ಜಿಲ್ಲೆ

ಶಾಲೆಯಲ್ಲಿ ತಗಡು ಹಾಕುತ್ತಿದ್ದ ವ್ಯಕ್ತಿ ಮೇಲಿಂದ ಬಿದ್ದು ಗಾಯ

ರಾಣೆಬೆನ್ನೂರ: ಶಾಲೆಯ ಒಳಾಂಗಣದಲ್ಲಿ ತಡಗು ಹಾಕುತ್ತಿದ್ದ ವ್ಯಕ್ತಿ ಅಲ್ಲಿಂದ ಬಿದ್ದು ತೀವ್ರವಾಗಿ ಗಾಯಗೊಂಡ ಘಟನೆ ತಾಲೂಕಿನ ಕರೂರ ಗ್ರಾಮದ ಬಳಿಯ ಏಜು ಏಷ್ಯಾಯಾ ಇಂಟರ್ ನ್ಯಾಷನಲ್ ರೆಸಿಡೆನ್ಸಿಯಲ್ ಸ್ಕೂಲ್‌ನಲ್ಲಿ ನಡೆದಿದ್ದು, ಈ ಕುರಿತು ಶಾಲೆಯ ಆಡಳಿತ ಮಂಡಳಿಯವರ ಮೇಲೆ ಪ್ರಕರಣ ದಾಖಲಾಗಿದೆ.
ಸವಣೂರ ತಾಲೂಕಿನ ಹತ್ತಿಮತ್ತೂರ ಗ್ರಾಮದ ಪರಸಪ್ಪ ಭಜಂತ್ರಿ (56) ಗಾಯಗೊಂಡವರು. ಶಾಲೆಯ ಆಡಳಿತ ಮಂಡಳಿ ಉಸ್ತುವಾರಿ ಸಹನಾ ಹಾಗೂ ಸಂತೋಷ ಎಂಬುವರ ವಿರುದ್ಧ ದೂರು ದಾಖಲಾಗಿರುವುದು.
ಈ ಕುರಿತು ದೂರು ದಾಖಲಿಸಿರುವ ಬಸವರಾಜ ಭಜಂತ್ರಿ ಎಂಬುವರು, ಪರಸಪ್ಪ ಶಾಲೆಯ ಒಳಾಂಗಣದಲ್ಲಿ ಬೆಳಕಿಗಾಗಿ 3ನೇ ಅಂತಸ್ತಿನಲ್ಲಿ ಟ್ರಾನ್ಸ್‌ಪರೆಂಟ್ ತಗಡುಗಳನ್ನು ಹಾಕುತ್ತಿದ್ದ ಸಮಯದಲ್ಲಿ ಜಾರಿ 2ನೇ ಅಂತಸ್ತಿಗೆ ಬಂದು ಬಿದ್ದಿದ್ದಾನೆ. ಆದರೆ, ಈ ವಿಷಯವನ್ನು ಪೊಲೀಸರಿಗೆ ತಿಳಿಸಬೇಡ. ತಿಳಿಸಿದರೆ ಜೀವ ಸಹಿತಿ ಬೀಡುವುದಿಲ್ಲ ಎಂದು ಶಿಕ್ಷಣ ಸಂಸ್ಥೆಯವರು ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾನೆ.
ಈ ಕುರಿತು ಕುಮಾರಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.