ಮೈಸೂರು: ವಿದ್ಯಾರ್ಥಿಗಳು ಮಾದಕ ವಸ್ತು ಸೇವನೆ ಮತ್ತು ಮೊಬೈಲ್ ದುರ್ಬಳಕೆಯಿಂದಾಗಿ ಮಾನಸಿಕ ರೋಗ ಮಾತ್ರವಲ್ಲದೆ ಇತರ ರೋಗರುಜಿನಗಳಿಗೆ ತುತ್ತಾಗುತ್ತಿದ್ದು, ಜಗತ್ತು ಬಹುದೊಡ್ಡ ವಿಕೋಪವನ್ನು ಎದುರಿಸಲಿದೆ ಎಂದು ಪ್ರಾಂಶುಪಾಲೆ ಪ್ರೊ.ಅನಿತಾ ಆತಂಕ ವ್ಯಕ್ತಪಡಿಸಿದರು.
ವಿಜಯನಗರ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ಲಾಟ್ ಕ್ಲಬ್, ರೆಡ್‌ಕ್ರಾಸ್, ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಹಾಗೂ ಗ್ರಂಥಾಲಯ ವಿಭಾಗದಿಂದ ಶನಿವಾರ ಕಾಲೇಜಿನಲ್ಲಿ ಆಯೋಜಿಸಿದ್ದ ಒಂದು ದಿನದ ‘ವಿಕೋಪ ನಿರ್ವಹಣಾ’ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ರಾಜರ ಕಾಲದಲ್ಲಿ ಸಾಲು ಮರಗಳು, ಸಾಲು ಕೆರೆಗಳನ್ನು ನಿರ್ಮಿಸಿ ಪರಿಸರ ಸಂರಕ್ಷಣೆಯನ್ನು ಮಾಡಲಾಗುತ್ತಿತ್ತು. ಆದರೆ ಇಂದು ಮಾನವನ ಅತಿಯಾದ ಆಸೆ ಹಾಗೂ ಅಭಿವೃದ್ಧಿ ಹೆಸರಿನಲ್ಲಿ ಜಲಮೂಲಗಳನ್ನು ಮುಚ್ಚುತ್ತಿರುವ ಕಾರಣ ವಿಕೋಪಗಳು ಸಾಮಾನ್ಯವಾಗಿದೆ. ವಿಪತ್ತುಗಳನ್ನು ಎದುರಿಸಲು ವೈಜ್ಞಾನಿಕ ಪ್ರಜ್ಞೆ ಮತ್ತು ಕೌಶಲ ಅವಶ್ಯಕತೆ ಇದೆ ಎಂದು ತಿಳಿಸಿದರು.
ಸಂಪನ್ಮೂಲ ವ್ಯಕ್ತಿಯಾಗಿ ತರಬೇತುದಾರ ಡಾ.ದಿಲೀಪ್ ಕುಮಾರ್ ಎಂ.ನರಸಯ್ಯ ಮಾತನಾಡಿ, ಸ್ಥಳೀಯವಾಗಿ ಸಮುದಾಯ ಮತ್ತು ವಿದ್ಯಾರ್ಥಿ ಸಮೂಹದ ಸಾಮರ್ಥ್ಯವನ್ನು ವೃದ್ಧಿಸುವ ತಂತ್ರಾಂಶಗಳ ಬಗ್ಗೆ ತಿಳಿಸಿಕೊಟ್ಟರು. ವಿಕೋಪ ಅಪಾಯ ತಡೆಗಟ್ಟುವಿಕೆ,ಪೂರ್ವ ಸಿದ್ಧತೆ, ಸ್ಪಂದನೆ ಹಾಗೂ ಪುನರ್ವಸತಿ ಯೋಜನೆಗಳ ಕುರಿತು ತರಬೇತಿ ನೀಡಿದರು.
ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಪ್ರಾದೇಶಿಕ ಅಧಿಕಾರಿ ನಾಗರಾಜ್ ಅರಸ್ ಹಾಗೂ ಸಿಬ್ಬಂದಿ ಅಗ್ನಿ ಅವಘಡವಾದಾಗ ಸ್ಪಂದಿಸುವ ವಿಧಾನವನ್ನು ಕಲ್ಪಿತ ಪ್ರದರ್ಶನ ಮಾಡುವ ಮೂಲಕ ತಿಳಿಸಿಕೊಟ್ಟರು.
ಕಾರ್ಯಕ್ರಮದ ಸಂಯೋಜಕ ಪ್ರೊ.ಭದ್ರಗಿರಿಯಯ್ಯ, ವಿದ್ಯಾರ್ಥಿಗಳು ವಿಕೋಪ ನಿರ್ವಹಣಾ ಕುರಿತು ಜ್ಞಾನ ಮತ್ತು ಕೌಶಲವನ್ನು ಬೆಳೆಸಿಕೊಳ್ಳಬೇಕು. ಸಂಕಷ್ಟದಲ್ಲಿರುವ ಶ್ರೀಸಾಮಾನ್ಯರಿಗೂ ಸಹಾಯ ಮಾಡಲು ಸಾಧ್ಯ ಎಂದು ತಿಳಿಸಿದರು.
ಸಸ್ಯಶಾಸ್ತ್ರದ ವಿಭಾಗದ ಮುಖ್ಯಸ್ಥೆ ಪ್ರೊ.ಸಿ.ಹೇಮಾವತಿ, ವಾಣಿಜ್ಯ ವಿಭಾಗದ ಡಾ.ಮಹಾದೇವಸ್ವಾಮಿ, ಎನ್‌ಸಿಸಿ ಅಧಿಕಾರಿ ಪ್ರೊ. ಲತಾ, ಸ್ಕೌಟ್ಸ್ ಅ್ಯಂಡ್ ಗೈಡ್ಸ್ ಸಂಯೋಜಕಿ ಮೀರಾ ಓಂಕಾರ್ ಶೆಟ್ಟಿ, ಎನ್‌ಎಸ್‌ಎಸ್ ಕಾರ್ಯಕ್ರಮ ಸಂಯೋಜಕ ಡಾ.ರಾಜೇಂದ್ರ, ಗ್ರಂಥಾಲಯ ಮುಖ್ಯಸ್ಥರಾದ ಡಾ. ರೇಖಾ ಹಾಗೂ ಡಾ.ಆನಂದ್ ಇತರರು ಇದ್ದರು.