ಜಿಲ್ಲೆ

ಕೂಡ್ಲೂರು ಸರ್ಕಾರಿ ಪ್ರೌಢಶಾಲೆಯಲ್ಲಿ ವಿಜ್ಞಾನ ದಿನಾಚರಣೆ

ಸುನಿಲ್ ಪೊನ್ನೇಟಿ

ಕುಶಾಲನಗರ:

ಕುಶಾಲನಗರ ತಾಲೂಕು ಕೂಡಿಗೆ ಕ್ಲಸ್ಟರ್ ವ್ಯಾಪ್ತಿಯ ಕೂಡುಮಂಗಳೂರು (ಕೂಡ್ಲೂರು) ಸರ್ಕಾರಿ ಪ್ರೌಢಶಾಲೆಯಲ್ಲಿ ವಿಜ್ಞಾನ ಸಂಘದ ವತಿಯಿಂದ ಶುಕ್ರವಾರ ರಾಷ್ಟ್ರೀಯ ವಿಜ್ಞಾನ ದಿನಾಚರಣೆ-2025 ಮತ್ತು ವಿಜ್ಞಾನ ಹಬ್ಬ ಆಚರಿಸಲಾಯಿತು. ಈ ವೇಳೆ ಮಾತನಾಡಿದ ಶಾಲಾ ಮುಖ್ಯ ಶಿಕ್ಷಕ ಟಿ.ಜಿ.ಪ್ರೇಮಕುಮಾರ್ ವಿಜ್ಞಾನ ಎಲ್ಲರಿಗೂ ಅಗತ್ಯವಾಗಿದೆ. ಭಾರತವು ವಿಶ್ವಮಟ್ಟದಲ್ಲಿ ವಿಜ್ಞಾನದ ಪ್ರಗತಿಗೆ ತನ್ನದೇ ಆದ ವಿಶೇಷ ಕೊಡುಗೆ ನೀಡುತ್ತಾ ಬಂದಿದೆ. ದೇಶೀಯ ವಿಜ್ಞಾನ ಮತ್ತು ತಂತ್ರಜ್ಞಾನ ಬಳಕೆ ಮಾಡುವ ಮೂಲಕ ಭಾರತವು ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದೆ ಎಂದರು.

ರಾಷ್ಟ್ರೀಯ ವಿಜ್ಞಾನ ದಿನದ ಅಂಗವಾಗಿ ಏರ್ಪಡಿಸಿದ್ದ ವಿಜ್ಞಾನ ಮಾದರಿಗಳ ಕುರಿತು ಮಾಹಿತಿ ನೀಡಿದ ವಿಜ್ಞಾನ ಸಂಘದ ಉಸ್ತುವಾರಿ ಶಿಕ್ಷಕಿ ಬಿ.ಡಿ. ರಮ್ಯಾ ಸರ್ ಸಿ.ವಿ. ರಾಮನ್ ಅವರ ರಾಮನ್ ಪರಿಣಾಮಗಳು ( ರಾಮನ್ ಎಫೆಕ್ಟ್ ) ವೈಜ್ಞಾನಿಕ ಸಂಶೋಧನೆ ಕುರಿತು ವಿವರಿಸಿದರು. ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಸಂಘಟನಾ ಕಾರ್ಯದರ್ಶಿ ಎಂ.ಟಿ. ದಯಾನಂದ ಪ್ರಕಾಶ್ ಮಾತನಾಡಿ, ವಿದ್ಯಾರ್ಥಿಗಳು ವಿಜ್ಞಾನ ಕಲಿಕೆಯಲ್ಲಿ ಹೆಚ್ಚಿನ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದರು.

ಎನ್.ಎಸ್.ಎಸ್. ಕಾರ್ಯಕ್ರಮ ಅಧಿಕಾರಿ ಕೆ.ಟಿ.ಸೌಮ್ಯ ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ನಳಿನಿ ಇದ್ದರು.

ವಿಜ್ಞಾನ ದಿನಾಚರಣೆ ಮತ್ತು ವಿಜ್ಞಾನ ವಸ್ತುಗಳ ಮಾದರಿ ಪ್ರದರ್ಶನದ ಕಾರ್ಯಕ್ರಮದಲ್ಲಿ ಸ್ಥಳೀಯ ಕೂಡ್ಲೂರು ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ವಿದ್ಯಾರ್ಥಿಗಳು ಪ್ರದರ್ಶಿಸಿದ ವಿವಿಧ ವಿಜ್ಞಾನ ಮಾದರಿಗಳ ಪ್ರದರ್ಶನ

ಗಮನ ಸೆಳೆಯಿತು.