ಕಳಸ: ಕಳಸ ಪ್ರಬೋಧಿನಿ ವಿದ್ಯಾಕೇಂದ್ರದಲ್ಲಿ ಶಾಲೆ ಹೆಣ್ಣುಮಕ್ಕಳಿಗೆ ಸಾಂಪ್ರದಾಯಿಕ ರೀತಿಯಲ್ಲಿ ಬಳೆ ತೊಡಿಸುವ ಕಾರ್ಯಕ್ರಮ ಮಂಗಳವಾರ ನಡೆಯಿತು.
ಮಂಗಳವಾರ ಶಾಲೆಯ ಎಲ್ಲ ಹೆಣ್ಣು ಮಕ್ಕಳಿಗೆ ಕುಂಕುಮ ಇಟ್ಟು ಹಸಿರು ಗಾಜಿನ ಬಳೆ ತೊಡಿಸಲಾಯಿತು. ಶಿಕ್ಷಕಿಯರು ಹಾಗೂ ಪಾಲಕಿಯರಿಗೂ ಸಾಂಪ್ರದಾಯಿಕವಾಗಿ ಬಳೆ ತೊಡಿಸಲಾಯಿತು.
ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನದ ಟ್ರಸ್ಟಿ ರಾಜಲಕ್ಷ್ಮಿ ಬಿ. ಜೋಷಿ ಮಾತನಾಡಿ, ಹೆಣ್ಣು ಬಳೆ, ಕುಂಕುಮ, ಕಾಲ್ಗೆಜ್ಜೆ, ಸರ, ಉದ್ದ ಲಂಗ ತೊಟ್ಟಾಗ ಮಾತ್ರ ದೇವತೆಯಂತೆ ಕಾಣುತ್ತಾಳೆ. ಶಾಲೆಗಳಲ್ಲಿ ಭಾರತೀಯ ಸಂಸ್ಕೃತಿ, ಸಂಸ್ಕಾರ ಕಲಿಸಿ ಕೊಡುವುದರಿಂದ ಮಾತ್ರ ದೇಶದ ಸಂಸ್ಕೃತಿ ಉಳಿಯಲು ಸಾಧ್ಯ. ಮನೆಗೆ ಸೀಮಿತವಾಗಿದ್ದ ಹೆಣ್ಣು ಎಲ್ಲ ರಂಗದಲ್ಲೂ ಮುಂಚೂಣಿಯಲ್ಲಿದ್ದಾಳೆ. ಸಮಾಜ ಮುನ್ನಡೆಸುವ ಮಟ್ಟಕ್ಕೆ ಬಂದಿದ್ದಾಳೆ. ಆದರೆ ದೇಶದ ಸಂಸ್ಕೃತಿಯನ್ನು ಮರೆತು ಪಾಶ್ಚತ್ಯ ಸಂಸ್ಕೃತಿ ಅನುಕರಿಸುತ್ತಿರುವುದು ಬೇಸರ ಉಂಟು ಮಾಡುತ್ತಿದೆ ಎಂದು ಹೇಳಿದರು.
ಕಳಸ ಅನ್ನಪೂರ್ಣೇಶ್ವರಿ ಮಹಿಳಾ ಮಂಡಳಿ ಅಧ್ಯಕ್ಷೆ ಸುಜಯಾ ಸದಾನಂದ ಮಾತನಾಡಿ, ಮಕ್ಕಳಿಗೆ ಮನೆಯಿಂದಲೇ ಸಂಸ್ಕಾರ ಕಲಿಸಿದರೆ ಮಾತ್ರ ಮನೆಯ ಹೊರಗೂ ಸಂಸ್ಕಾರಯುತರಾಗಿ ಇರುತ್ತಾರೆ ಎಂದು ಹೇಳಿದರು.
ಮಾತೃಭಾರತಿ ಸಂಸ್ಥೆ ಅಧ್ಯಕ್ಷೆ ವೀಣಾ ರಾಘವೇಂದ್ರ ಭಟ್, ಶಾಲೆ ಮುಖ್ಯಶಿಕ್ಷಕ ಆನಂದ ಇತರರಿದ್ದರು.