ಉಡುಪಿ ಅಜ್ಜರಕಾಡಿನ ಡಾ. ಜಿ ಶಂಕರ್​ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ವಿಜ್ಞಾನ ವಸ್ತು ಪ್ರದರ್ಶನವನ್ನು ಡಾ.ಪಿ.ಕೆ. ರಾಜಗೋಪಾಲ್​ ಉದ್ಘಾಟಿಸಿದರು. ಪ್ರೊ.ಭಾಸ್ಕರ ಶೆಟ್ಟಿ ಎಸ್​., ಪ್ರೊ. ಕೆ.ಶ್ರೀಧರಪ್ರಸಾದ್​, ಶ್ರೀಮತಿ ಅಡಿಗ, ಡಾ. ವಾಣಿ ಆರ್​. ಬಲ್ಲಾಳ್​, ಡಾ. ಮಣಿಭೂಷಣ್​ ಡಿಸೋಜಾ, ಉದಯರಾಜ್​ ಎಸ್​., ಕೇಶವಮೂರ್ತಿ ಎಂ.ವಿ. ಇದ್ದರು. 
ಜಿಲ್ಲೆ

ಸಣ್ಣ ಸಣ್ಣ ಕುತೂಹಲಗಳೇ ಸಂಶೋಧನೆಗಳಿಗೆ ದಾರಿ

ಡಾ. ಪಿ.ಕೆ. ರಾಜಗೋಪಾಲ್​ ಅಭಿಪ್ರಾಯ | ವಿಜ್ಞಾನ ವಸ್ತು ಪ್ರದರ್ಶನ ಉದ್ಘಾಟನೆ

ವಿಜಯವಾಣಿ ಸುದ್ದಿಜಾಲ ಉಡುಪಿ
ಶಾಲಾ-ಕಾಲೇಜುಗಳಲ್ಲಿ ನಡೆಯುವ ವಸ್ತು ಪ್ರದರ್ಶನದಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿರುವ ಸುಪ್ತ ಪ್ರತಿಭೆ ಎಚ್ಚರಿಸಿ ಅವರಲ್ಲಿ ಕುತೂಹಲ ಸೃಷ್ಟಿಸುತ್ತವೆ. ವರ್ತಮಾನದ ಸಣ್ಣ ಸಣ್ಣ ಕುತೂಹಲಗಳೇ ಭವಿಷ್ಯದಲ್ಲಿ ದೊಡ್ಡ ಸಾಧನೆ ಮಾಡುವಂತೆ ವಿದ್ಯಾರ್ಥಿಗಳನ್ನು ಪ್ರೇರೇಪಿಸುತ್ತದೆ ಎಂದು ನಿವೃತ್ತ ಸಸ್ಯಶಾಸ್ತ್ರಜ್ಞ ಡಾ. ಪಿ.ಕೆ. ರಾಜಗೋಪಾಲ್​ ಅಭಿಪ್ರಾಯಪಟ್ಟರು.

ಉಡುಪಿ ಅಜ್ಜರಕಾಡಿನ ಡಾ. ಜಿ ಶಂಕರ್​ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ವಿಜ್ಞಾನ ಸಂಘದ ಸಹಯೋಗದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಎಕ್ಸ್​ಪ್ಲೋರ್​ ವಿಥ್​ ಯು-2024 ಎಂಬ ವಾರ್ಷಿಕ ವಿಜ್ಞಾನ ವಸ್ತು ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.

ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕು

ಕಾಲೇಜಿನ ಪ್ರಾಂಶುಪಾಲ ಪ್ರೊ. ಭಾಸ್ಕರ ಶೆಟ್ಟಿ ಎಸ್​. ಮಾತನಾಡಿ, ವಿದ್ಯಾರ್ಥಿಗಳು ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಪ್ರಶ್ನೆಯೇ ವಿಜ್ಞಾನದ ಮೂಲಾಧಾರ. ಕಾಲೇಜಿನಲ್ಲಿ ನೀಡಿದ ಸೌಲಭ್ಯ ಸಂಪೂರ್ಣ ಬಳಸಿಕೊಂಡು ಭವಿಷ್ಯ ಉಜ್ವಲ ಮಾಡಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥೆ ಪ್ರೊ. ಶ್ರೀಮತಿ ಅಡಿಗ, ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ ಡಾ. ವಾಣಿ ಆರ್​. ಬಲ್ಲಾಳ್​, ಗಣಕಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಮಣಿಭೂಷಣ್​ ಡಿಸೋಜಾ, ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಉದಯರಾಜ್​ ಎಸ್​., ವಿಜ್ಞಾನ ಸಂಘದ ಸಂಚಾಲಕ ಕೇಶವಮೂರ್ತಿ ಎಂ.ವಿ. ಉಪಸ್ಥಿತರಿದ್ದರು.

ಶ್ರೇಯಾ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ವಿಜ್ಞಾನ ನಿಕಾಯದ ಡೀನ್​ ಪ್ರೊ. ಕೆ.ಶ್ರೀಧರಪ್ರಸಾದ್​ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ದಿಶಾ ಹಾಗೂ ನಾಗರತ್ನಾ ಕಾರ್ಯಕ್ರಮ ನಿರೂಪಿಸಿದರು.

ಸಭಾ ಕಾರ್ಯಕ್ರಮದ ನಂತರ ವಿಜ್ಞಾನದ ಎಲ್ಲ ವಿಭಾಗಗಳಲ್ಲಿ ವಸ್ತು ಪ್ರದರ್ಶನ ಏರ್ಪಡಿಸಲಾಗಿತ್ತು. ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ವಿಜೇತ ವಿದ್ಯಾರ್ಥಿನಿಯರಿಗೆ ಬಹುಮಾನ ವಿತರಿಸಲಾಯಿತು. ಒಟ್ಟು 53 ವಿವಿಧ ವಿಜ್ಞಾನ ಮಾದರಿಗಳು ಪ್ರದರ್ಶನಗೊಂಡವು.