????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????? 
ಜಿಲ್ಲೆ

ಶಿಕ್ಷಕರ ಕೊರತೆ ನೀಗಿಸಲು ಆಗ್ರಹ

ಜಗಳೂರು: ತಾಲೂಕಿನ ಅಣಬೂರು ಗ್ರಾಮದ ಮಾರುತಿ ಗ್ರಾಮಾಂತರ ಪ್ರೌಢಶಾಲೆಯಲ್ಲಿ ಶಿಕ್ಷಕರ ಮತ್ತು ಬೋಧಕೇತರ ಸಿಬ್ಬಂದಿ ಕೊರತೆ ನೀಗಿಸುವಂತೆ ಮನವಿ ಮಾಡಿದರೂ ನಿರ್ಲಕ್ಷ್ಯ ತೋರಿದ ಆಡಳಿತ ಮಂಡಳಿ ಕಾರ್ಯದರ್ಶಿ ಮನೆ ಎದುರು ಗುರುವಾರ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ಧರಣಿ ನಡೆಸಿದರು.

ತರಗತಿಗಳನ್ನು ಬಹಿಷ್ಕರಿಸಿದ ವಿದ್ಯಾರ್ಥಿಗಳು ಗ್ರಾಮಸ್ಥರೊಂದಿಗೆ ಅಡುಗೆ ಸಾಮಗ್ರಿ, ಹಾಸಿಗೆ, ಹೊದಿಕೆ ಹಾಗೂ ಪಠ್ಯಪುಸ್ತಕ ಜತೆಯಲ್ಲಿ ತೆರಳಿ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

ಜೂನ್ ತಿಂಗಳಿಂದಲೂ ತರಗತಿಗಳು ನಡೆಯುತ್ತಿಲ್ಲ. ಶಾಲಾ ಆಡಳಿತ ಮಂಡಳಿಗೆ ವಿದ್ಯಾರ್ಥಿಗಳ ಬಗ್ಗೆ ಕಾಳಜಿ ಇಲ್ಲ. ಇವರ ನಿರ್ಲಕ್ಷ್ಯ ಧೋರಣೆ ಮಕ್ಕಳ ಕಲಿಕೆಗೆ ಅಡ್ಡಿಯಾಗುತ್ತಿದೆ ಎಂದು ಗ್ರಾಮಸ್ಥರು ದೂರಿದರು.

ಕಳೆದ ಐದು ವರ್ಷಗಳಿಂದಲೂ ಕನ್ನಡ ಭಾಷೆ ಶಿಕ್ಷಕರು ಗುಣಮಟ್ಟದ ಶಿಕ್ಷಣ ನೀಡುವ ಜತೆಗೆ ಮಕ್ಕಳ ಬಗ್ಗೆ ಕಾಳಜಿವಹಿಸುತ್ತಾರೆ. ಇದರಿಂದ ಪ್ರತಿ ವರ್ಷ ಉತ್ತಮ ಫಲಿತಾಂಶ ಶಾಲೆಗೆ ಬರುತ್ತಿದೆ. ಆದರೆ ಕಾರ್ಯದರ್ಶಿ ಮನೋಹರ್ ರೆಡ್ಡಿ ಶಾಲೆಯಲ್ಲಿರುವ ಶಿಕ್ಷಕರ ಸಮಸ್ಯೆ ನೀಗಿಸುವ ಬಗ್ಗೆ ಚಿಂತಿಸದೆ ತಮಗೆ ಬೇಕಾದವರನ್ನು ಹಣ ಪಡೆದು ನೇಮಕ ಮಾಡಿಕೊಳ್ಳಲು ಹೊರಟಿದ್ದಾರೆ ಎಂದು ಪಾಲಕರು ಆರೋಪಿಸಿದರು.

ಈ ವೇಳೆ ಎಸ್​ಡಿಎಂಸಿ ಸದಸ್ಯ ವೆಂಕಟೇಶ್ ಮಾತನಾಡಿ, ಶಾಲೆಯಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಹಾಗಾಗಿ ಶಾಸಕ ದೇವೇಂದ್ರಪ್ಪ ಸಮ್ಮುಖದಲ್ಲಿ ಸಭೆ ನಡೆಸಿ ಶಿಕ್ಷಕರ ಕೊರತೆ ನೀಗಿಸುವಂತೆ ಮನವಿ ಮಾಡಿದ್ದೇವೆ. ಡಿಡಿಪಿಐ, ಬಿಇಒಗೆ ಶಿಕ್ಷಕರ ಕೊರತೆ ಬಗ್ಗೆ ತಿಳಿಸಿದ್ದೇವೆ. ಆದರೆ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದರು.

ಬಿಇಇ ಹಾಲಮೂರ್ತಿ, ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ರಂಗನಾಥ್, ನಿವೃತ್ತ ಸಮಾಜ ಕಲ್ಯಾಣಾಧಿಕಾರಿ ಬಿ. ಮಹೇಶ್ವರಪ್ಪ, ಹೋರಾಟಗಾರ ಮಹಾಲಿಂಗಪ್ಪ, ಕಾಂತರಾಜ್, ಪಾಲಕರಾದ ಗುಡ್ಡಪ್ಪ, ಎನ್.ಎಂ. ಬಸವರಾಜ್, ಪಾಲಣ್ಣ, ಶರಣಪ್ಪ, ಚಂದ್ರಪ್ಪ ಸೇರಿ ನೂರಾರು ಜನರು, ವಿದ್ಯಾರ್ಥಿಗಳು ಹಾಜರಿದ್ದರು.

ಶಾಲಾ ಮಕ್ಕಳ ಬೆಂಬಲಕ್ಕೆ ನಿಂತ ಶಾಸಕರು: ಕಳೆದೊಂದು ವಾರದಿಂದ ಶಾಲೆಯ ಸಮಸ್ಯೆ ಬಗ್ಗೆ ಮಾಹಿತಿ ಪಡೆದುಕೊಂಡಿದ್ದ ಶಾಸಕ ಬಿ. ದೇವೇಂದ್ರಪ್ಪ ಗ್ರಾಮಸ್ಥರ ಒತ್ತಾಯದ ಮೇರೆಗೆ ಅಣಬೂರು ಮಾರುತಿ ಗ್ರಾಮಾಂತರ ಶಾಲೆಗೆ ಭೇಟಿ ಪರಿಶೀಲಿಸಿದ್ದರು. ಕಾರ್ಯದರ್ಶಿ ನಿವಾಸಕ್ಕೆ ಮುತ್ತಿಗೆ ಹಾಕಿದ ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಶಾಸಕರು, ವಿದ್ಯಾರ್ಥಿಗಳು ಮನೆ ಮುಂಭಾಗದಲ್ಲಿ ಬಂದು ಪ್ರತಿಭಟನೆ ಮಾಡುವ ಸ್ಥಿತಿಗೆ ತಂದಿಟ್ಟಿದ್ದಿರಲ್ಲಾ ನಿಮಗೆ ನಾಚಿಕೆಯಾಗಬೇಕು ಎಂದು ಕಾರ್ಯದರ್ಶಿಯನ್ನು ತರಾಟೆಗೆ ತೆಗೆದುಕೊಂಡರು. ನಾಳೆಯಿಂದ ಶಾಲೆ ಆರಂಭವಾಗಬೇಕು. ಕೂಡಲೇ ಅತಿಥಿ ಶಿಕ್ಷಕರನ್ನು ನೇಮಿಸಿ ಎಂದು ಬಿಇಒಗೆ ಸೂಚನೆ ನೀಡಿದರು.