ಅರಕೇರಾ: ಈ ಜಗತ್ತು ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಅವಲಂಭಿಸಿದೆ. ಮಕ್ಕಳು ಪ್ರಾಥಮಿಕ ಹಂತದಲ್ಲೇ ವಿಜ್ಞಾನ ಚಟುವಟಿಕೆಗಳಲ್ಲಿ ಹೆಚ್ಚಿನ ಆಸಕ್ತಿ ಹೊಂದಿ ಪ್ರಗತಿ ಸಾಧಿಸಬೇಕು ಎಂದು ಬಿಆರ್‌ಪಿ ಶಿವಕುಮಾರ ನಾಡಗೌಡ ಹೇಳಿದರು.
ಇದನ್ನೂ ಓದಿ: ಗಣಕ ವಿಜ್ಞಾನ ಉಪನ್ಯಾಸಕರ ಕಾರ್ಯಾಗಾರ
ಪಟ್ಟಣದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಣ ಇಲಾಖೆ, ಅಜೀಂ ಪ್ರೇಮ್ ಜೀ ಫೌಂಡೇಶನ್ ಸಹಯೋಗದಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ವಿಜ್ಞಾನ ಮೇಳ ಕಾರ್ಯಕ್ರಮದಲ್ಲಿ ಶುಕ್ರವಾರ ಮಾತನಾಡಿದರು.
ಹೊಸ ಹೊಸ ತಂತ್ರಜ್ಞಾನ ಆವಿಷ್ಕಾರ, ಪ್ರಯೋಗಗಳು ವಿಜ್ಞಾನ ಮತ್ತು ತಂತ್ರಜ್ಞಾನದಿಂದ ನಡೆಯುತ್ತಿವೆ. ವಿಜ್ಞಾನ ಕ್ಷೇತ್ರದಲ್ಲಿನ ಎಲ್ಲ ಚಟುವಟಿಕೆಗಳು, ಪ್ರಯತ್ನಗಳು ಮತ್ತು ಸಾಧನೆಗಳನ್ನು ಪ್ರದರ್ಶಿಸುವುದರಿಂದ ಮಕ್ಕಳಲ್ಲಿ ಹೆಚ್ಚಿನ ಆಸಕ್ತಿ ಮೂಡಲಿದೆ. ಇದರಿಂದ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಯಲಿದೆ ಎಂದರು.
ಎಸ್ಡಿಎಂಸಿ ಅಧ್ಯಕ್ಷ ಮಾನಶಯ್ಯ ಪೂಜಾರಿ ಮಾತನಾಡಿ, ಭಾರತದ ಹೆಮ್ಮೆಯ ವಿಜ್ಞಾನಿ ಸರ್ ಸಿ.ವಿ ರಾಮನ್ ಅವರ ಅಪೂರ್ವ ಸಾಧನೆ ನೆನಪಿನಲ್ಲಿ ರಾಷ್ಟ್ರೀಯ ವಿಜ್ಞಾನ ದಿನ ಎಂದು ಗುರುತಿಸಲಾಗಿದೆ. ವಿಜ್ಞಾನದಲ್ಲಿ ನೋಬೆಲ್ ಪ್ರಶಸ್ತಿ ಪಡೆದ ಏಷ್ಯಾದ ಮೊಟ್ಟ ಮೊದಲ ವಿಜ್ಞಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು ಎಂದರು. ವಿಜ್ಞಾನ ಮೇಳದಲ್ಲಿ ವಿವಿಧ ಪ್ರಯೋಗಗಳನ್ನು ವಿದ್ಯಾರ್ಥಿಗಳು ಪ್ರಸ್ತುತಪಡಿಸಿದರು. ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರಶಂಸನಾ ಪತ್ರ ವಿತರಿಸಿದರು.
ಎಸ್ಡಿಎಂಸಿ ಉಪಾಧ್ಯಕ್ಷ ನಾಗರಾಜ ದೇವರಮನಿ, ಅಕ್ಷರದಾಸೋಹ ಅಧಿಕಾರಿ ಬಸವರಾಜ ಕಟ್ಟಿಮನಿ, ಸಿಆರ್‌ಪಿ ಬಸವರಾಜ, ಅಜೀಂ ಪ್ರೇಮ್ ಜೀ ಫೌಂಡೇಶನ್ ತಾಲೂಕು ಸಂಯೋಜನಾಧಿಕಾರಿ ನಳಿನಿ, ಬಾಸಪ್ರೌ ಶಾಲೆ ಮುಖ್ಯ ಶಿಕ್ಷಕ ಮುರುಳಿಧರ್‌ರಾವ್ ಕುಲ್ಕರ್ಣಿ, ಸಮಾಹಿಪ್ರಾ ಶಾಲೆ ಮುಖ್ಯಶಿಕ್ಷಕ ಲಕ್ಷ್ಮಣ ಚಲವಾದಿ, ಎಪಿಎಫ್ ಸಂಪನ್ಮೂಲ ವ್ಯಕ್ತಿಗಳಾದ ರಮೇಶ ಕುಲ್ಕರ್ಣಿ, ಭೀಮಸೇನ್ ಜೋಷಿ, ಶಿಕ್ಷಕರಾದ ಕೆಎನ್ ಹುಣಸಿಕಟ್ಟಿ, ಭವಾನಿ, ಹಬೀಬ, ಜ್ಯೋತಿ, ಬಸವರಾಜ ಇತರರಿದ್ದರು.