ಜಿಲ್ಲೆ

ಉಮ್ಮಡಹಳ್ಳಿಯಲ್ಲಿ ಸುಸಜ್ಜಿತ ಸೈನ್ಸ್ ಪಾರ್ಕ್: ಹೈಟೆಕ್ ನಮ್ಮ ಸರ್ಕಾರಿ ಪ್ರೌಢಶಾಲೆ

ಮಂಡ್ಯ: ವಿಭಿನ್ನ ಹಾಗೂ ಗುಣಮಟ್ಟದ ಶಿಕ್ಷಣದ ಮೂಲಕವೇ ಉತ್ತಮ ಹೆಸರು ಗಳಿಸಿಕೊಂಡಿರುವ ತಾಲೂಕಿನ ಉಮ್ಮಡಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಸುಸಜ್ಜಿತವಾದ ಹೊರಾಂಗಣ ವಿಜ್ಞಾನ ಉದ್ಯಾನವನ್ನು ಸ್ಥಾಪಿಸಲಾಗಿದೆ. ಇದರೊಂದಿಗೆ ಜಿಲ್ಲೆಯ ಎರಡನೇ ಹಾಗೂ ಆಧುನಿಕತೆ ಸೌಕರ್ಯ ಹೊಂದಿರುವ ಮೊದಲ ಶಾಲೆ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.

ಮಂಡ್ಯ ದಕ್ಷಿಣ ವಲಯ ವ್ಯಾಪ್ತಿಗೆ ಒಳಪಡುವ ಉಮ್ಮಡಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ 10 ಲಕ್ಷ ರೂ ವೆಚ್ಚದಲ್ಲಿ ವಿಜ್ಞಾನ ಉದ್ಯಾನವನ್ನು ತೆರೆಯಲಾಗಿದೆ. ಇದರಿಂದಾಗಿ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಲು ಹಾಗೂ ವಿಜ್ಞಾನದ ಕಡೆಗೆ ಆಸಕ್ತಿ ಮೂಡಿಸಲು ಸಹಕಾರಿಯಾಗಿದೆ. ಇಂತಹ ಸೈನ್ಸ್ ಪಾರ್ಕ್ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿಯೂ ಇಲ್ಲ ಎನ್ನುವುದು ಗಮನಾರ್ಹ. ಮಳವಳ್ಳಿ ತಾಲೂಕು ಹುಸ್ಕೂರಿನಲ್ಲಿ ಮೊದಲು ಹೊರಾಂಗಣ ವಿಜ್ಞಾನ ಪಾರ್ಕ್ ಸ್ಥಾಪಿಸಲಾಗಿತ್ತು.

ಉಮ್ಮಡಹಳ್ಳಿ ಸರ್ಕಾರಿ ಪ್ರೌಢಶಾಲೆಗೆ ವಿಜ್ಞಾನ ಉದ್ಯಾನ ತರುವ ನಿಟ್ಟಿನಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಶೇಖ್ ತನ್ವೀರ್ ಆಸಿಫ್ ಪಾತ್ರ ಮಹತ್ವದ್ದಾಗಿದೆ. ಈ ಶಾಲೆಯಲ್ಲಿ ಆಯೋಜಿಸುವ ಚಟುವಟಿಕೆ ಹಾಗೂ ವಿದ್ಯಾರ್ಥಿಗಳ ಕ್ರಿಯಾಶೀಲತೆ ಬಗ್ಗೆ ತಿಳಿದಿದ್ದ ಸಿಇಒ, ಹಿಂದೊಮ್ಮೆ ಶಾಲೆಯಲ್ಲಿ ನಡೆದಿದ್ದ ಮಕ್ಕಳ ಸಂತೆ ಹಾಗೂ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಭಾಗಿಯಾಗಿದ್ದರು. ಆ ವೇಳೆ ಶಾಲೆಯ ಪರಿಸರ, ವಿದ್ಯಾರ್ಥಿಗಳ ಚಟುವಟಿಕೆ ಗಮನಿಸಿದರು. ಮಾತ್ರವಲ್ಲದೆ ಸುಮಾರು ನಾಲ್ಕೂವರೆ ಎಕರೆ ಪ್ರದೇಶದಲ್ಲಿರುವ ಶಾಲೆಯಲ್ಲಿ ವಿಜ್ಞಾನ ಉದ್ಯಾನ ಮಾಡುವ ನಿರ್ಧಾರ ಮಾಡಿದ್ದರು.

ನಂತರ ರಾಜ್ಯ ಪಾನೀಯ ನಿಗಮ ನಿಯಮಿತಕ್ಕೆ ಪ್ರಸ್ತಾವನೆ ಸಲ್ಲಿಕೆಯಾಯಿತು. ಸಿಇಒ ವರದಿಗೆ ಸ್ಪಂದಿಸಿದ ನಿಗಮ ತನ್ನ ಖಾಸಗಿ ಸಾರ್ವಜನಿಕ ಹಿತಾಸಕ್ತಿ ನಿಧಿ(ಸಿಎಸ್‌ಆರ್)ಯನ್ನು ನೀಡುವುದಾಗಿ ತಿಳಿಸಿತು. ಅದರಂತೆ 10 ಲಕ್ಷ ರೂ ವ್ಯಯಿಸಿತು. ಗುತ್ತಿಗೆ ಪಡೆದ ಖಾಸಗಿ ಸಂಸ್ಥೆ ಶಾಲೆಯ ಆವರಣದಲ್ಲಿ ಸುಸಜ್ಜಿತವಾದ ವಿಜ್ಞಾನ ಉದ್ಯಾನವನ್ನು ತೆರೆದಿದೆ. ಎಲ್ಲ ಕಾಮಗಾರಿ ಪೂರ್ಣಗೊಂಡಿದ್ದು, ಶೀಘ್ರದಲ್ಲಿ ಉದ್ಘಾಟನೆಗೊಳ್ಳಲಿದೆ. ಒಟ್ಟಾರೆ ಸಿಎಸ್‌ಆರ್ ಅನುದಾನವನ್ನು ಉತ್ತಮ ಕಾರ್ಯಕ್ಕೆ ಬಳಕೆ ಮಾಡಿಕೊಂಡಿರುವುದು ಮೆಚ್ಚುಗೆಯ ವಿಷಯ.

12 ಮಾದರಿ ಒಳಗೊಂಡಿರುವ ಪಾರ್ಕ್

ರಾಜ್ಯದಲ್ಲಿ ಬೆರಳೆಣಿಕೆಯಷ್ಟು ಶಾಲೆಯಲ್ಲಷ್ಟೇ ವಿಜ್ಞಾನ ಪಾರ್ಕ್ ಇದೆ. ಇದೀಗ ಈ ಸಾಲಿಗೆ ಉಮ್ಮಡಹಳ್ಳಿ ಕೂಡ ಸೇರಿಕೊಂಡಿದೆ. ಮುಖ್ಯವಾಗಿ 12 ಮಾದರಿಯನ್ನು ಪಾರ್ಕ್ ಒಳಗೊಂಡಿದೆ. ಪರಿದರ್ಶಕ, ನಿಮ್ಮನ್ನು ನೀವೇ ಮೇಲೆತ್ತಿ, ಕನ್ನಡಿಯೊಂದಿಗೆ ಆಟ, ಘರ್ಷಣೆ ಮತ್ತು ವೇಗ, ನಾದ ಕೊಳವೆ, ಶಕ್ತಿಯ ಸಂರಕ್ಷಣೆ, ಎರಡು ತುದಿಗಳುಳ್ಳ ಕೋನ, ಸನ್ನೆ, ನ್ಯೂಟನ್‌ನ ಮೂರನೇ ನಿಯಮ, ಗೈರೋಸ್ಕೋಪ್, ಪ್ಲಾಂಕ್ ನಿಯಮ, ಪ್ರತಿಧ್ವನಿ ಕೊಳವೆ ಮಾದರಿ ಅಳವಡಿಸಲಾಗಿದೆ.

ಈ ಮಾದರಿಯನ್ನು ಬಳಕೆ ಮಾಡಿದಾಗ ಹೊಸ ಅನುಭವ ಸಿಗಲಿದೆ. ಮುಖ್ಯವಾಗಿ ಪುಸ್ತಕದ ಕಲಿಕೆ ಹಾಗೂ ಪ್ರಾಯೋಗಿಕ ಕಲಿಕೆಗೂ ನಡುವಿನ ಸಾಕಷ್ಟು ಸಾಮ್ಯತೆ ಗೊತ್ತಾಗುತ್ತದೆ. ಮಾತ್ರವಲ್ಲದೆ ಮಕ್ಕಳನ್ನು ಆಕರ್ಷಿಸುತ್ತದೆ. ಸಧ್ಯಕ್ಕೆ ಉಮ್ಮಡಹಳ್ಳಿ ಶಾಲೆಯ ಮಕ್ಕಳಷ್ಟೇ ಇದನ್ನು ಬಳಕೆ ಮಾಡುತ್ತಿದ್ದಾರೆ. ಮುಂದಿನ ದಿನದಲ್ಲಿ ಬೇರೆ ಶಾಲೆಯ ವಿದ್ಯಾರ್ಥಿಗಳನ್ನು ಇಲ್ಲಿಗೆ ಕರೆತಂದು ವಿಜ್ಞಾನದ ಅನುಭವ ನೀಡುವ ಯೋಜನೆ ಇದೆ. ಇದಲ್ಲದೆ ಒಳಾಂಗಣ ಖಗೋಳ ವಿಜ್ಞಾನ ಪ್ರಯೋಗಾಲಯ ಮಾಡಬೇಕೆನ್ನುವ ಇರಾದೆ ಹೊಂದಲಾಗಿದೆ.

ಗೋವಿಂದೇಗೌಡ ಪ್ರಶಸ್ತಿ ಪುರಸ್ಕೃತ ಸ್ಕೂಲ್

ಉಮ್ಮಡಹಳ್ಳಿ ಸರ್ಕಾರಿ ಪ್ರೌಢಶಾಲೆ ಕಳೆದ ಸಾಲಿನ ಮಾಜಿ ಸಚಿವ ಎಚ್.ಜಿ.ಗೋವಿಂದೇಗೌಡ ಹೆಸರಿನಲ್ಲಿ ಕೊಡಮಾಡುವ ಉತ್ತಮ ಶಾಲಾ ಪ್ರಶಸ್ತಿಗೆ ಆಯ್ಕೆಯಾಗಿದೆ. ಮೈಸೂರು ವಿಭಾಗದಲ್ಲಿ ನಡೆದ ಆಯ್ಕೆಯಲ್ಲಿ ಹಲವು ಶಾಲೆಗಳನ್ನು ಹಿಂದಿಕ್ಕಿ ಉಮ್ಮಡಹಳ್ಳಿ ಸ್ಕೂಲ್‌ಗೆ ಅತ್ಯುತ್ತಮ ಎನಿಸಿಕೊಂಡಿತ್ತು. ಇದರಿಂದ ಶಾಲೆಗೆ 2.75 ಲಕ್ಷ ರೂ ನಗದು ಬಹುಮಾನ ಒಲಿದುಬಂದಿದೆ. ಈ ಹಣವನ್ನು ಬಳಕೆ ಮಾಡಿಕೊಂಡು ಡಿಜಿಟಲ್ ಗ್ರಂಥಾಲಯ ತೆರೆಯುವ ಯೋಜನೆ ರೂಪಿಸಲಾಗಿದೆ.

1994ರಲ್ಲಿ ಪ್ರಾರಂಭವಾದ ಈ ಶಾಲೆ ಸಾಕಷ್ಟು ಪೈಪೋಟಿಯನ್ನು ಖಾಸಗಿ ಸಂಸ್ಥೆಗಳಿಗೆ ನೀಡಿದೆ. ಪ್ರತಿ ವರ್ಷವೂ ಹಾಜರಾತಿ ಹೆಚ್ಚಿಸಿಕೊಳ್ಳುವ ಮೂಲಕ ಈಗ ಸದೃಢವಾಗಿದೆ. 2022-21ನೇ ಸಾಲಿಗೆ ಬರುವ ಹೊತ್ತಿಗೆ 58ಕ್ಕೆ ಬಂದಿತು. 2021-22ರಲ್ಲಿ 70, 2022-23ರಲ್ಲಿ 80, 2023-24ರಲ್ಲಿ 105 ಹಾಗೂ 2024-25ರಲ್ಲಿ 106 ಮಕ್ಕಳು ದಾಖಲಾತಿ ಪಡೆದುಕೊಂಡಿದ್ದಾರೆ. ಈ ಪೈಕಿ 53 ಹೆಣ್ಣು ಹಾಗೂ 53 ಗಂಡು ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಮೊದಲಿಗೆ ಸಾಮಾನ್ಯ ಶಾಲೆಯಂತೆಯೇ ಗುರುತಿಸಿಕೊಂಡಿದ್ದ ಉಮ್ಮಡಹಳ್ಳಿ ಹೈಸ್ಕೂಲ್ ವರ್ಷ ಕಳೆದಂತೆ ಹೊಸತನದತ್ತ ಹೆಜ್ಜೆ ಹಾಕಲಾರಂಭಿಸಿತು. ಅದರಲ್ಲಿಯೂ ಬಿಆರ್‌ಸಿಯಾಗಿದ್ದ ನಾಗರಾಜು ಶಾಲೆಗೆ ಮುಖ್ಯಶಿಕ್ಷಕರಾದ ಬಳಿಕ ಹಲವು ಮಹತ್ತರ ಬದಲಾವಣೆ ಕಂಡಿತು. ದಾಖಲಾತಿ ಹೆಚ್ಚಳದಿಂದ ಹಿಡಿದು ಮಕ್ಕಳಿಗೆ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಸಹಶಿಕ್ಷಕರೊಂದಿಗೆ ಸೇರಿ ಶ್ರಮ ವಹಿಸಿದ್ದಾರೆ. ದಾನಿಗಳ ಆರ್ಥಿಕ ಸಹಾಯದಿಂದ ಮಿನಿ ಬಸ್ ಖರೀದಿಸಿ ಅಕ್ಕಪಕ್ಕದ ಗ್ರಾಮದಿಂದ ಸುಮಾರು 30ಕ್ಕೂ ಹೆಚ್ಚು ಮಕ್ಕಳನ್ನು ಶಾಲೆಗೆ ಕರೆದುಕೊಂಡು ಬರಲಾಗುತ್ತಿದೆ.

ಶಾಲೆಯಲ್ಲಿ ಮಕ್ಕಳಿಗೆ ಮಾಮೂಲಿ ಕರಿಹಲಗೆಯ ಪಾಠದ ಜತೆಗೆ ಸ್ಮಾರ್ಟ್ ಕ್ಲಾಸ್ ಕೂಡ ಇದೆ. ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಅನುದಾನವನ್ನು ಬಳಸಿಕೊಂಡು ಲಕ್ಷಾಂತರ ರೂ ಮೌಲ್ಯದ ಸ್ಮಾರ್ಟ್ ಕ್ಲಾಸ್ ಕೊಠಡಿ ನಿರ್ಮಿಸಲಾಗಿದೆ. ಸುಸಜ್ಜಿತವಾದ ಕೊಠಡಿ, ಗುಣಮಟ್ಟದ ಬೆಂಚ್, ಯುಪಿಎಸ್ ಸೇರಿದಂತೆ ಅಗತ್ಯ ಸೌಲಭ್ಯವಿದೆ. ಪ್ರತಿದಿನ ಮೂರು ತರಗತಿಗೂ ಪಾಠ ಮಾಡಲಾಗುತ್ತದೆ. ಮಕ್ಕಳ ಮೇಲೆ ನಿಗಾ ವಹಿಸಲು 16 ಸಿಸಿ ಕ್ಯಾಮೆರಾ ಅಳವಡಿಕೆ ಮಾಡಲಾಗಿದೆ. ಮಕ್ಕಳಿಗೆ ಪಠ್ಯೇತರ ಚಟುವಟಿಕೆಯಾಗಿ ತರಕಾರಿ ಬೆಳೆಸುವುದು, ಉದ್ಯಾನ ನಿರ್ವಹಣೆ ಮಾಡುವುದನ್ನು ಹೇಳಿಕೊಡಲಾಗುತ್ತಿದೆ. ಪರಿಣಾಮ ಶಾಲೆ ಆವರಣ ಹಸಿರುಮಯವಾಗಿದೆ. ಇತ್ತೀಚೆಗೆ ಮೊನಾಲಿ ತರಬೇತಿ ಸಂಸ್ಥೆಯ ವಿದ್ಯಾರ್ಥಿಗಳಾದ ಪ್ರೊಬೇಷನರಿ ಐಎಎಸ್, ಐಪಿಎಸ್‌ಗಳು ಶಾಲೆಗೆ ಭೇಟಿ ನೀಡಿದ್ದರು. ಒಟ್ಟಾರೆ ಪರಿಸರವನ್ನು ಕಂಡು ಮೆಚ್ಚುಗೆ ಮಾತುಗಳನ್ನು ಅಕ್ಷರದ ರೂಪದಲ್ಲಿ ಬರೆದಿದ್ದಾರೆ.

ರಾಜ್ಯ ಪಾನೀಯ ನಿಗಮದಿಂದ ಸಿಎಸ್‌ಆರ್ ಅನುದಾನ ಪಡೆದು ಹೊರಾಂಗಣ ವಿಜ್ಞಾನ ಉದ್ಯಾನ ನಿರ್ಮಿಸಲಾಗಿದೆ. ಇದರಿಂದ ಮಕ್ಕಳ ಕಲಿಕೆಗೆ ಸಹಕಾರಿಯಾಗಲಿದೆ. ಮುಂದಿನ ದಿನದಲ್ಲಿ ಬೇರೆ ಶಾಲೆಯ ವಿದ್ಯಾರ್ಥಿಗಳನ್ನು ಉಮ್ಮಡಹಳ್ಳಿ ಪ್ರೌಢಶಾಲೆಗೆ ಕರೆದುಕೊಂಡು ಹೋಗಿ ವಿಜ್ಞಾನ ಉದ್ಯಾನದ ಅನುಕೂಲ ಪಡೆಯುವಂತೆ ಮಾಡಲಾಗುವುದು. ಶೇಖ್ ತನ್ವೀರ್ ಆಸಿಫ್ ಜಿಪಂ ಸಿಇಒ ನಮ್ಮ ಶಾಲೆಯಲ್ಲಿ ಹೊರಾಂಗಣ ವಿಜ್ಞಾನ ಉದ್ಯಾನ ಸ್ಥಾಪನೆ ಮಾಡುವುದರಲ್ಲಿ ಜಿಪಂ ಸಿಇಒ ಶೇಖ್ ತನ್ವೀರ್ ಆಸಿಫ್ ಅವರ ಪಾತ್ರ ಮುಖ್ಯವಾಗಿದೆ. ಅವರ ಕಾಳಜಿಯಿಂದ ಸುಸಜ್ಜಿತವಾದ ಪಾರ್ಕ್ ನಿರ್ಮಾಣವಾಗಿದೆ. ಇದರಿಂದ ಮಕ್ಕಳಲ್ಲಿ ವಿಜ್ಞಾನದ ಬಗ್ಗೆ ಆಸಕ್ತಿ ಬೆಳೆಸಲು ಅನುಕೂಲವಾಗಿದೆ. ನಾಗರಾಜು ಮುಖ್ಯಶಿಕ್ಷಕ