ಬೆಳಗಾವಿ: ವಿವಿಧ ರಾಜ್ಯಗಳಿಗೆ ಮಾದರಿಯಾಗುವ ನಿಟ್ಟಿನಲ್ಲಿ ಹೊಸ ರೀತಿಯ ಹಾಗೂ ವೈಜ್ಞಾನಿಕ ಮೈನಿಂಗ್ ಯೋಜನೆ ರೂಪಿಸಲಾಗಿದ್ದು, ಶೀಘ್ರದಲ್ಲಿ ಅನುಷ್ಠಾನಗೊಳಸಲಾಗುವುದು ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ ನಿರಾಣಿ ತಿಳಿಸಿದರು.
ನಗರದ ಕುಮಾರಸ್ವಾಮಿ ಬಡಾವಣೆಯಲ್ಲಿ ಬೆಳಗಾವಿಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ನೂತನ ಕಚೇರಿ ಮತ್ತು ಜಿಲ್ಲಾ ಖನಿಜ ಭವನವನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು. ಜಾರ್ಖಂಡ್ ಮಾದರಿಯಲ್ಲಿ ತರಬೇತಿ ಪಡೆದು ಬ್ಲಾಸ್ಟಿಂಗ್ ಮಾಡಲಾಗುವುದು. ಪರಿಸರ ಹಾನಿಯಾಗದಂತೆ ಸಂರಕ್ಷಣೆ ಮಾಡಲಾಗುವುದು.
ಈಗಿರುವ ಬ್ಲಾಸ್ಟಿಂಗ್ ಸ್ಥಳಗಳನ್ನು ಪರಿಶೀಲಿಸಿ ತರಬೇತಿ ನೀಡಿದ ನಂತರ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತೆ ವಹಿಸಿ ಬ್ಲಾಸ್ಟಿಂಗ್ ಮಾಡಲಾಗುವುದು ಎಂದರು. ಮುಂದಿನ ದಿನಗಳಲ್ಲಿ ಬೆಳಗಾವಿ ಜಿಲ್ಲೆ ಸೇರಿ ವಿವಿಧ ಜಿಲ್ಲೆಗಳಲ್ಲಿ ಲೀಗಲ್ ಮೈನಿಂಗ್, ಬ್ಲಾಸ್ಟಿಂಗ್ ಟ್ರೈನಿಂಗ್ ಮತ್ತು ಮರಳು ಬೆಲೆ ನಿಗದಿ ಕುರಿತು ಸಾರಿಗೆ ಇಲಾಖೆ, ಅರಣ್ಯ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಕ್ವಾರಿ ಮಾಲೀಕರ ಜತೆಗೆ ಸಭೆ ನಡೆಸಲಾಗುವುದು.
ಬೆಳಗಾವಿ ಖನಿಜ ಭವನ ಸುಮಾರು 1.5 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿದ್ದು, ವಿವಿಧ ಜಿಲ್ಲೆಗಳಲ್ಲಿ ಖನಿಜ ಭವನ ನಿರ್ಮಾಣ ಮಾಡಲಾಗುವುದು ಎಂದು ಸಚಿವ ನಿರಾಣಿ ತಿಳಿಸಿದರು. ವಿಧಾನ ಪರಿಷತ್ ಆಡಳಿತ ಪಕ್ಷದ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಮಾತನಾಡಿ, ಗುತ್ತಿಗೆದಾರರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಮೈನಿಂಗ್ ವ್ಯವಸ್ಥೆ ಮಾಡಲಾಗಿದೆ.
ಬ್ಲಾಸ್ಟಿಂಗ್ ವಿಚಾರದಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು. ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ, ಜಿಪಂ ಸಿಇಒ ಎಚ್.ವಿ.ದರ್ಶನ್, ಪೊಲೀಸ್ ಆಯುಕ್ತ ಡಾ. ಕೆ.ತ್ಯಾಗರಾಜನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಉಪವಿಭಾಗಾಧಿಕಾರಿ ಅಶೋಕ ತೇಲಿ, ಬುಡಾ ಅಧ್ಯಕ್ಷ ಘೂಳಪ್ಪ ಹೊಸಮನಿ ಇತರರು ಉಪಸ್ಥಿತರಿದ್ದರು. ಶೈಲಾ ಕೊಕ್ಕರಿ ನಿರೂಪಿಸಿದರು. ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪ ನಿರ್ದೇಶಕಿ ಬಿಂದನ ಪಾಟೀಲ ವಂದಿಸಿದರು.