ಜಿಲ್ಲೆ

ಭಾರತ ವಿಕಸಿತ ರಾಷ್ಟ್ರವಾಗಲು ವಿಜ್ಞಾನ ಮತ್ತು ತಂತ್ರಜ್ಞಾನ ಸಹಕಾರಿ

ಅವಿನಾಶ್ ಜೈನಹಳ್ಳಿ

ಮೈಸೂರು: ಭಾರತ ವಿಕಸಿತ ರಾಷ್ಟ್ರವಾಗಲು ವಿಜ್ಞಾನ ಮತ್ತು ತಂತ್ರಜ್ಞಾನ ಸಹಕಾರಿಯಾಗಿವೆ ಎಂದು ಇಸ್ರೋ ಸಂಸ್ಥೆಯ ವಿಶ್ರಾಂತ, ಬಾಹ್ಯಾಕಾಶ ಆಯೋಗದ ಸದಸ್ಯ ಅಧ್ಯಕ್ಷ ಎ.ಎಸ್. ಕಿರಣ್ ಕುಮಾರ್ ಹೇಳಿದರು.

ಊಟಿ ರಸ್ತೆಯ ಜೆಎಸ್‌ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ಬುಧವಾರ ಆಯೋಜಿಸಿದ್ದ 16 ನೇ ಪದವೀಧರರ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.

2047ಕ್ಕೆ ಭಾರತವು ಸಂಪೂರ್ಣ ವಿಕಸಿತ ರಾಷ್ಟ್ರವಾಗಲು ವಿಜ್ಞಾನ ಮತ್ತು ತಂತ್ರಜ್ಞಾನ ಹಲವು ಬಗೆಗಳಲ್ಲಿ ಸಹಕಾರಿಯಾಗಿದೆ. ಇದಕ್ಕೆ ಸಾಕ್ಷಿ ಎಂಬಂತೆ ಚಂದ್ರಯಾನದ ಯಶಸ್ಸು ಇಡೀ ಜಗತ್ತೆ ಭಾರತದ ಕಡೆ ನಿಬ್ಬೆರಗಾಗಿ ನೋಡುವಂತೆ ಮಾಡಿದೆ ಎಂದರು.

ವಿಜ್ಞಾನ ಮತ್ತು ತಂತ್ರಜ್ಞಾನದಿಂದ ಇಸ್ರೋ ಹಲವು ಸಮಾಜಮುಖಿ ಕಾರ್ಯಗಳನ್ನು ಸಾಧಿಸಿದೆ. ಈ ಸಾಧನೆಗಳು ಒಂದೊಂದು ಮೈಲಿಗಲ್ಲಾಗಿ ನಿಂತಿವೆ. ಇಂದು ಅತಿ ಉನ್ನತವಾದ ತಂತ್ರಜ್ಞಾನದಿಂದ ಮಾನವ ಜೀವನದ ಸಾಧನೆಯ ಮುಖಗಳು ವಿಸ್ತರಿಸಿವೆ. ಎಲ್ಲ ವಿಜ್ಞಾನ ಮತ್ತು ತಂತ್ರಜ್ಞಾನಗಳ ಆವಿಷ್ಕಾರಗಳ ಮೂಲ ಕಲ್ಪನೆ ಪ್ರಕೃತಿಯೇ ಆಗಿದೆ. ಇದನ್ನು ಮನಗಂಡು ಪ್ರಕೃತಿಯನ್ನು ಗೌರವಿಸುತ್ತಾ ಅದನ್ನು ಕಾಪಾಡಿಕೊಂಡು ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಬೆಳೆಸಬೇಕು ಎಂದರು.

ವಿದ್ಯಾರ್ಥಿಗಳಿಗೆ ಪದವೀಧರರ ದಿನಾಚರಣೆ ಬಹುಮುಖ್ಯವಾದ ದಿನ. ಹಿಂದಿನ ನಿಮ್ಮ ಗುರಿ ಕನಸುಗಳು ಸಾಕಾರಗೊಂಡು ಮುಂದಿನ ಜೀವನದ ಗುರಿ ಮತ್ತು ಕನಸುಗಳನ್ನು ಕಾಣುವ ಕ್ಷಣವಿದು. ಈ ಗುರಿ ಸಾಧನೆಯ ಹಿಂದೆ ಇರುವ ತಂದೆ ತಾಯಿ ಮತ್ತು ಗುರು ಹಿರಿಯರನ್ನು ಸ್ಮರಿಸಬೇಕು. ಪರಂಪರಾಗತ ಮೌಲ್ಯಗಳನ್ನು ಮರೆಯದೆ ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿ ಎಂದು ಸಲಹೆ ನೀಡಿದರು.

ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ. ಬೆಟಸೂರಮಠ ಅವರು ನೂತನ ಪದವೀಧರರಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾಲೇಜು ಶಿಕ್ಷಣ ವಿಭಾಗದ ನಿರ್ದೇಶಕ ಪ್ರೊ.ಆರ್.ಮೂಗೇಶಪ್ಪ, ಕಾಲೇಜಿನ ಮುಖ್ಯ ಕಾರ್ಯನಿರ್ವಾಹಕ ಪ್ರೊ.ಬಿ.ವಿ.ಸಾಂಬಶಿವಯ್ಯ, ಪ್ರಾಂಶುಪಾಲ ಡಾ.ಎಂ.ಪ್ರಭು, ಕಾಲೇಜಿನ ಪರೀಕ್ಷಾ ನಿಯಂತ್ರಣಾಧಿಕಾರಿ ಡಾ. ಬಿ. ಪ್ರಭುಸ್ವಾಮಿ ಇತರರಿದ್ದರು.

2020-23ನೇ ಸಾಲಿನಲ್ಲಿ ಉತ್ತೀರ್ಣರಾದ ಸ್ನಾತಕ ವಿಭಾಗದ 383 ಯುವಕರು ಮತ್ತು 188 ಯುವತಿಯರು ಸೇರಿದಂತೆ ಒಟ್ಟು 571 ವಿದ್ಯಾರ್ಥಿಗಳು ಹಾಗೂ ಸ್ನಾತಕೋತ್ತರ ವಿಭಾಗದ 190 ಯುವಕರು ಮತ್ತು 358 ಯುವತಿಯರು ಒಳಗೊಂಡಂತೆ 548 ವಿದ್ಯಾರ್ಥಿಗಳು ಹೀಗೆ ಒಟ್ಟು 1119 ಪದವೀಧರರು ಈ ಸಮಾರಂಭದಲ್ಲಿ ಭಾಗವಹಿಸಿದ್ದರು. ಸದರಿ ಕಾರ್ಯಕ್ರಮದಲ್ಲಿ ವಿವಿಧ ಕೋರ್ಸುಗಳಲ್ಲಿ ಉನ್ನತಸ್ಥಾನ ಪಡೆದಿರುವ 67 ಪದವೀಧರರನ್ನು ಪುರಸ್ಕರಿಸಲಾಯಿತು.