ಚನ್ನರಾಯಪಟ್ಟಣ : ಶಾಲೆಗಳಲ್ಲಿ ಶಿಕ್ಷಣಕ್ಕೆ ನೀಡುವಷ್ಟೇ ಮಹತ್ವವನ್ನು ಕ್ರೀಡೆಗಳಿಗೂ ನೀಡುವುದರಿಂದ ವಿದ್ಯಾರ್ಥಿಗಳು ಇನ್ನಷ್ಟು ಆಸಕ್ತಿಯಿಂದ ಶಿಕ್ಷಣದಲ್ಲಿ ತೊಡಗಲು ಸಾಧ್ಯ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಹೇಳಿದರು.
ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಶಾಲಾ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಾಗೂ ತಾಲೂಕು ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಸಹಯೋಗದಲ್ಲಿ ಬುಧವಾರ ಆಯೋಜಿಸಲಾಗಿದ್ದ 2023-24 ನೇ ಸಾಲಿನ ತಾಲೂಕು ಮಟ್ಟದ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು, ಮಕ್ಕಳ ಕ್ರೀಡಾಪ್ರತಿಭೆ ಗುರುತಿಸಲು ಹಾಗೂ ಸರ್ವಾಂಗೀಣ ಅಭಿವೃದ್ಧಿಗೆ ಕ್ರೀಡಾಕೂಟ ಸಹಕಾರಿಯಾಗಲಿದೆ. ಕ್ರೀಡೆಯಿಂದ ತಾಳ್ಮೆ ಹಾಗೂ ಏಕಾಗ್ರತೆ ಮುಖ್ಯ. ಕ್ರೀಡೆಗಳಿಂದ ಬಾಂಧವ್ಯ ಬೆಸುಗೆ ಜತೆಗೆ ಉಲ್ಲಾಸದ ವಾತಾವರಣ ಲಭಿಸುತ್ತದೆ. ಪಠ್ಯೇತರ ಚಟುವಟಿಕೆಗಳಿಂದ ವಿದ್ಯಾರ್ಥಿಗಳಲ್ಲಿ ಅಡಗಿರುವ ಬಹು ಪ್ರತಿಭೆಯನ್ನು ಹೊರಹೊಮ್ಮಿಸಬಹುದು. ಶಿಕ್ಷಣದ ಜತೆಗೆ ಕ್ರೀಡೆಯನ್ನು ಸಮತೋಲನವಾಗಿ ನೋಡಬೇಕು. ಕ್ರೀಡೆಯಲ್ಲಿ ಸೋಲು, ಗೆಲುವನ್ನು ಸಮಾನವಾಗಿ ಸ್ವೀಕರಿಸಿದಾಗ ನಾವೆಲ್ಲರೂ ಒಂದೇ ಎಂಬ ಮನೋಭಾವ ಮೂಡುತ್ತದೆ ಎಂದು ತಿಳಿಸಿದರು.
ಪ್ಯಾರಿಸ್‌ನಲ್ಲಿ ನಡೆದ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತದ ಅಥ್ಲೀಟ್‌ಗಳು ಐತಿಹಾಸಿಕ ದಾಖಲೆ ಸೃಷ್ಟಿಸಿದ್ದು, ಪ್ರದರ್ಶನದ ವಿಷಯಕ್ಕೆ ಬಂದರೆ ಭಾರತದ ಪ್ಯಾರಾ ಅಥ್ಲೀಟ್‌ಗಳು ತಮ್ಮ ಸಾಮರ್ಥ್ಯ ಜಗತ್ತಿಗೆ ತೋರಿಸಿದ್ದಾರೆ. ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟಗಳಲ್ಲಿ ಭಾರತವು ತನ್ನ ವೈಫಲ್ಯಗಳಿಂದ ಹೆಚ್ಚು ಪದಕಗಳನ್ನು ಗೆಲ್ಲಲು ಸಾಧ್ಯವಾಗಿಲ್ಲ. ಆದರೆ ಈ ಕನಸು ಪ್ಯಾರಾ ಅಥ್ಲೀಟ್‌ಗಳಿಂದ ನನಸಾಗಿದೆ. ಇಡೀ ದೇಶವೇ ಮೆಚ್ಚುವಂತಹ ಸಾಧನೆಯನ್ನು ಭಾರತದ ಪ್ಯಾರಾ ಅಥ್ಲೀಟ್‌ಗಳು ಮಾಡಿದ್ದಾರೆ ಎಂದು ಶ್ಲಾಘಿಸಿದರು.
ಪುರಸಭಾ ಅಧ್ಯಕ್ಷೆ ಕೆ.ಎನ್.ಬನಶಂಕರಿ ರಘು ಧ್ವಜಾರೋಹಣ ನೆರವೇರಿಸಿದರು. ಉಪಾಧ್ಯಕ್ಷೆ ರಾಣಿಕೃಷ್ಣ ಕ್ರೀಡಾ ಜ್ಯೋತಿ ಸ್ವೀಕರಿಸಿದರು. ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಣಾಧಿಕಾರಿ ಮಹದೇವ್, ತಾಲೂಕು ದೈಹಿಕ ಶಿಕ್ಷಣ ಶಿಕ್ಷಣಾಧಿಕಾರಿ ಹಾಗೂ ಕ್ರೀಡಾಕೂಟದ ಕಾರ್ಯದರ್ಶಿ ಕೆ.ಟಿ. ಆನಂದ್, ಕ್ರೀಡಾಕೂಟದ ಅಧ್ಯಕ್ಷ ಬಿ.ಎಚ್.ಆನಂದ್, ಸಂಘಟನಾ ಕಾರ್ಯದರ್ಶಿ ಕೆ.ಎ. ಪ್ರಕಾಶ್, ಖಜಾಂಚಿ ರಂಗೇಗೌಡ, ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎನ್.ದೀಪಾ, ಶಿಕ್ಷಣ ಇಲಾಖೆಯ ಜಲೇಂದ್ರ, ಟಿ.ಮಂಜಪ್ಪ, ಚಿಕ್ಕೇಗೌಡ, ಉಮಾಶಂಕರ್ ವಿ.ಜಿ.ದ್ಯಾವೇಗೌಡ, ಕಾಳೇಗೌಡ, ಶಿವಮೂರ್ತಿ ಸೇರಿದಂತೆ ತಾಲೂಕಿನ ಎಲ್ಲ ದೈಹಿಕ ಶಿಕ್ಷಣ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.