ಜಿಲ್ಲೆ

ಸ್ಕೌಟ್ಸ್, ಗೈಡ್ಸ್ ಮಕ್ಕಳಿಗೆ ಪದಕ ಪ್ರಾವಿಣ್ಯತೆ

ನಾಗೇಶ ಎಸ್

ಆಲೂರು: ಸ್ಕೌಟ್ಸ್, ಗೈಡ್ಸ್ ಮಕ್ಕಳಿಗೆ ಅವರ ಚಟುವಟಿಕೆ ಜತೆಗೆ ಹಂತ ಹಂತವಾಗಿ ಪದಕ ಪ್ರಾವಿಣ್ಯತೆ ನೀಡಲಾಗುವುದು. ಇವು ಮಕ್ಕಳಲ್ಲಿ ವಿಶೇಷ ಕೌಶಲ ಹಾಗೂ ಪ್ರಾವಿಣ್ಯತೆಯನ್ನು ವೃದ್ಧಿಸುತ್ತವೆ ಎಂದು ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಜಿಲ್ಲಾ ಕಾರ್ಯದರ್ಶಿ ಸುರೇಶ್ ಗುರೂಜಿ ಅಭಿಪ್ರಾಯಪಟ್ಟರು.

ತಾಲೂಕಿನ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಆಲೂರು ವತಿಯಿಂದ ತಾಲೂಕಿನ ಸ್ಕೌಟ್ಸ್, ಗೈಡ್ಸ್ ಮಕ್ಕಳಿಗಾಗಿ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಪದಕ ಪ್ರಾವಿಣ್ಯತಾ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ಪ್ರಥಮ ಚಿಕಿತ್ಸೆ, ಸುರಕ್ಷಾ ಜ್ಞಾನ, ಆಂಬುಲೆನ್ಸ್, ಹೈಕಿಂಗ್, ರೀಡರ್, ಬುಕ್ ಬೈಂಡರ್, ಬೆಂಕಿಯಿಲ್ಲದೆ ಅಡುಗೆ ತಯಾರಿಸುವಿಕೆ, ಅಥ್ಲಿಟ್, ರನ್ನರ್, ಟೈಲರ್, ರೈತ, ಸಾಮುದಾಯಿಕ ಕೆಲಸಗಾರ ಸೇರಿದಂತೆ ನೂರಾರು ಕೌಶಲಭರಿತ ಪದಕಗಳು ಇಲ್ಲಿವೆ. ಮಕ್ಕಳ ಆಸಕ್ತಿಗನುಗುಣವಾಗಿ ದ್ವಿತೀಯ ಸೋಪಾನ, ತೃತೀಯ ಸೋಪಾನ, ರಾಜ್ಯ ಪುರಸ್ಕಾರ, ರಾಷ್ಟ್ರ ಪುರಸ್ಕಾರ ಹಂತಗಳಲ್ಲಿ ನಿಗದಿತ ಪದಕಗಳನ್ನು ಗಳಿಸಬೇಕಾಗುತ್ತದೆ. ಈ ಪದಕಗಳು ಕೇವಲ ಶಿಕ್ಷಣದ ಭಾಗವಲ್ಲ, ಬದುಕಿನ ನಿರ್ವಹಣೆಯ ಕೌಶಲಗಳನ್ನು ಮಕ್ಕಳಲ್ಲಿ ದೃಢೀಕರಿಸುತ್ತವೆ. ಪದಕ ಪ್ರಾವಿಣ್ಯತೆಯು ಮಕ್ಕಳಲ್ಲಿ ದೃಢತೆ, ಆತ್ಮವಿಶ್ವಾಸ, ಛಲ, ಮನೋಬಲಗಳನ್ನು ತುಂಬುತ್ತವೆ ಎಂದರು.

ತಾಲೂಕು ಉಪಾಧ್ಯಕ್ಷೆ ಸಿ.ಎಸ್.ಪೂರ್ಣಿಮಾ ಮಾತನಾಡಿ, ಸುರಕ್ಷತೆ ಕೇವಲ ರಸ್ತೆಯಲ್ಲಲ್ಲ. ನಮ್ಮ ಸುತ್ತಮುತ್ತ, ಕುಟುಂಬದಲ್ಲಿ ಹೆಣ್ಣು ಮಕ್ಕಳು ತಮ್ಮ ರಕ್ಷಣೆಯ ಬಗ್ಗೆ ಗಮನಹರಿಸಬೇಕು. ಗುಡ್ ಟಚ್, ಬ್ಯಾಡ್ ಟಚ್ ಬಗ್ಗೆ ಮಕ್ಕಳಿಗೆ ಸಂಬಂಧಿಸಿದ ಶಿಕ್ಷಕರು ತಿಳಿ ಹೇಳಬೇಕು. ಬಹುತೇಕ ಮಕ್ಕಳು ಹತ್ತಿರದ ಸಂಬಂಧಿಕರಿಂದಲೇ ದೈಹಿಕ ಹಾಗೂ ಮಾನಸಿಕ ಕಿರುಕುಳಕ್ಕೆ ಒಳಗಾಗುತ್ತಿದ್ದಾರೆ. ರಸ್ತೆ ನಿಯಮಗಳನ್ನು ತಿಳಿಯುವುದರ ಜತೆಗೆ ಸಿಗ್ನಲ್ ಲೈಟ್ ಹಸಿರು, ಹಳದಿ ಹಾಗೂ ಕೆಂಪು ಬಣ್ಣದ ದೀಪಗಳ ಮಹತ್ವವನ್ನು ಅರಿತುಕೊಳ್ಳಬೇಕು. ರಸ್ತೆ ದಾಟಲೆಂದೇ ನಿಗದಿಪಡಿಸಿದ ಜೀಬ್ರಾ ಕ್ರಾಸ್‌ನಲ್ಲಿ ಚಲಿಸಬೇಕು. ಮೊಬೈಲ್ ಮಕ್ಕಳನ್ನು ಹಾದಿತಪ್ಪಿಸದಂತೆ ಪಾಲಕರು ಹಾಗೂ ಶಿಕ್ಷಕರು ಜಾಗೃತಿ ವಹಿಸಬೇಕು. ಇತ್ತೀಚಿನ ಸಿನಿಮಾಗಳ ಹಾಡುಗಳಲ್ಲಿ ಕಂಡುಬರುವ ಅಶ್ಲೀಲತೆ ದೃಶ್ಯಗಳು ಮಕ್ಕಳ ಮನಸ್ಸನ್ನು ಚಂಚಲಗೊಳಿಸಿ ಚಿಕ್ಕ ವಯೋಮಾನದಲ್ಲಿಯೇ ಲೈಂಗಿಕತೆಗೆ ಒಳಪಡುತ್ತಿರುವುದು ಬಹುದೊಡ್ಡ ದುರಂತ ಎಂದರು.

ಇದೇ ಸಂದರ್ಭದಲ್ಲಿ ಜಿಲ್ಲಾ ಸ್ಕೌಟ್ ಆಯುಕ್ತ ಸ್ಟೀಫನ್ ಪ್ರಕಾಶ್, ಜಿಲ್ಲಾ ಸಹಾಯಕ ಆಯುಕ್ತ ಎಂ.ಬಾಲಕೃಷ್ಣ, ಜಿಲ್ಲಾ ಖಜಾಂಚಿ ಆರ್.ಎಸ್.ರಮೇಶ್, ತಾಲೂಕು ಕಾರ್ಯದರ್ಶಿ ಕೊಟ್ರೇಶ್ ಎಸ್.ಉಪ್ಪಾರ್, ತಾಲೂಕು ಖಜಾಂಚಿ ಬಿ.ಎಸ್.ಹಿಮ, ತಾಲೂಕು ಸಹ ಕಾರ್ಯದರ್ಶಿ ವೆಂಕಟರಂಗಯ್ಯ, ಪರೀಕ್ಷಕಿ ರೇಖಾ ಎ.ಎಸ್. ಮಾತನಾಡಿದರು.

ಕಾರ್ಯಕ್ರಮದಲ್ಲಿ ಭೈರಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಲೇಡಿ ಸ್ಕೌಟ್ ಮಾಸ್ಟರ್ ರೇಣುಕಾ, ಗೈಡ್ ಕ್ಯಾಪ್ಟನ್ಸ್ ಅಶ್ವಿನಿ, ಗೈಡ್ ಕ್ಯಾಪ್ಟನ್ ಸಾನಿಯಾ, ಭೈರಾಪುರದ ಶಿಕ್ಷಕಿಯರಾದ ಶಿಲ್ಪಕೃತಿ, ಸೌಮ್ಯಾ, ಶೃತಿ, ಸ್ಕೌಟ್ ಮಾಸ್ಟರ್ ಚಂದ್ರು ಪಿ.ಗೌಡ, ಭೈರಾಪುರ ಎಸ್. ವಿ. ಆಂಗ್ಲ ಮಾಧ್ಯಮ ಶಾಲೆಯ ಕಬ್ ಮಾಸ್ಟರ್ ದೇವರಾಜು, ಸ್ಕೌಟ್ ಮಾಸ್ಟರ್ ಸತೀಶ್, ಲೇಡಿ ಸ್ಕೌಟ್ ಮಾಸ್ಟರ್ ಹರ್ಷಿತಾ, ರೋಸ್ ಮೇರಿ, ಗೈಡ್ ಕ್ಯಾಪ್ಟನ್ ರಂಜಿತಾ, ಆಲೂರು ವಿಶ್ವೇಶ್ವರಯ್ಯ ಪಬ್ಲಿಕ್ ಶಾಲೆಯ ಕಬ್ ಮಾಸ್ಟರ್ ರಾಮಚಂದ್ರು, ಲೇಡಿ ಸ್ಕೌಟ್ ಮಾಸ್ಟರ್ ಶಕುಂತಲಾ, ಗೈಡ್ ಕ್ಯಾಪ್ಟನ್ ರೋಹಿಣಿ, ಮಗ್ಗೆ ಎಸ್.ಎಫ್.ಎಕ್ಸ್ ಶಾಲೆಯ ಗೈಡ್ ಕ್ಯಾಪ್ಟನ್ ಪುಷ್ಪಾ, ಸ್ಕೌಟ್ ಮಾಸ್ಟರ್ ಚೇತನ್, ಮರಸು ಹೊಸಹಳ್ಳಿಯ ಮೊರಾರ್ಜಿ ವಸತಿ ಶಾಲೆಯ ಲೇಡಿ ಸ್ಕೌಟ್ ಮಾಸ್ಟರ್ ಕಾವ್ಯಾ ಇದ್ದರು.