ಕುಶಾಲನಗರ:
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಧ್ವಜ ದಿನಾಚರಣೆ ಹಾಗೂ ಸಂಸ್ಥಾಪನಾ ದಿನಾಚರಣೆ ಪ್ರಯುಕ್ತ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಕುಶಾಲನಗರ ತಾಲೂಕು ಸ್ಥಳೀಯ ಸಂಸ್ಥೆಯ ವತಿಯಿಂದ ಕುಶಾಲನಗರ ತಾಲೂಕು ಕಾರ್ಯಾಲಯದ ಆವರಣದಲ್ಲಿ ಗುರುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಧ್ವಜ ಚೀಟಿಯನ್ನು ಕುಶಾಲನಗರ ತಹಸಿಲ್ದಾರ್ ಕಿರಣ್ ಗೌರಯ್ಯ ಬಿಡುಗಡೆ ಮಾಡಿದರು, ನಂತರ ಮಾತನಾಡಿದ ಅವರು, ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ವಿದ್ಯಾರ್ಥಿಗಳಲ್ಲಿ ದೇಶಭಕ್ತಿ ಹಾಗೂ ದೇಶದ ಕುರಿತಾದ ಕರ್ತವ್ಯಗಳನ್ನು ತಿಳಿ ಹೇಳುವ ಮತ್ತು ಶಿಸ್ತು ಮೂಡಿಸಿ ಸೇವಾ ಮನೋಭಾವನೆ ಬೆಳೆಸುವ ಕಾರ್ಯ ಮಾದರಿಯಾಗಿದೆ. ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ತಮ್ಮ 74 ನೇ ಸಂಸ್ಥಾಪನಾ ದಿನವನ್ನು ಅತ್ಯಂತ ಉತ್ಸಾಹ ಮತ್ತು ಉತ್ಸಾಹದಿಂದ ಆಚರಿಸಿದಾಗ ಸೌಹಾರ್ದತೆಯ ಮನೋಭಾವ ಮತ್ತು ಶ್ರೇಷ್ಠತೆಯ ಅನ್ವೇಷಣೆ ಸಾಧ್ಯ. ಇಂತಹ ಚಟುವಟಿಕೆಗಳು ಮತ್ತಷ್ಟು ವಿಸ್ತರಣೆಗೊಳ್ಳುವ ಮೂಲಕ ಸಮಾಜದಲ್ಲಿ ಸಾಮಾಜಿಕ ಕ್ರಾಂತಿ ಮಾಡಬಹುದು ಎಂದರು.
ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಕುಶಾಲನಗರ ತಾಲೂಕು ಸ್ಥಳೀಯ ಸಂಸ್ಥೆಯ ಅಧ್ಯಕ್ಷ ಡಾ. ಪ್ರವೀಣ್ ದೇವರಗುಂಡ ಸೋಮಪ್ಪ ಮಾತನಾಡಿ, ವಿಶ್ವಾದ್ಯಂತ ಸ್ಥಾಪನೆಗೊಂಡು ಸಾಮಾಜಿಕ ಚಳವಳಿಯಲ್ಲಿ ತೊಡಗಿರುವ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ವಿದ್ಯಾರ್ಥಿಗಳು ಮತ್ತು ಯುವ ಸಮುದಾಯದಲ್ಲಿ ಶಿಸ್ತು- ಸಂಯಮ ಹಾಗೂ ಉತ್ತಮ ನಾಯಕತ್ವ ಗುಣಗಳನ್ನು ಬೆಳೆಸುವ ಮೂಲಕ ದೇಶದ ಪ್ರಗತಿಗೆ ಪ್ರತಿಯೊಬ್ಬರೂ ಸಂಕಲ್ಪ ಹೊಂದಬೇಕೆAಬ ಸದಾಶಯಗಳನ್ನು ಹೊಂದಿದೆ. ದೇಶದಲ್ಲಿ 1950 ರಲ್ಲಿ ಅಂದಿನ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಗಳನ್ನು ಒಟ್ಟುಗೂಡಿಸಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಎಂದು ಸ್ಥಾಪಿಸಿದ ನೆನಪಿಗಾಗಿ ಪ್ರತಿ ವರ್ಷ ನವೆಂಬರ್ 1 ರಂದು ರಾಷ್ಟ್ರದಾದ್ಯಂತ ಧ್ವಜ ದಿನ ಮತ್ತು ಸಂಸ್ಥಾಪನಾ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ ಎಂದರು.
ಧ್ವಜ ದಿನಾಚರಣೆಯ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದ ಸಂಸ್ಥೆಯ ಜಿಲ್ಲಾ ಸಾರ್ವಜನಿಕ ಸಂಪರ್ಕಾಧಿಕಾರಿ ಟಿ.ಜಿ. ಪ್ರೇಮಕುಮಾರ್, ಭಾತೃತ್ವ ಹಾಗೂ ಭಾವೈಕ್ಯತೆಯ ಕುರಿತು ಪ್ರತಿಜ್ಞಾ ವಿಧಿ ಬೋಧಿಸಿದರು.
ಶಿರಸ್ತೇದಾರ್ ಬಿ.ಪಿ. ಅನಿತಾ, ಕಂದಾಯಾಧಿಕಾರಿ ಸಂತೋಷ್, ಸ್ಕೌಟ್ಸ್ ಗೈಡ್ಸ್ನ ಕುಶಾಲನಗರ ಸ್ಥಳೀಯ ಸಂಸ್ಥೆಯ ಉಪಾಧ್ಯಕ್ಷ ಕೆ.ವಿ. ಅರುಣ್,
ಕೆ.ಪಿ. ರಾಜು, ಕಾರ್ಯದರ್ಶಿ ಎಂ.ಎಸ್. ಗಣೇಶ್ , ಸಹ ಕಾರ್ಯದರ್ಶಿ ಎಸ್.ಆರ್. ಶಿವಲಿಂಗ, ಮುಳ್ಳುಸೋಗೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಗೈಡ್ಸ್ ವಿದ್ಯಾರ್ಥಿಗಳು, ಕಂದಾಯ ಇಲಾಖೆಯ ಸಿಬ್ಬಂದಿ ಇದ್ದರು.