುದೇ ಉಪಕರಣವಿಲ್ಲದೆ ಸ್ಥಳದಲ್ಲಿಯೇ ವ್ಯಕ್ತಿಯ ಜೀವ ರಕ್ಷಣೆಗಾಗಿ ಪ್ರಥಮ ಚಿಕಿತ್ಸೆ ನೀಡಲು ಎಲ್ಲರೂ ಸ್ವಯಂ ಸಿದ್ಧರಾಗಿರಬೇಕು. ಅದಕ್ಕಾಗಿ ಪ್ರಥಮ ಚಿಕಿತ್ಸೆಯ ಕೌಶಲ ವಿಧಾನಗಳನ್ನು ಪ್ರತಿಯೊಬ್ಬರೂ ತಿಳಿದಿರಬೇಕು ಎಂದರು.


ಆದಿಚುಂಚನಗಿರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಕೆ.ಮಂಜುನಾಥ್ ಮಾತನಾಡಿದರು. ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಖಜಾಂಚಿ ಜಯರಾಮ್, ಸ್ಕೌಟ್ಸ್ ಆ್ಯಂಡ್ ಗೈಡ್ಸ್‌ನ ರೋವರ್ಸ್ ಲೀಡರ್ ಡಾ.ಎಸ್.ಪ್ರವೀಣ್‌ಕುಮಾರ್, ಜಿಲ್ಲಾ ಸಂಘಟನೆ ಆಯುಕ್ತೆ ಪ್ರಿಯಾಂಕಾ, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.