ವಿಜಯವಾಣಿ ಸುದ್ದಿಜಾಲ ಹೊಸಕೋಟೆ
ಮಕ್ಕಳಲ್ಲಿರುವ ಪ್ರತಿಭೆ ಅನಾವರಣಕ್ಕೆ ಕಲಿಕೋಪಕರಣಗಳ ಮೇಳ ಸಹಕಾರಿಯಾಗಿದೆ ಎಂದು ದೇವಲಾಪುರ ಜೂನಿಯರ್ ಕಾಲೇಜಿನ ಪ್ರಾಂಶುಪಾಲೆ ತ್ರಿವೇಣಿ ಹೇಳಿದರು.
ತಾಲೂಕಿನ ಅನುಗೊಂಡನಹಳ್ಳಿ ಹೋಬಳಿಯ ದೇವಲಾಪುರ ಪ್ರೌಢಶಾಲೆ ಆವರಣದಲ್ಲಿ ಅಗ್ಸೊಥಬಲ್ ಕಂಪನಿ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಗಣಿತ, ವಿಜ್ಞಾನ ವಸ್ತು ಪ್ರದರ್ಶನ ಮೇಳಕ್ಕೆ ಚಾಲನೆ ನೀಡಿ ಮಾತನಾಡಿ, ಅಗ್ಸೊಥಬಲ್ ಕಂಪನಿಯು ಶಾಲೆಯನ್ನು ದತ್ತು ಪಡೆಯುವ ಮೂಲಕ ವಿಜ್ಞಾನಕ್ಕೆ ಸಂಬಂಧಿಸಿದಂತೆ ಪ್ರೋತ್ಸಾಹ ನೀಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಹಾಗೂ ಹೆಣ್ಣು ಮಕ್ಕಳಿಗೆ ಶಿಕ್ಷಣ ಕೊಡುವ ದೂರದೃಷ್ಟಿ ಯೋಜನೆ ರೂಪಿಸಿದೆ ಎಂದರು.
ಪ್ರೌಢಶಾಲೆ ಮುಖ್ಯಶಿಕ್ಷಕಿ ಸಂಧ್ಯಾ ಮಾತನಾಡಿ, ಅಗ್ಸೊಥಬಲ್ ಕಂಪನಿ ಶೈಕ್ಷಣಿಕವಾಗಿ ಶಾಲೆಗೆ ಅಗತ್ಯವಿರುವ ಕಲಿಕೋಪಕರಣಗಳು, ವಿಜ್ಞಾನ ಪ್ರಯೋಗಾಲಯ ಸೌಲಭ್ಯ ಕಲ್ಪಿಸಿದೆ. ಮಕ್ಕಳಲ್ಲಿ ಅಡಗಿರುವ ಪ್ರತಿಭೆ ಅನಾವರಣಕ್ಕೆ ವಿಜ್ಞಾನ ಮೇಳಗಳು ಸಹಕಾರಿಯಾಗಿದ್ದು ವಿದ್ಯಾರ್ಥಿಗಳು ಸ್ವಯಂ ಪ್ರೇರಿತವಾಗಿ ಪಾಲ್ಗೊಂಡು ಬಹುಮಾನ ಪಡೆದುಕೊಂಡಿದ್ದಾರೆ ಎಂದರು.
ಅಪ್ಸಾ ಸಂಸ್ಥೆಯ ಸಂಯೋಜಕ ದೇವರಾಜ್ ಮಾತನಾಡಿ, ಶಿಕ್ಷಣ ಕ್ಷೇತ್ರಕ್ಕೆ ಸಂಸ್ಥೆಯ ಮತ್ತು ಅಗ್ಸೊಥಬಲ್ ಕಂಪನಿಯ ಆಶ್ರಯದಲ್ಲಿ ಪ್ರೊತ್ಸಾಹ ನೀಡುವ ನಿಟ್ಟಿನಲ್ಲಿ ಕಾರ್ಯಕ್ರಮ ಆಯೋಜಿಸಿದ್ದೇವೆ. ಈ ಮೂಲಕ ಮಕ್ಕಳಲ್ಲಿರುವ ಪ್ರತಿಭೆಗೆ ವೇದಿಕೆ ಕಲ್ಪಿಸಿ ಅವರಿಗೆ ಸೂಕ್ತ ಬಹುಮಾನ ಸಹ ನೀಡಲಾಗಿದೆ ಎಂದರು.
ಶಾಲಾಭಿವೃದ್ಧಿ ಸಮಿತಿ ಸದಸ್ಯ ಪ್ರಕಾಶ್, ಗ್ರಾಪಂ.ಸದಸ್ಯ ಮಾರೇಗೌಡ, ತುಳಸಿಬಾಯಿ, ಸಿಬ್ಬಂದಿ ಇದ್ದರು.