ಜಿಲ್ಲೆ

ಕುಣಿಗಲ್‌ನಲ್ಲಿ ಶಾಲಾ ಬಸ್ ಹರಿದು ಬಾಲಕ ಸಾವು

ಜಗನ್ನಾಥ್ ಕಾಳೇನಹಳ್ಳಿ

ಕುಣಿಗಲ್: ಶಾಲಾ ಬಸ್‌ನಿಂದ ಕೆಳಕ್ಕೆ ಬಿದ್ದ ಮೂರನೇ ತರಗತಿ ಬಾಲಕನ ತಲೆ ಮೇಲೆ ಬಸ್ ಹರಿದು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತಾಲೂಕಿನ ಹೇರೂರು ಬಳಿ ಸೋಮವಾರ ಸಂಜೆ ನಡೆದಿದೆ.

ತಾಲೂಕಿನ ಕಟ್ಟಿಗೇಹಳ್ಳಿ ಗ್ರಾಮದ ರಾಮಕೃಷ್ಣ ಮತ್ತು ನೇತ್ರಾವತಿ ದಂಪತಿ ಪುತ್ರ ಬಿಜಿಎಸ್ ಶಾಲೆಯಲ್ಲಿ 3ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಮೋಹಿತ್ ಅಲಿಯಾಸ್ ಬಾಲಾಜಿ(8) ಮೃತಪಟ್ಟಿರುವ ದುರ್ದೈವಿ ಬಾಲಕ.

ಕಟ್ಟಿಗೇಹಳ್ಳಿ ಗ್ರಾಮದಿಂದ ಪಟ್ಟಣದ ಬಿಜೆಎಸ್ ಶಾಲೆಗೆ ತನ್ನ 5ನೇ ತರಗತಿಯ ಅಕ್ಕ ತನುಶ್ರೀ ಕತೆ ಮೋಹಿತ್ ಶಾಲಾ ಬಸ್‌ನಲ್ಲಿ ಬರುತ್ತಿದ್ದರು. ಇಂದು ಅಕ್ಕ ಶಾಲೆಗೆ ರಜೆ ಹಾಕಿದ್ದಾಳೆ. ಆದರೆ ಮೋಹಿತ್ ಮಾತ್ರ ಶಾಲೆಗೆ ಬಂದಿದ್ದು, ಎಂದಿನಂತೆ ಸಂಜೆ ಶಾಲೆ ಮುಗಿದ ಬಳಿಕ ಶಾಲಾ ಬಸ್‌ನಲ್ಲಿ ಊರಿಗೆ ತೆರಳುವಾಗ ಹೇರೂರು ಬಳಿ ರಸ್ತೆ ಉಬ್ಬು ಇದ್ದ ಕಾರಣ ಚಾಲಕ ಬ್ರೇಕ್ ಹಾಕಿದಾಗ ಈ ದುರ್ಘಟನೆ ನಡೆದಿದೆ.

ಬಸ್ ಇದ್ದಕಿದ್ದಂತೆ ಬ್ರೇಕ್ ಹಾಕಿದಾಗ ಮುಂದಿನ ನಿಲ್ದಾಣದಲ್ಲಿ ಇಳಿಯುವ ಉದ್ದೇಶದಿಂದ ಬಸ್‌ನ ಬಾಗಲಿನ ಬಳಿ ನಿಂತ್ತಿದ್ದ ಮೋಹಿತ್ ಅಯತಪ್ಪಿ ಬಸ್ ನಿಂದ ಕೆಳಗೆ ಬಿದಿದ್ದು ಈ ವೇಳೆ ಬಸ್ ಹಿಂಬದಿ ಚಕ್ರ ಮೋಹಿತನ ತಲೆ ಮೇಲೆ ಹರಿದ ಪರಿಣಾಮ ಸ್ಥಳದಲ್ಲೇ ಆತ ಸಾವನಪ್ಪಿದ್ದಾನೆ.

ಘಟನೆ ಸಂಭವಿಸದ ತಕ್ಷಣವೇ ಬಸ್ ಚಾಲಕ ಬಸ್ ಅಲ್ಲೇ ನಿಲ್ಲಿಸಿ ಅಲ್ಲಿಂದ ಪರಾರಿಯಾಗಿದ್ದು ನಂತರ ಚಾಲಕನೇ ಮೋಹಿತನ ತಂದೆ ರಾಮಕೃಷ್ಣ ಅವರಿಗೆ ದೂರುವಾಣಿ ಕರೆ ಮಾಡಿ ವಿಷಯ ತಿಳಿಸಿದ್ದಾನೆ ಎನ್ನಲಾಗಿದೆ.

ಬಸ್‌ನಲ್ಲಿ ಅಯಾ ಇರಲಿಲ್ಲ: ಬಿಜಿಎಸ್ ಶಾಲೆಯ ಎಲ್ಲಾ ಶಾಲಾ ಬಸ್‌ಗಳಿಗೆ ಕೇವಲ ಚಾಲಕ ಮಾತ್ರ ಇದ್ದಾನೆ. ಆದರೆ ಮಕ್ಕಳಿಗೆ ಬಸ್ ಹತ್ತಿಸುವ ಇಳಿಸುವ ಕೆಲಸ ಮಾಡಲು ಬಸ್ ಗಳಲ್ಲಿ ಅಯಾಗಳೇ ಇಲ್ಲದಿರುವುದು ಈ ಘಟನೆ ನಡೆಯಲು ಕಾರಣವಾಗಿದೆ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರತಿಭಟನೆ: ಶಾಲಾ ಅಡಳಿತ ಮಂಡಳಿಯ ನಿರ್ಲಕ್ಷ್ಯ ಬಾಲಕನ ಸಾವಿಗೆ ಕಾರಣವಾಗಿದೆ ಎಂದು ಪೋಷಕರು ಆಕ್ರೋಶಗೊಂಡು ಬಾಲಕನ ಶವದೊಂದಿಗೆ ಶಾಲಾ ಅವರಣದಲ್ಲಿ ಪತ್ರಿಭಟನೆ ನಡೆಸಿದರು.