ಜಿಲ್ಲೆ

ಸೋಂಕು ವ್ಯಾಧಿ ತಡೆಗೆ ಅಗ್ನಿಹೋತ್ರ ಅವಶ್ಯ

ಶಿವಮೊಗ್ಗ: ಪರಿಸರ ಹದಗೆಡುತ್ತಿರುವ ಈ ಕಾಲಘಟ್ಟದಲ್ಲಿ ಅಗ್ನಿಹೋತ್ರದ ಅವಶ್ಯಕತೆಯಿದೆ. ಶರೀರಕ್ಕಾಗುವ ಕಷ್ಟ, ಸಮಾಜಕ್ಕಾಗುವ ಹಿಂಸೆ, ಅತಿವೃಷ್ಟಿ-ಅನಾವೃಷ್ಟಿಯಿಂದ ಲಯವಾಗುವ ಸನ್ನಿವೇಶಗಳು ಮತ್ತು ಕಾಲಾವಧಿಯಲ್ಲಿ ಬರುವ ಸೋಂಕು ವ್ಯಾಧಿಗಳನ್ನು ಕೂಡ ಅಗ್ನಿಹೋತ್ರದಿಂದ ರಕ್ಷಿಸಬಹುದು ಎಂದು ವಿದ್ವಾಂಸ ಡಾ. ವಂಶಿಕೃಷ್ಣ ಘನಪಾಠಿ ತಿಳಿಸಿದರು.

ಮತ್ತೂರಿನ ರಾಮ ಭಜನಾ ಮಂದಿರದಲ್ಲಿ ಸೋಮವಾರ ಬೆಂಗಳೂರಿನ ಶ್ರೀ ಪ್ರಾಚೇತಸ ಶ್ರೌತವಿದ್ಯಾ ಸಂವರ್ಧಿನಿ ವಿಶ್ವಸ್ತ ಮಂಡಳಿ ಹಾಗೂ ಮತ್ತೂರಿನ ಜಾನಕಿ ರಾಮಾಶ್ರಮದ ಸಹಯೋಗದಲ್ಲಿ ಏರ್ಪಡಿಸಿದ್ದ ಧರ್ಮಶಾಸ್ತ್ರ ಗೋಷ್ಠಿ ಉದ್ಘಾಟಿಸಿ ಮಾತನಾಡಿ, ಸಮಾಜ ಮತ್ತು ಧರ್ಮ ರಕ್ಷಣೆಗೆ ವೇದ ಮತ್ತು ವೇದಿ ಅಂದರೆ ಅಗ್ನಿಹೋತ್ರಿಯನ್ನು ಉಳಿಸುವ ಪ್ರಯತ್ನ ಅಗತ್ಯ ಎಂದರು.

ಯಾಗದ ಮಹತ್ವದ ಬಗ್ಗೆ ನೂರಾರು ಸಂಶೋಧನೆಗಳಾಗಿವೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ವೈಜ್ಞಾನಿಕವಾಗಿ ಯಾಗದ ಧನಾತ್ಮಕ ಅಂಶಗಳು ಋಜುವಾತಾಗಿದೆ. ಸರ್ಕಾರದಿಂದ ಅನುದಾನ ನೀಡಿದರೂ, ನೀಡದಿದ್ದರೂ ವೇದಗಳನ್ನು ಉಳಿಸುವ ಕಾರ್ಯವನ್ನು ನಿರಂತರವಾಗಿ ಮಾಡಲಾಗುತ್ತಿದೆ. ಅವರ ಪ್ರಯತ್ನಕ್ಕೆ ಸರ್ಕಾರ ಸ್ಪಂದಿಸಬೇಕು ಎಂದು ಹೇಳಿದರು.

ವೇದಾಧ್ಯಾಯನ ಮಾಡಿದ ವಿದ್ವಾಂಸರಿಗೆ ಅವಕಾಶಗಳು ಸಿಗುತ್ತಿಲ್ಲ. ನಾಡಿನ ಎಲ್ಲ ದೇವಸ್ಥಾನಗಳಲ್ಲೂ ವರ್ಷಕೊಮ್ಮೆಯಾದರೂ ವೇದ ಪಾರಾಯಣ ಮತ್ತು ವೇದ, ಯಾಗ, ಯಜ್ಞಗಳ ಬಗ್ಗೆ ತಿಳಿದುಕೊಳ್ಳುವ ಕೆಲಸವಾಗಬೇಕಿದೆ. ಯಜ್ಞಗಳಿಂದ ನಕಾರಾತ್ಮಕ ಶಕ್ತಿ ಹೋಗಲಾಡಿಸಲು ಸಾಧ್ಯ ಎಂದರು.

ಕರ್ನಾಟಕ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಸಚ್ಚಿದಾನಂದಮೂರ್ತಿ ಮಾತನಾಡಿ, ಕರೊನಾ ಸಂದರ್ಭದಲ್ಲಿ ಬೆರಳೆಣಿಕೆಯ ಹೆಸರಾಂತ ದೇಗುಲಗಳನ್ನು ಹೊರತುಪಡಿಸಿ ಗ್ರಾಮೀಣ ಭಾಗದಲ್ಲಿ ತಲೆತಲಾಂತರದಿಂದ ಪೂಜಾ ವೃತ್ತಿ ನಡೆಸಿಕೊಂಡು ಬರುತ್ತಿರುವ ಅರ್ಚಕರು ಮತ್ತು ಅಡುಗೆಯವರು ಜೀವನ ನಿರ್ವಹಣೆಗೆ ಬಹಳ ಕಷ್ಟಪಟ್ಟಿದ್ದಾರೆ ಎಂದು ಹೇಳಿದರು.

ಬ್ರಾಹ್ಮಣರಲ್ಲಿ ವಧು ಸಿಗುತ್ತಿಲ್ಲ ಎಂಬ ಕಾರಣಕ್ಕೆ ಅರ್ಚಕರನ್ನು ವಿವಾಹವಾಗುವ ವಧುವಿಗೆ 3 ಲಕ್ಷ ರೂ. ಬಾಂಡ್ ನೀಡುವ ಯೋಜನೆ ಜಾರಿಗೊಳಿಸಲಾಗಿದೆ. ರಾಜ್ಯದಲ್ಲಿ 47 ಲಕ್ಷಕ್ಕೂ ಹೆಚ್ಚು ಬ್ರಾಹ್ಮಣರಿದ್ದಾರೆ. ನೂರಾರು ಪಂಗಡಗಳಿದ್ದು ಎಲ್ಲ ಬ್ರಾಹ್ಮಣರು ಒಂದೇ ಎಂದು ತಿಳಿದಾಗ ಕೇಂದ್ರ ಸರ್ಕಾರ ನೀಡಿದ ಆರ್ಥಿಕ ಮೀಸಲಾತಿಯ ಲಾಭ ಪಡೆಯಬಹುದು. ಬ್ರಾಹ್ಮಣರ ಹಲವು ಪಂಗಡಗಳ ಗೊಂದಲದಿಂದ ಸರ್ಕಾರದ ಅಧಿಕೃತ ಗಣತಿ ಪ್ರಕಾರ ಕೇವಲ 17 ಲಕ್ಷ ಬ್ರಾಹ್ಮಣರಿದ್ದಾರೆ. ಸರ್ಕಾರದ ಅಂಕಿ-ಅಂಶಗಳು ತಪ್ಪಿನಿಂದ ಕೂಡಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಜಾನಕಿ ರಾಮಾಶ್ರಮದ ಶ್ರೀ ಅಕ್ಷರಾನಂದೇಂದ್ರ ಸರಸ್ವತಿ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್, ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಬಿ.ಭಾನುಪ್ರಕಾಶ್, ಜ್ಯೋತಿಷಿ ಭಾನುಪ್ರಕಾಶ್ ಶರ್ಮಾ ಇತರರಿದ್ದರು.