ಜಿಲ್ಲೆ

ಮಕ್ಕಳ ಪ್ರತಿಭೆಗೆ ಅಂಕವೇ ಅಳತೆಗೋಲಲ್ಲ

ವಿಜಯವಾಣಿ ಸುದ್ದಿಜಾಲ ಧಾರವಾಡ

ಸಾರ್ಥಕ ಬದುಕಿನತ್ತ ಲಕ್ಷ್ಯ ಮತ್ತು ಮಕ್ಕಳನ್ನು ಸಮಾಜದ ಸಂಪತ್ತಾಗಿಸಲು, ಅವರ ಬದುಕನ್ನು ಸನ್ಮಾರ್ಗದಲ್ಲಿ ಕೊಂಡೊಯ್ಯಲು ಪಾಲಕರು ತಮ್ಮ ಮಹತ್ವದ ಹೊಣೆ ನಿಭಾಯಿಸಬೇಕು ಎಂದು ಮನೋರೋಗ ತಜ್ಞ ಡಾ. ಆನಂದ ಪಾಂಡುರಂಗಿ ಅಭಿಪ್ರಾಯಪಟ್ಟರು.

ಧಾರವಾಡ ಆಕಾಶವಾಣಿಯ ಸುವರ್ಣ ಸಂಭ್ರಮ ಹಿನ್ನೆಲೆಯಲ್ಲಿ ಶಾಲ್ಮಲಾ ಸಭಾಂಗಣದಲ್ಲಿ ಏರ್ಪಡಿಸಿದ್ದ ಸುಬೋಧ ಸಮಾಲೋಚನೆ, ಸಾಮಾಜಿಕ ಕಳಕಳಿ ವಿಶೇಷ ಕಾರ್ಯಕ್ರಮ ಸರಣಿಯ 100 ಸಂಚಿಕೆಗಳ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಸವಾಲುಗಳು ಅಪರಿಮಿತ. ಮಕ್ಕಳ ಮೇಲೆ ಒತ್ತಡ ಗಣನೀಯ. ಆ ಭಾರವನ್ನು ತಗ್ಗಿಸುವ ಹೊಣೆ, ಎಲ್ಲರದ್ದಾಗಿದೆ. ಅಂಕಗಳೇ ಮಕ್ಕಳ ಪ್ರತಿಭೆಯ ಅಳತೆಗೋಲಲ್ಲ. ಅಂಕಗಳ ಹೊರತಾಗಿಯೂ, ಬದುಕಿನಲ್ಲಿ ವಿಶೇಷವಾದದ್ದನ್ನು ಸಾಧಿಸಿದ ಅನೇಕರು ನಮ್ಮ ಸಮಾಜವನ್ನು ಬೆಳಗಿದ್ದಾರೆ. ಶಾಲೆ, ಕಾಲೇಜುಗಳಲ್ಲಿ ಆಪ್ತ ಸಮಾಲೋಚನೆ ಕೇಂದ್ರ ಆರಂಭಿಸುವ ಅಗತ್ಯವಿದೆ ಎಂದರು.

ಕೇಂದ್ರದ ನಿರ್ದೇಶಕ ಶರಣಬಸವ ಚೋಳಿನ ಮಾತನಾಡಿ, ಹಗರಬೊಮ್ಮನಹಳ್ಳಿಯ ಸುಬೋಧ ಕಲಿಕಾ ಕೇಂದ್ರದ ಸಹಭಾಗಿತ್ವದಲ್ಲಿ ಮೂಡಿ ಬರುತ್ತಿರುವ ಸುಬೋಧ ಸಮಾಲೋಚನೆ ಕಾರ್ಯಕ್ರಮ 113 ಕಂತುಗಳಲ್ಲಿ ಪ್ರಸಾರವಾಗಿದೆ. 2 ವರ್ಷಗಳ ಹಿಂದೆ ಆರಂಭಗೊಂಡ ಈ ಕಾರ್ಯಕ್ರಮ ಸರಣಿ, ಮಕ್ಕಳು, ಪಾಲಕರು, ಸೌಹಾರ್ದ ಸಂಬಂಧದ ಜತೆಗೆ ಸಾಮಾಜಿಕ ಅರಿವು ಮೂಡಿಸುವಲ್ಲಿ ಯಶಸ್ವಿಯಾಗಿದೆ. ಕೇಳುಗರ ಮೆಚ್ಚುಗೆಗೆ ಪಾತ್ರವಾಗಿದೆ ಎಂದರು.

ಸುಬೋಧ ಕಲಿಕಾ ಕೇಂದ್ರದ ಡಾ.ಗುರುರಾಜ ಪಾಟೀಲ ಅವರಿಗೆ ಸನ್ಮಾನಿಸಲಾಯಿತು. ನಿಲಯದ ಮುಖ್ಯಸ್ಥ ಕೆ.ಅರುಣ ಪ್ರಭಾಕರ, ನಿಕಟಪೂರ್ವ ನಿಲಯ ನಿರ್ದೇಶಕ ಬಸು ಬೇವಿನಗಿಡದ, ಆನಂದ ಪಾಟೀಲ, ಇತರರು ಇದ್ದರು. ಕೆ. ಶಿವರಾಜ ಸ್ವಾಗತಿಸಿದರು. ಸುರೇಖಾ ಸುರೇಶ ನಿರೂಪಿಸಿದರು.