* ಎಸ್.ಎಸ್. ಕಳೆದಿಮಠ, ಡಿಡಿಪಿಐ
ಸಂಪೂರ್ಣ ಶಿಥಿಲಾವಸ್ಥೆಗೆ ತಲುಪಿರುವ ಶಾಲಾ ಕೊಠಡಿಗಳನ್ನು ಬಳಕೆ ಮಾಡದಂತೆ ಸೂಚಿಸಲಾಗಿದೆ. 173 ಕೊಠಡಿಗಳನ್ನು ನೆಲಸಮ ಮಾಡಿ ಪುನರ್ ನಿರ್ಮಾಣ ಮಾಡಬೇಕಿದೆ. ಕೊಠಡಿಗಳ ದುರಸ್ತಿ ಕಾರ್ಯಕ್ಕೆ ಸಿಎಸ್ಆರ್ ಅನುದಾನ ಬಳಕೆ ಮಾಡುವ ನಿಟ್ಟಿನಲ್ಲಿ ಕ್ರಿಯಾ ಯೋಜನೆ ಸಿದ್ಧಪಡಿಸಲಾಗಿದೆ. ಆದಷ್ಟು ಶೀಘ್ರ ದುರಸ್ತಿ ಕಾರ್ಯ ನಡೆಸಲಾಗುವುದು.
ಶಾಲೆ ಆರಂಭದಲ್ಲಿ ಮಾತ್ರ ಶಿಕ್ಷಣ ಇಲಾಖೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಶಾಲೆ ಕೊಠಡಿಗಳ ಸ್ಥಿತಿ ಕುರಿತು ನೆನಪಾಗುತ್ತದೆ. ಇದೇ ಕಾರಣಕ್ಕೆ ಕೊಠಡಿಗಳು ದುರಸ್ತಿ ಕಾಣುತ್ತಿಲ್ಲ. ಕಳೆದ ವರ್ಷ 338 ಕೊಠಡಿಗಳು ನೆಲಸಮ ಮಾಡಬೇಕಿತ್ತು. ಆದರೆ ಈ ವರ್ಷ ಆ ಸಂಖ್ಯೆ 173ಕ್ಕೆ ಏರಿದೆ. ಹೀಗಾಗಿ ಇಡೀ ಜಿಲ್ಲೆಯಲ್ಲಿನ ಶಾಲೆ ಕೊಠಡಿಗಳ ದುರಸ್ತಿ, ಪುನರ್ ನಿರ್ಮಾಣಕ್ಕೆ ಒಂದೇ ಬಾರಿಗೆ ಕ್ರಿಯಾ ಯೋಜನೆ ಸಿದ್ಧಪಡಿಸಿ ದುರಸ್ತಿ ಕಾರ್ಯ ನಡೆಸಬೇಕು. ಇಲ್ಲವಾದಲ್ಲಿ ವರ್ಷದಿಂದ ವರ್ಷಕ್ಕೆ ಶಿಥಿಲಾವಸ್ಥೆ ಕೊಠಡಿಗಳ ಸಂಖ್ಯೆ ಹೆಚ್ಚಳವಾಗುವುದು ನಿಶ್ಚಿತ.
ಜಿಲ್ಲೆಯಲ್ಲಿನ ಶಾಲೆಗಳ 173 ಕೊಠಡಿಗಳು ಹಾಳಾಗಿದ್ದು ನೆಲಸಮಗೊಳಿಸಿ ಪುನರ್ ನಿರ್ಮಾಣ ಮಾಡಬೇಕಿದೆ. ಕಲಘಟಗಿ, ಧಾರವಾಡ ನಗರ, ಗ್ರಾಮೀಣ ಭಾಗದಲ್ಲಿ ಅತೀ ಹೆಚ್ಚು ಕೊಠಡಿಗಳು ದುರಸ್ತಿ ಆಗಬೇಕಿದೆ. ಈ ಎಲ್ಲ ದುರಸ್ತಿ ಕಾರ್ಯಕ್ಕೆ 15.38 ಕೋಟಿ ರೂ. ಅನುದಾನ ಬೇಕಿದೆ.
ಜಿಲ್ಲೆಯಲ್ಲಿ 735 ಸರ್ಕಾರಿ ಪ್ರಾಥಮಿಕ ಹಾಗೂ 112 ಪ್ರೌಢ ಶಾಲೆಗಳು ಸೇರಿ 847 ಶಾಲೆಗಳಿವೆ. ಈ ಶಾಲೆಗಳ ಸುಮಾರು 5 ಸಾವಿರಕ್ಕೂ ಹೆಚ್ಚು ಕೊಠಡಿಗಳಲ್ಲಿ 1490 ಕೊಠಡಿಗಳು ಮಾತ್ರ ಸುಸ್ಥಿತಿಯಲ್ಲಿವೆ. ಉಳಿದಂತೆ 259 ಕೊಠಡಿಗಳು ಸಣ್ಣಪುಟ್ಟ ದುರಸ್ತಿ, 580 ಕೊಠಡಿಗಳು ಹೆಚ್ಚಿನ ಪ್ರಮಾಣದಲ್ಲಿ ದುರಸ್ತಿ ಆಗಬೇಕಿದೆ.
ಪ್ರತಿ ವರ್ಷ ಮಳೆಯಿಂದ ಜಿಲ್ಲೆಯಲ್ಲಿನ ಸರ್ಕಾರಿ ಶಾಲೆಗಳ ಸಾಕಷ್ಟು ಕೊಠಡಿಗಳು ಹಾಳಾಗುತ್ತಿವೆ. ಅವುಗಳ ದುರಸ್ತಿಗೆ ತಕ್ಷಣದಲ್ಲಿ ಕ್ರಮವಾಗದ ಕಾರಣ ಅವು ವರ್ಷದಿಂದ ವರ್ಷಕ್ಕೆ ಮತ್ತಷ್ಟು ಶಿಥಿಲಾವಸ್ಥೆಗೆ ತಲುಪುತ್ತಿವೆ. ಕೆಲ ಕೊಠಡಿಗಳು ದುರಸ್ತಿಗೂ ಯೋಗ್ಯವಾಗಿರದೆ ನೆಲಸಮ ಮಾಡುವ ಹಂತಕ್ಕೆ ತಲುಪಿವೆ. ಕೆಲ ಕಡೆಗಳಲ್ಲಿ ಯಂತಹ ಕೊಠಡಿಗಳಲ್ಲೇ ಮಕ್ಕಳು ಪಾಠ ಕೇಳುವಂತಾಗಿದೆ.
ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕ್ಷೀಣವಾಗುತ್ತಿದೆ ಎಂಬ ಮಾತು ಸದಾ ಕೇಳುತ್ತಿದೆ. ಆದರೆ ಆ ಸಂಖ್ಯೆ ಹೆಚ್ಚಿಸುವಂತೆ ಸಕಲ ಸೌಲಭ್ಯ ನೀಡಬೇಕು ಎಂಬ ಆಸ್ಥೆ ಮಾತ್ರ ನಮ್ಮ ಜನಪ್ರತಿನಿಧಿಗಳಲ್ಲಿ ಕಾಣುತ್ತಿಲ್ಲ. ಇದಕ್ಕೆ ಜಿಲ್ಲೆಯಲ್ಲಿನ ಸರ್ಕಾರಿ ಶಾಲೆಗಳ ಶಿಥಿಲಾವಸ್ಥೆ ಕೊಠಡಿಗಳೇ ಸಾಕ್ಷಿ.
ವಿಕ್ರಮ ನಾಡಿಗೇರ ಧಾರವಾಡ